ಮುಂಬಯಿ : ಎರಡು ದಿನಗಳ ಸೋಲಿನ ಬಳಿಕ ಲಾಭದೆಡೆಗೆ ಹೊರಳಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 122 ಅಂಕಗಳ ಏರಿಕೆಯನ್ನು ದಾಖಲಿಸಿತು.
ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಅನಿಶ್ಚಿತತೆ ಇರುವ ನಡುವೆಯೇ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದನ್ನು ಧನಾತ್ಮಕವಾಗಿ ತೆಗೆದುಕೊಂಡಿರುವ ಮುಂಬಯಿ ಶೇರು ಪೇಟೆಯಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆ ಸಂಸ್ಥೆಗಳು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡವು.
ಕನ್ಸೂಮರ್ ಡ್ಯುರೇಬಲ್ಸ್, ರಿಯಲ್ಟಿ, ಮೆಟಲ್, ಪವರ್ ಮತ್ತು ಬ್ಯಾಂಕಿಂಗ್ ಸೇರಿದಂತೆ ಬಹುತೇಕ ಪ್ರಮುಖ ರಂಗಗಳ ಶೇರುಗಳಿಗೆ ಇಂದು ಉತ್ತಮ ಖರೀದಿ ಬೇಡಿಕೆ ವ್ಯಕ್ತವಾಯಿತು.
ಹಾಗಿದ್ದರೂ ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ಗಳಿಕೆಗಳನ್ನೆಲ್ಲ ಬಿಟ್ಟುಕೊಟ್ಟು 95.01 ಅಂಕಗಳ ನಷ್ಟದೊಂದಿಗೆ 35,929.87 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 28.60 ಅಂಕಗಳ ನಷ್ಟದೊಂದಿಗೆ 10,712.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಟಾಟಾ ಮೋಟರ್, ರಿಲಯನ್ಸ್, ಎಚ್‌ಯುಎಲ್, ಐಸಿಐಸಿಐ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 10 ಪೈಸೆಯಷ್ಟು ಸುಧಾರಿಸಿ 67.70 ರೂ. ಮಟ್ಟದಲ್ಲಿ ದಾಖಲಾಯಿತು.