ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಸಾರ್ವಕಾಲಿಕ ಎತ್ತರವನ್ನು ದಾಖಲಿಸಿದವು. ನಿಫ್ಟಿ ಇದೇ ಮೊದಲ ಬಾರಿಗೆ 9,500ರ ಗಡಿಯನ್ನು ದಾಟಿ ದಾಖಲೆ ಮಾಡಿತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟಿನಲ್ಲಿ 260.48 ಅಂಕಗಳ ಮುನ್ನಡೆಯನ್ನು ದಾಖಲಿಸಿ 30,582.60 ಅಂಕಗಳ ಮಟ್ಟಕ್ಕೇರುವ ಮೂಲಕ ಅತ್ಯುತ್ತಮ ದೃಢತೆಯನ್ನು ತೋರಿದೆ.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇದೇ ಮೊದಲ ಬಾರಿಗೆ 9,500 ಅಂಕಗಳನ್ನು ದಾಟುವ ಮೂಲಕ ಸಾರ್ವಕಾಲಿಕ ಎತ್ತರವನ್ನು ತಲುಪಿದ ಸಾಧನೆಯನ್ನು ಮಾಡಿದೆ. ನಿಫ್ಟಿ ಇಂದು ಮಂಗಳವಾರದ ವಹಿವಾಟನ್ನು 66.85 ಅಂಕಗಳ ಏರಿಕೆಯೊಂದಿಗೆ 9,512.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಸುಧಾರಿಸುತ್ತಿರುವುದು, ನೇರ ವಿದೇಶೀ ಹೂಡಿಕೆ ದೊಡ್ಡ ಪ್ರಮಾಣದಲ್ಲಿ ನಿರಂತರವಾಗಿ ಹರಿದು ಬರುತ್ತಿರುವುದು, ಈ ಬಾರಿಯ ಮುಂಗಾರು ಮಳೆ ಚೆನ್ನಾಗಿರುವುದೆಂಬ ಭವಿಷ್ಯ ವಾಣಿ, ಕಂಪೆನಿಗಳ ನಾಲ್ಕನೇ ತ್ತೈಮಾಸಿಕ ಫಲಿತಾಂಶ ನಿರೀಕ್ಷೆಗಿಂತ ಚೆನ್ನಾಗಿರುವುದು ಮುಂತಾಗಿ ಹಲವಾರು ಕಾರಣಗಳು ಶೇರು ಮಾರುಕಟ್ಟೆಯ ನೆಗೆತಕ್ಕೆ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ.
ಇಂದಿನ ವಹಿವಾಟಿನ ಟಾಪ್ ಗೇನರ್‌ಗಳು : ಹೀರೋ ಮೋಟೋ ಕಾರ್ಪ್, ಎಸಿಸಿ, ಭಾರ್ತಿ ಏರ್‌ಟೆಲ್, ಟಿಸಿಎಸ್, ಬ್ಯಾಂಕ್ ಆಫ್ ಬರೋಡ.
ಟಾಪ್ ಲೂಸರ್‌ಗಳು ಕೋಟಕ್ ಮಹೀಂದ್ರ, ಹಿಂಡಾಲ್ಕೊ, ಒಎನ್‌ಜಿಸಿ, ಮಹಿಂದ್ರ ಮತ್ತು ಕೋಲ್ ಇಂಡಿಯಾ.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,426 ಶೇರುಗಳು ಮುನ್ನಡೆ ಸಾಧಿಸಿದರೆ 1,361 ಶೇರುಗಳು ಹಿನ್ನಡೆಗೆ ಗುರಿಯಾದವು; 178 ಶೇರುಗಳು ಇದ್ದಲ್ಲೇ ಉಳಿದವು.