ಹೊಸದಿಲ್ಲಿ : ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 509.99 ಅಂಕಗಳ ಭಾರೀ ಏರಿಕೆಯನ್ನು ದಾಖಲಿಸಿ ಇದೇ ಮೊದಲ ಬಾರಿಗೆ 33,117.33 ಅಂಕಗಳ ಮಟ್ಟಕ್ಕೇರಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 132.85 ಅಂಕಗಳ ಅಮೋಘ ಏರಿಕೆಯನ್ನು ದಾಖಲಿಸಿ ದಿನದ ಆರಂಭಿಕ ವಹಿವಾಟಿನಲ್ಲಿ 10,340.55 ಅಂಕಗಳ ಮಟ್ಟವನ್ನು ತಲುಪಿದೆ.
ಬ್ಯಾಂಕುಗಳ ಮರು ಬಂಡವಳೀಕರಣಕ್ಕಾಗಿ ಸರಕಾರ ಅಭೂತಪೂರ್ವ ಎನ್ನುವ 2.11 ಲಕ್ಷ ಕೋಟಿ ರೂ. ಒದಗಿಸುವುದಾಗಿ ಹೇಳಿರುವುದೇ ಸೆನ್ಸೆಕ್ಸ್ ಮತ್ತು ನಿಫ್ಟಿಯ ಭರ್ಜರಿ ಜಿಗಿತಕ್ಕೆ ಮುಖ್ಯ ಕಾರಣವಾಗಿದೆ. ಅಂತೆಯೇ ಬ್ಯಾಂಕಿಂಗ್ ರಂಗದ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಎತ್ತರವನ್ನು ತಲುಪಿವೆ.
ಇಂದು ಬುಧವಾರ ಬೆಳಗ್ಗೆ 32,995.28 ಅಂಕಗಳ ಮಟ್ಟದಲ್ಲಿ ಆರಂಭಗೊಂಡ ಸೆನ್ಸೆಕ್ಸ್, ಕೆಲವೇ ಹೊತ್ತಿನೊಳಗೆ 33,117.33 ಅಂಕಗಳ ಸಾರ್ವಕಾಲಿಕ ಎತ್ತರ ದಾಖಲೆ ಮಟ್ಟವನ್ನು ತಲುಪಿತು. ಒಂದು ಹಂತದಲ್ಲಿ ಅದು 32,950.45 ಅಂಕಗಳ ತಳಮಟ್ಟವನ್ನು ಕಂಡಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಎಸ್‌ಬಿಐ ಶೇರು ಶೇ.20ರಷ್ಟು ಏರಿಕೆಯನ್ನು ಕಂಡಿತು. ಇದನ್ನು ಮೀರಿಸುವ ರೀತಿಯಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಶೇ.33ರಷ್ಟು ಏರಿಕೆಯನ್ನು ದಾಖಲಿಸಿತು.