Advertisement
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾಗಿದ್ದ ಬಿಎಸ್ ವೈ ಬಳ್ಳಾರಿ ಮತ್ತು ಶಿವಮೊಗ್ಗ ಜೈಲಿನಲ್ಲಿದ್ದರು. 1988ರಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. 1983ರಲ್ಲಿ ಶಿಕಾರಿ ಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ನಂತರ ಒಟ್ಟು ಆರು ಬಾರಿ ಶಿಕಾರಿಪುರದ ಶಾಸಕರಾಗಿ, 7, 8, 9 10, 12, 13ನೇ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.
Related Articles
Advertisement
2007ರಲ್ಲಿ ಮೊದಲ ಬಾರಿ 7 ದಿನ ಸಿಎಂ ಗದ್ದುಗೆ:
ಯಡಿಯೂರಪ್ಪನವರು 2007ರ ನವೆಂಬರ್ 12ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ದಕ್ಷಿಣ ಭಾರತ ರಾಜ್ಯಗಳ ಬಿಜೆಪಿ ಪಕ್ಷದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಖಾತೆ ಹಂಚಿಕೆಯಿಂದ ಉಲ್ಬಣಗೊಂಡ ಬಿಕ್ಕಟ್ಟಿನಿಂದಾಗಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಂತ್ಯಗೊಂಡು, ಯಡಿಯೂರಪ್ಪನವರು ನವೆಂಬರ್ 19ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
2008ರಲ್ಲಿ 2ನೇ ಬಾರಿ ಸಿಎಂ-3ವರ್ಷ 66 ದಿನ ಆಡಳಿತ :
2008ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್, ಜೆಡಿಎಸ್ ಬೆಂಬಲದೊಂದಿಗೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಬಂಗಾರಪ್ಪನವರನ್ನು 45ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿದ್ದು, ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ರಚನೆಗೊಂಡಿತ್ತು. 2008ರ ಮೇ 30ರಂದು ಯಡಿಯೂರಪ್ಪನವರು 2ನೇ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು.
ತದನಂತರ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ನೀಡಿದ ತನಿಖಾ ವರದಿಯಲ್ಲಿ ಯಡಿಯೂರಪ್ಪನವರ ಹೆಸರಿತ್ತು. ಆ ನಿಟ್ಟಿನಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. 2011ರ ಜುಲೈ 31ರಂದು ಬಿಎಸ್ ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. 2011ರಲ್ಲಿ ಕರ್ನಾಟಕ ಜನತಾ ಪಕ್ಷವನ್ನು ಹುಟ್ಟುಹಾಕಿ, 2013ರ ಮೇನಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು.