Advertisement

ಎಲ್ಲೆಲ್ಲೂ ಬಿಎಸ್‌6 ವಾಹನಗಳದ್ದೇ ಮಾತು…

10:59 PM Feb 27, 2020 | mahesh |

ಮಾರುಕಟ್ಟೆಗೆ ದಿನಕ್ಕೊಂದು ಹೊಸ ಉತ್ಪನ್ನ ಆಗಮನವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾರು ಉದ್ಯಮದಲ್ಲಿ ಸರಕಾರದ ನಿರ್ದೇಶನದ ಮೇರೆಗೆ ಬಿಎಸ್‌6 ಎಂಜಿನ್‌ ಇರುವ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಬೇಕು ಎಂದು ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಇಂದು ಗ್ರಾಹಕರು ಬಿಎಸ್‌6 ಕಾರು ಖರೀದಿಗೆ ಆಸಕ್ತಿ ವಹಿಸುತ್ತಿದ್ದಾರೆ. ಹೀಗಾಗಿ ಬಿಎಸ್‌6 ಕಾರುಗಳ ಬೇಡಿಕೆ ಮತ್ತು ಅವಕಾಶಗಳ ಬಗೆಗಿನ ಮಾಹಿತಿ ಇಲ್ಲಿದೆ.

Advertisement

ಮಾರುಕಟ್ಟೆಯಲ್ಲಿ ಹೊಸತುಗಳ ಆಗಮನ ನಿತ್ಯ ನಿರಂತರ. ವಾಹನಗಳಲ್ಲಿಯೂ ಹೊಸ ಹೊಸ ಸಾಮರ್ಥ್ಯ, ಹೊಸ ಫೀಚರ್‌ಗಳನ್ನು ಹೊಂದಿರುವ ವಾಹನಗಳು ಬರುವುದು ಸಾಮಾನ್ಯ. ಆ ಹೊಸ ವಾಹನಗಳತ್ತ ಜನಸಾಮಾನ್ಯರ ಚಿತ್ತ ತಿರುಗುತ್ತದೆ.

ವಾಹನ ತಯಾರಿಕೆ ಕಂಪೆನಿಗಳೇ ತಮ್ಮ ಗ್ರಾಹಕರಿಗೆ ಹೊಸ ಮಾದರಿಯ ಅವಕಾಶಗಳುಳ್ಳ ವಾಹನ ತಯಾರಿಸಿ ನೀಡುವುದರೊಂದಿಗೆ ಕೆಲವೊಮ್ಮೆ ಸರಕಾರಗಳ ನಿಯಮಗಳಿಂದಾಗಿಯೂ ಖರೀದಿಯಲ್ಲಿ ಬದಲಾವಣೆಗಳಾಗುತ್ತವೆ. ಅಂತಹ ಬದಲಾವಣೆಗಳ ಪೈಕಿ ಬಿಎಸ್‌6 ಎಂಜಿನ್‌ ಹೊಂದಿರುವ ವಾಹನಗಳೂ ಒಂದು. ವಾಹನಗಳ ಹೊಗೆಯಿಂದಾಗಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಿಎಸ್‌6 ಎಂಜಿನ್‌ ಪ್ರೇರಿತ ವಾಹನಗಳನ್ನೇ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ವಾಹನ ತಯಾರಿಕೆ ಕಂಪೆನಿಗಳಿಗೆ ಸರಕಾರ ನಿರ್ದೇಶಿಸಿದ್ದ ಹಿನ್ನೆಲೆಯಲ್ಲಿ ಬಿಎಸ್‌6 ಎಂಜಿನ್‌ ಪ್ರೇರಿತ ವಾಹನಗಳು ಮಹತ್ವ ಪಡೆದುಕೊಂಡಿವೆ.

ಎಲ್ಲೆಲ್ಲೂ ಬಿಎಸ್‌6 ಮಾತು
ಈಗ ಎಲ್ಲೆಲ್ಲೂ ಬಿಎಸ್‌6 ಎಂಜಿನ್‌ ಪ್ರೇರಿತ ವಾಹನಗಳದ್ದೇ ಮಾತುಕತೆ. ದೇಶದಲ್ಲಿ ವಾಯುಮಾಲಿನ್ಯ ತಡೆಯಲು ಕೇಂದ್ರ ಸರಕಾರವು ಭಾರತ್‌ ಸ್ಟೇಜ್‌ (ಬಿಎಸ್‌)ನಿಯಮಾವಳಿಯನ್ನು ಜಾರಿಗೊಳಿಸಿದ ಬಳಿಕ ಇಲ್ಲಿವರೆಗೆ ಜಾರಿಯಲ್ಲಿದ್ದ ಬಿಎಸ್‌-4 ಇಂಧನ ಬಳಕೆಯನ್ನು ನಿಷೇಧಿಸಿ ಬಿಎಸ್‌6 ಇಂಧನ ಬಳಕೆಗೆ ಆದೇಶಿಸಿದೆ. ಎ. 1ರಿಂದ ಬಿಎಸ್‌6 ಇಂಧನ ಹೊರುವ ಎಂಜಿನ್‌ಗಳನ್ನು ಅಳವಡಿಸಿ ಎಲ್ಲ ವಾಹನ ತಯಾರಿಕೆ ಕಂಪೆನಿಗಳು ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿವೆ. ಹೀಗಾಗಿ ಮಾರುಕಟ್ಟೆಯಲ್ಲಿಯೂ ಬಿಎಸ್‌ 6 ಎಂಜಿನ್‌ ಹೊಂದಿರುವ ಕಾರುಗಳ ಬಗ್ಗೆ ವಿಚಾರಣೆಗಳು ಶುರುವಾಗಿದ್ದು, ಹಲವರು ಖರೀದಿಯಲ್ಲಿ ತೊಡಗಿದ್ದಾರೆ.

ಸೆಪ್ಟಂಬರ್‌ನಿಂದಲೇ ಮಾರಾಟ ಶುರು
ನಗರದ ಬಹುತೇಕ ವಾಹನ ಮಾರಾಟ ಶೋರೂಂಗಳಲ್ಲಿ ಸೆಪ್ಟಂಬರ್‌ ತಿಂಗಳಿನಿಂದಲೇ ಬಿಎಸ್‌ 6 ವಾಹನಗಳ ಮಾರಾಟ ಶುರು ಮಾಡಲಾಗಿದೆ. ಪೆಟ್ರೋಲ್‌ಚಾಲಿತ ವಾಹನಗಳಿಗೆ ಬೇಡಿಕೆ ಜಾಸ್ತಿ ಇದ್ದರೆ, ಡೀಸೆಲ್‌ ಚಾಲಿತ ವಾಹನಗಳಿಗೆ ಇನ್ನೂ ಬೇಡಿಕೆ ಕುದುರಿಲ್ಲ. ಹಾಗಾಗಿ ಸದ್ಯಕ್ಕೆ ಡೀಸೆಲ್‌ ಚಾಲಿತ ಬಿಎಸ್‌ 6 ವಾಹನಗಳ ಮಾರಾಟ ನಗರದ ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿಗೆ ಸ್ಥಗಿತಗೊಂಡಿದೆ.

Advertisement

ಬಿಎಸ್‌-4 ಖರೀದಿ ಕಡಿಮೆ
ಎಪ್ರಿಲ್‌ ತಿಂಗಳಿನಿಂದ ಬಿಎಸ್‌6 ವಾಹನಗಳನ್ನೇ ಓಡಿಸಬೇಕೆಂಬ ನಿಯಮವಿರುವುದರಿಂದ ಗ್ರಾಹಕರು ಈ ವಾಹನಗಳತ್ತ ಮುಖ ಮಾಡಿದ್ದಾರೆ. ಹಳೆ ಮಾದರಿಯ ವಾಹನಗಳನ್ನು ಖರೀದಿಸುವುದಕ್ಕೆ ಒಲವು ತೋರುತ್ತಿಲ್ಲ. ಬಿಎಸ್‌-4 ಎಂಜಿನ್‌ ಪ್ರೇರಿತ ವಾಹನಗಳಿಗೆ ಸುಮಾರು ನಾಲ್ಕು ತಿಂಗಳಿನಿಂದ ಬೇಡಿಕೆ ಕುಸಿಯುತ್ತಿದ್ದು, ಖರೀದಿದಾರರು ಒಲವು ತೋರುತ್ತಿಲ್ಲ. ಇದರ ಬದಲಾಗಿ ಬಿಎಸ್‌6 ಎಂಜಿನ್‌ ಪ್ರೇರಿತ ವಾಹನಗಳ ಬಗ್ಗೆ ನಾಲ್ಕೈದು ತಿಂಗಳಿನಿಂದಲೇ ವಿಚಾರಣೆಗಳು ಶುರುವಾಗಿವೆ. ಬಹುತೇಕ ಗ್ರಾಹಕರು ಈಗಾಗಲೇ ಇಂತಹ ವಾಹನಗಳನ್ನು ಕೊಂಡೊಯ್ದಿದ್ದು, ಹಲವರು ಬುಕ್ಕಿಂಗ್‌ ಮಾಡಿದ್ದಾರೆ ಎನ್ನುತ್ತಾರೆ ಅವರು.

ಈ ನಡುವೆ ಮಾ. 31ರೊಳಗೆ ನೋಂದಣಿ ಮಾಡಿಕೊಳ್ಳುವ ಬಿಎಸ್‌4 ಇಂಧನ ಪ್ರೇರಿತ ವಾಹನಗಳಿಗೆ ಅನುಮತಿ ಇರುವುದರಿಂದ ಹಳೆಯ ವಾಹನಗಳ ಮಾರಾಟಕ್ಕೆ ಶೋರೂಂಗಳಲ್ಲಿ ವಿಶೇಷ ದರ ಕಡಿತ ಮಾರಾಟ ಯೋಜನೆಯನ್ನೂ ಹಮ್ಮಿಕೊಂಡಿರುವುದರಿಂದ ಸ್ವಲ್ಪ ಮಾರಾಟ ಕಾಣುತ್ತಿದೆ ಎನ್ನುತ್ತಾರೆ ಶೋರೂಂ ಸಿಬಂದಿ.

ಹೊಸತರ ಹೊಸತನ
ಯಾವುದೇ ವಾಹನ ಹೊಸದಾಗಿ ಮಾರುಕಟ್ಟೆಗೆ ಬಂದಾಗ ಅದರಲ್ಲೊಂದಷ್ಟು ಗ್ರಾಹಕಸ್ನೇಹಿ ಫೀಚರ್‌ಗಳಿರುತ್ತವೆ. ಹಾಗೆಯೇ ಬಿಎಸ್‌6 ಎಂಜಿನ್‌ ವಾಹನಗಳಲ್ಲಿಯೂ ಇವೆ. ಬಿಎಸ್‌6 ಎಂಜಿನ್‌ ಪ್ರೇರಿತ ವಾಹನಗಳಲ್ಲಿ ಮಾಲಿನ್ಯ ಹೊರಸೂಸುವಿಕೆ ಪ್ರಮಾಣ ಕಡಿಮೆಯಾಗುವುದರೊಂದಿಗೆ ಶೇ. 10ರಷ್ಟು ಮೈಲೇಜ್‌ ಪ್ರಮಾಣ ಹೆಚ್ಚಳವಾಗಲಿದೆ. ವಾಹನ ಖರೀದಿಗಾರರು ಮೈಲೇಜ್‌ಗೆ ಹೆಚ್ಚು ಗಮನ ಕೊಡುವುದರಿಂದ ಈ ಬದಲಾವಣೆ ಗ್ರಾಹಕರಿಗೆ ಸಂತಸ ತರಲಿದೆ ಎಂಬುದು ಮಾರಾಟಗಾರರ ಮಾತು.

ಗೂಗಲ್‌ ಸರ್ಚ್‌, ಪ್ರಶ್ನೆ ಮೇಲೆ ಪ್ರಶ್ನೆ
ಈಗಾಗಲೇ ಬಿಎಸ್‌6 ಎಂಜಿನ್‌ ಪ್ರೇರಿತ ವಾಹನಗಳು ಶೋ ರೂಂಗಳಲ್ಲಿ ಇರುವುದರಿಂದ ಜನರು ಇದನ್ನು ಖರೀದಿಸುತ್ತಿದ್ದಾರೆ. ಜತೆಗೆ ಜನರಲ್ಲಿ ಒಂದಷ್ಟು ಕುತೂಹಲವೂ ಇದ್ದು, ಖರೀದಿ ವೇಳೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಜನರು ಗೂಗಲ್‌ನಲ್ಲಿ ಈ ವಾಹನಗಳ ಸಮಗ್ರ ಮಾಹಿತಿ ಸರ್ಚ್‌ ಮಾಡಿಯೇ ಶೋರೂಂಗೆ ಬರುತ್ತಾರೆ. ಶೋರೂಂನಲ್ಲಿಯೂ ಹಲವಾರು ರೀತಿಯ ಗೊಂದಲಗಳನ್ನು ನಿವಾರಿಸಿಕೊಳ್ಳುತ್ತಾರೆ. ಈಗಾಗಲೇ ಬುಕ್ಕಿಂಗ್‌ ಮಾಡಿದವರ ಪೈಕಿ ಶೇ. 90ಕ್ಕೂ ಹೆಚ್ಚು ಮಂದಿ ಬಿಎಸ್‌6 ಎಂಜಿನ್‌ ಪ್ರೇರಿತ ಕಾರುಗಳನ್ನೇ ಆಯ್ಕೆ ಮಾಡಿದ್ದಾರೆ ಎನ್ನುತ್ತಾರೆ ಕಾರು ಡೀಲರ್‌ ಸಂಸ್ಥೆಯೊಂದರ ಸಿಬಂದಿ ಪ್ರದೀಪ್‌.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next