ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾ ನ ಗೆದ್ದಂತೆಯೇ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಮ್ಮ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರು ಚುನಾವಣೆ ಮುಗಿಯುವವರೆಗೂ ಅವರವರ ಜಿಲ್ಲೆಗಳಲ್ಲಿ ಇದ್ದು ಕೆಲಸ ಮಾಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಎಲ್ಲಾ ಸಂಸದರ ಸಭೆ ಕರೆಯಲಾಗುತ್ತದೆ. ಒಂದೆರಡು ದಿನದಲ್ಲಿ ನಾನು ಎಲ್ಲಾ ಕ್ಷೇತ್ರಗಳ ಪ್ರವಾಸ ಆರಂಭಿಸುತ್ತೇನೆ ಎಂದರು.
ಇದನ್ನೂ ಓದಿ:ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?
ಕಾಂಗ್ರೆಸ್ ನವರೇ, ನಿಮ್ಮ ನಾಯಕರು ಯಾರು? ರಾಹುಲ್ ಗಾಂಧಿ ನರೇಂದ್ರ ಮೋದಿಗೆ ಸಮನಾಗಲು ಸಾಧ್ಯವೇ? ರಾಜ್ಯದಲ್ಲಿ ಕೆಲವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅವರದ್ದು ತಿರುಕನ ಕನಸು. ಕಾಂಗ್ರೆಸ್ 60-70ಕ್ಕೂ ಹೆಚ್ಚು ಸೀಟ್ ಗೆಲ್ಲಲು ಸಾಧ್ಯವಿಲ್ಲ ಎಂದ ಅವರು, ಶಿವಮೊಗ್ಗದಲ್ಲಿ ಮೊದಿ ಬಂದಾಗ ಎರಡು ಲಕ್ಷ ಜನ ನಿಲ್ಲಲು ಜಾಗವಿಲ್ಲದೆ ಹಿಂದೆ ಹೋಗಿದ್ದರು. ನಾವು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂದರು.
ಸರ್ವೇ ವರದಿ ಗಮನಿಸಿದ್ದೇನೆ. ಜನರ ನಾಡಿಮಿಡಿತ ನನಗೆ ಗೊತ್ತಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ನಾವು ಮೂರು ಸರ್ವೇ ಮಾಡಿದ್ದೇವೆ. ಎಲ್ಲ 130-140 ಬರುವುದೆಂದು ನಮ್ಮ ಸರ್ವೇ ವರದಿ ಹೇಳಿದೆ ಎಂದರು.
ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ನಿಂತ ನೆಲವೇ ಕುಸಿಯುತ್ತಿದೆ. ಅವರ ಗೆಲುವು ಕಷ್ಟ. ಟಿಕೆಟ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.