ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ವಿಧಾನ ಪರಿಷತ್ ಬಿಜೆಪಿಯ ಸದಸ್ಯ ಲೆಹರ್‌ಸಿಂಗ್ ಅವರು ಮಾಜಿ
ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತರೂ ಆದ ಲೆಹರ್‌ಸಿಂಗ್ ಅವರು ದೇವೇಗೌಡರನ್ನು ಭೇಟಿ ಮಾಡಿದ್ದಾದರೂ ಯಾಕಿರಬಹುದು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ವಿವಿಧ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ದೇವೇಗೌಡರನ್ನು ಭೇಟಿ ಮಾಡಿದ ಲೆಹರ್‌ಸಿಂಗ್, ಕೆಲಕಾಲ ಚರ್ಚೆ
ನಡೆಸಿದರು.
ಲೆಹರ್‌ಸಿಂಗ್ ಅವರು, ಯಡಿಯೂರಪ್ಪ ಪರವಾಗಿ ದೇವೇಗೌಡರ ಭೇಟಿ ಮಾಡಿದ್ದಾರೋ, ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಭೇಟಿ ಮಾಡಿದ್ದಾರೋ ಎಂಬುದು ಖಚಿತಗೊಂಡಿಲ್ಲ.ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ ಪರ್ಯಾಯಕ್ಕೆ ನಾವು ಸಿದ್ಧ ಎಂಬ ಬಿಜೆಪಿ ಸಂದೇಶವನ್ನು ಹೊತ್ತು ಲೆಹರ್‌ಸಿಂಗ್ ದೇವೇಗೌಡರ ಬಳಿ ಹೋಗಿದ್ದರೆಂದು ಹೇಳಲಾಗಿದೆ. ಆದರೆ,ದೇವೇಗೌಡರು ಬಿಜೆಪಿಯ ಪ್ರಸ್ತಾಪ ಒಪ್ಪಲಿಲ್ಲ.ನಾವು ಕಾಂಗ್ರೆಸ್ ಜತೆಗಿದ್ದೇವೆಂದು ಹೇಳಿ ಕಳುಹಿಸಿದರು ಎನ್ನಲಾಗಿದೆ.
ದೇವೇಗೌಡರ ಭೇಟಿ ನಂತರ ಲೆಹರ್‌ಸಿಂಗ್ ಸುದ್ದಿಗಾರರ ಜತೆ ಮಾತನಾಡಲಿಲ್ಲ. ದೇವೇಗೌಡರೂ ಆ ಕುರಿತು ಪ್ರತಿಕ್ರಿಯಿಸಲಿಲ್ಲ. ಲೆಹರ್‌ಸಿಂಗ್ ಜತೆ ಮಾತನಾಡುವ ಮೂಲಕ ದೇವೇಗೌಡರು, ಕಾಂಗ್ರೆಸ್‌ಗೂ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ನೀವು ಬೆಂಬಲ ಕೊಟ್ಟು ಸಮಸ್ಯೆ ಉಂಟು ಮಾಡುವುದಾದರೆ ನಮಗೆ ಬೇರೆ ಮಾರ್ಗವೂ ಇದೆ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ರವಾನಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.