ಮುಂಬಯಿ: ವಿದೇಶಿ ಬಂಡವಾಳದ ಒಳ ಹರಿವು ಹೆಚ್ಚುತ್ತಿದ್ದು ಕಂಪೆನಿಗಳ ಮೊದಲ ತ್ತೈಮಾಸಿಕ ಫಲಿತಾಂಶ ಆಶಾದಾಯಕವಾಗಿರುವುದೆಂಬ ಕಾರಣಕ್ಕೆ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 32,000 ಅಂಕಗಳ ಗಡಿಯನ್ನು ದಾಟಿ ಹೂಡಿಕೆದಾರರಲ್ಲಿ ಹೊಸ ವಿಶ್ವಾಸವನ್ನು ತುಂಬಿತು.
ಆದರೆ ಇತರ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕತೆ ತೋರಿ ಬಂದಿರುವ ಹೊರತಾಗಿಯೂ ಸೆನ್ಸೆಕ್ಸ್ ಬೆಳಗ್ಗೆ 10.30ರ ಹೊತ್ತಿಗೆ 13.70 ಅಂಕಗಳ ನಷ್ಟಕ್ಕೆ ಗುರಿಯಾಗಿ 31,941.65 ಅಂಕಗಳ ಮಟ್ಟಕ್ಕೆ ಜಾರಿತು.
ಇದೆ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಏಳು ಅಂಕಗಳ ನಷ್ಟಕ್ಕೆ ಗುರಿಯಾಗಿ 9,892.60 ಅಂಕಗಳ ಮಟ್ಟದಲ್ಲಿ ವ್ಯವಹರಿಸುತ್ತಿತ್ತು.
ಕೋಟಕ್ ಮಹೀಂದ್ರ, ಎಕ್ಸಿಸ್ ಬ್ಯಾಂಕ್, ಐಟಿಸಿ, ಒಎನ್‌ಜಿಸಿ ಮತ್ತು ರಿಲಯನ್ಸ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು. ಟಾಪ್ ಗೇನರ್‌ಗಳಾಗಿ ಒಎನ್‌ಜಿಸಿ, ಅಂಬುಜಾ ಸಿಮೆಂಟ್ಸ್, ಕೋಟಕ್ ಮಹೀಂದ್ರ, ಎಕ್ಸಿಸ್ ಬ್ಯಾಂಕ್, ಕೋಲ್ ಇಂಡಿಯಾ ಕಾಣಿಸಿಕೊಂಡವು.
ಟಾಟಾ ಸ್ಟೀಲ್, ಹೀರೋ ಮೋಟೋಕಾರ್ಪ್, ಏಶ್ಯನ್ ಪೇಂಟ್ಸ್, ಇನ್‌ಫೋಸಿಸ್, ಈಶರ್ ಮೋಟರ್ ಶೇರುಗಳು ಟಾಪ್ ಲೂಸರ್ ಪಟ್ಟಿಗೆ ಸೇರಿದವು.
FPI ಗಳು ನಿನ್ನೆ ಬುಧವಾರ 1,046.55 ಕೋಟಿ ರೂ.ಗಳ ಹೂಡಿಕೆಯನ್ನು ಮಾಡುವ ಮೂಲಕ ಮುಂಬಯಿ ಶೇರು ಪೇಟೆಗೆ ಚುರುಕು ಮುಟ್ಟಿಸಿದ್ದವು.