Advertisement

ಪರಿಶಿಷ್ಟ ವರ್ಗಕ್ಕೆ ಪ್ರತ್ಯೇಕ ಸಚಿವಾಲಯ: ಸಿಎಂ

10:07 AM Feb 10, 2020 | sudhir |

ದಾವಣಗೆರೆ: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂಬ ಪರಿಶಿಷ್ಟ ವರ್ಗದ ಬಹುದಿನಗಳ ಬೇಡಿಕೆಯ ಈಡೇರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ನ್ಯಾ| ನಾಗಮೋಹನ್‌ ದಾಸ್‌ ಆಯೋಗದ ವರದಿ ಸಲ್ಲಿಕೆ ಬಳಿಕ ಕ್ರಮ ಕೈಗೊಳ್ಳುವುದರ ಜತೆಗೆ ಪರಿಶಿಷ್ಟ ವರ್ಗದ ಶ್ರೇಯೋಭಿವೃದ್ಧಿ ಮತ್ತು ಕುಂದು ಕೊರತೆಗಳನ್ನು ಪರಿಹರಿಸಲು ಪ್ರತ್ಯೇಕ ಸಚಿವಾಲಯ ರಚಿಸುವುದಾಗಿ ಭರವಸೆ ನೀಡಿದ್ದಾರೆ.

Advertisement

ರವಿವಾರ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೊತ್ಸವದ ಬೃಹತ್‌ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗದ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ಈಗಾಗಲೇ ನೇಮಿಸಿರುವ ನ್ಯಾ|ನಾಗಮೋಹನ್‌ ದಾಸ್‌ ಆಯೋಗ ತನ್ನ ವರದಿಯನ್ನು ಅವಧಿಯೊಳಗೆ ಸಲ್ಲಿಸುವುದಾಗಿ ಸರಕಾರಕ್ಕೆ ಪತ್ರ ಬರೆದು ತಿಳಿಸಿದೆ. ವರದಿ ಸಲ್ಲಿಸಿದ ತತ್‌ಕ್ಷಣ ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಎಸ್ಟಿ ಸಮುದಾಯಕ್ಕೆ ಏನೇನು ಸಾಧ್ಯವೋ ಆ ಎಲ್ಲ ಸವಲತ್ತುಗಳನ್ನು ಕಲ್ಪಿಸುವುದಾಗಿ ಹೇಳಿದರು.

ಈಗಾಗಲೇ ಕೇಂದ್ರ ಸರಕಾರ ಜ.11ರಂದು ಪರಿವಾರ, ತಳವಾರ ಸಮುದಾಯವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರ್ಪಡೆ ಮಾಡಲು ಮುಂದಾಗಿದ್ದು, ಲೋಕಸಭೆಯಲ್ಲಿ ಅದು ಅನುಮೋದನೆ ಪಡೆಯಬೇಕಿದೆ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮೀಸಲಾತಿಯನ್ನು ಮತ್ತೆ 10 ವರ್ಷ ಮುಂದುವರಿಸಲು ಪ್ರಧಾನಿ ಮೋದಿ ನಿರ್ಧರಿಸಿರುವುದು ಈ ಜನಾಂಗಗಳ ಬಗ್ಗೆ ಹೊಂದಿರುವ ಕಾಳಜಿಗೆ ಸಾಕ್ಷಿ. ಅಲ್ಲದೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗಕ್ಕೆ ವಾಲ್ಮೀಕಿ ಸಮುದಾಯದ ಡಾ|ರಂಗರಾಜು ವನದುರ್ಗ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದು ಎಸ್ಟಿ ಸಮಾಜದ ಬಗ್ಗೆ ನಾನು ಇಟ್ಟಿರುವ ಕಳಕಳಿಯಾಗಿದೆ. ಮೇಲಾಗಿ ಸ್ವಾಮೀಜಿ ಮತ್ತು ಸಮಾಜದ ಒತ್ತಾಯದಂತೆ ರಾಜ್ಯದ ಎಸ್ಟಿ ಸಮುದಾಯದ ಶ್ರೇಯೋಭಿವೃದ್ಧಿ ಮತ್ತು ಕುಂದು ಕೊರತೆ ಪರಿಹರಿಸಲು ಬಹುದಿನಗಳ ಬೇಡಿಕೆಯಾದ ಪ್ರತ್ಯೇಕ ಸಚಿವಾಲಯ ರಚಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next