Advertisement

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

02:48 PM Jul 28, 2021 | ನಾಗೇಂದ್ರ ತ್ರಾಸಿ |

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಎಂಬಂತೆ ಗೃಹ ಸಚಿವ, ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೂ ಮೊದಲು ಸಿಎಂ ಬದಲಾವಣೆ ಸುದ್ದಿ ಹರಿದಾಡುತ್ತಿದ್ದಾಗ ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ ಗೆ ಸಂದೇಶಗಳು ರವಾನೆಯಾಗತೊಡಗಿದ್ದವು. ಅದರಲ್ಲಿ ಲಿಂಗಾಯತ ಮಠಾಧೀಶರ ಬಹಿರಂಗ ಹೇಳಿಕೆಗಳು!

Advertisement

ವಿದಾಯ ಭಾಷಣದಲ್ಲಿಯೂ ಕೂಡಾ ಬಿಎಸ್ ವೈ ಭಾವುಕರಾಗಿಯೇ ತಾನು ಖುಷಿಯಿಂದಲೇ ಮುಖ್ಯಮಂತ್ರಿ ಗಾದಿಗೆ ರಾಜೀನಾಮೆ ನೀಡುತ್ತಿದ್ದೇನೆ. ಇದನ್ನು ನಾನು ಎರಡು ತಿಂಗಳ ಮೊದಲೇ ನಿರ್ಧರಿಸಿದ್ದೆ ಎಂದು ಹೇಳಿದ್ದರು. ಬಳಿಕ ರಾಜ್ಯಪಾಲರ ಬಳಿ ತೆರಳುವಾಗಲೂ ನಾನು ಯಾರ ಹೆಸರನ್ನೂ ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡುವುದಿಲ್ಲ, ಯಾವ ಹುದ್ದೆಯನ್ನೂ ನಾನು ಅಲಂಕರಿಸುವುದಿಲ್ಲ ಎಂದು ಖಂಡ, ತುಂಡವಾಗಿ ಪ್ರತಿಕ್ರಿಯೆ ನೀಡಿದ್ದರು.

ವಿರೋಧಿ ಪಾಳಯಕ್ಕೆ ಬಿಸಿ ಮುಟ್ಟಿಸಿದ ಬಿಎಸ್ ವೈ:

Advertisement

ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿಪಿ ಯೋಗೀಶ್ವರ್,ಅರವಿಂದ್ ಬೆಲ್ಲದ ಬಹಿರಂಗವಾಗಿಯೇ ಬಿಎಸ್ ವೈ ವಿರುದ್ಧ ಆರೋಪಿಸಿದ್ದರು. ಸಿಎಂ ಬದಲಾವಣೆಯಾಗಲಿದೆ ಎಂಬುದಾಗಿ ಹೇಳಿಕೆ ಕೊಡುತ್ತಿದ್ದರು. ಯೋಗೀಶ್ವರ ದೆಹಲಿಗೆ ಹೋಗಿ ವರಿಷ್ಠರಿಗೆ ವರದಿ ಒಪ್ಪಿಸುತ್ತಿದ್ದರು. ಅಂತೂ ಅಂದುಕೊಂಡಂತೆ ಕರ್ನಾಟಕದಲ್ಲಿ ಸಿಎಂ ಬದಲಾವಣೆಯಾಗಿದೆ ನಿಜ. ಆದರೆ ಇನ್ನೂ ಕೂಡಾ ಅಸಮಧಾನ ಬೂದಿಮುಚ್ಚಿದ ಕೆಂಡದಂತಿದೆ ಎಂಬುದು ಕೂಡಾ ಸತ್ಯ.

ಇವೆಲ್ಲ ರಾಜಕೀಯ ಬೆಳವಣಿಗೆ ನಡುವೆ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿದ್ದು, ಬಿಜೆಪಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದರು. ಬಹುಶಃ ಈ ಸಂದರ್ಭದಲ್ಲಿಯೇ ಬಿಎಸ್ ವೈ ಒಂದು ಸಂದೇಶವನ್ನು ರವಾನಿಸಿರಬಹುದು. ನಂತರ ಖುದ್ದು ಬಿಎಸ್ ಯಡಿಯೂರಪ್ಪನವರು ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಮಾಧ್ಯಮದವರ ಜತೆ ಮಾತನಾಡುವಾಗ ಮಾತ್ರ ಬಿಎಸ್ ವೈ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲವಾಗಿತ್ತು ಎಂಬುದು ಬಹಿರಂಗವಾದದ್ದೇ ಅವರು ರಾಜೀನಾಮೆ ಘೋಷಿಸಿದ ನಂತರ! ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಜಾತಿ ರಾಜಕಾರಣದ ಹಿಡಿತದ ಕೈತಪ್ಪಿಸಬೇಕೆಂಬ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರಕ್ಕೆ ಹಿನ್ನಡೆಯಾಗಿದೆ ಎಂಬುದಕ್ಕೆ ಸದ್ಯದ ಬೆಳವಣಿಗೆಯೇ ಸಾಕ್ಷಿ. ಸಿಎಂ ಬದಲಾವಣೆ ಸುದ್ದಿ ಹರಿದಾಡುತ್ತಿದ್ದಾಗ ಮುಖ್ಯವಾಹಿನಿಯಲ್ಲಿದ್ದ ಹೆಸರು ಪ್ರಹ್ಲಾದ್ ಜೋಶಿ, ಮುರುಗೇಶ್ ನಿರಾಣಿ ಮತ್ತು ಅರವಿಂದ ಬೆಲ್ಲದ. ನಂತರದಲ್ಲಿ ಬಿಎಸ್ ಸಂತೋಷ್ ಅವರ ಹೆಸರು ಮುಂಚೂಣಿಯಲ್ಲಿತ್ತು.

ಆದರೆ ಬಸವರಾಜ ಬೊಮ್ಮಾಯಿ ಅವರ ಹೆಸರು ಅಷ್ಟು ಮಹತ್ವ ಪಡೆದಿರಲಿಲ್ಲವಾಗಿತ್ತು. ತಮ್ಮ ವಿರೋಧಿಗಳನ್ನು ಕಟ್ಟಿಹಾಕಲು ಬಿಎಸ್ ವೈ ಉರುಳಿಸಿದ ದಾಳ ಈಗ ಯಶಸ್ವಿಯಾಗಿದೆ. ಮೊದಲ ಕಂತಿನಲ್ಲಿ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಎರಡನೇಯದಾಗಿ ಬೊಮ್ಮಾಯಿಗೆ ಸಿಎಂ ಪಟ್ಟ, ಮೂರನೇಯದು ಪುತ್ರ ವಿಜಯೇಂದ್ರ ಸ್ಥಾನ(ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂಬ ಸುದ್ದಿ ಇದೆ) ಹಾಗೂ ಸ್ವತಃ ಬಿಎಸ್ ವೈ ಮಾರ್ಗದರ್ಶನದಲ್ಲಿ ಪಕ್ಷ ಮುಂದುವರಿಯುವುದರೊಂದಿಗೆ ಪರೋಕ್ಷವಾಗಿ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿಕೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಬಿಎಸ್ ಯಡಿಯೂರಪ್ಪನವರ ಸಂವಹನಕಾರರು. ಅಲ್ಲದೇ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಪಕ್ಷದ ಟ್ರಬಲ್ ಶೂಟರ್ ಕೂಡಾ ಹೌದು. ಯಡಿಯೂರಪ್ಪನವರು ತಮ್ಮ ಹಿಡಿತ ಕೈತಪ್ಪದಿರಲು ಬಿಜೆಪಿ ಹೈಕಮಾಂಡ್ ಕೂಡಾ ಬೊಮ್ಮಾಯಿ ಅವರ ಆಯ್ಕೆಗೆ ಸಹಮತ ಸೂಚಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಷ್ಟೆಲ್ಲಾ ಆದ ಮೇಲೂ ಸಿಪಿ ಯೋಗೀಶ್ವರ್ ಅಸಮಾಧಾನ ಮುಂದುವರಿದಿದೆ. ಅಂದರೆ ವಿರೋಧಿ ಪಾಳಯ ಬಯಸಿದ ಮುಖ್ಯಮಂತ್ರಿ ಆಗಲಿಲ್ಲ ಎಂಬುದು ಇದಕ್ಕೆ ಕಾರಣವಿರಬಹುದು. ಬಸನಗೌಡ ಪಾಟೀಲ್ ಯತ್ನಾಳ್ ತಾನು ಗಡ್ಡ ಇದ್ದಾಗ ಶಿವಾಜಿ ಆಗಿದ್ದೆ, ಈಗ ಬಸವಣ್ಣ ಆಗಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಏತನ್ಮಧ್ಯೆ ಕರ್ನಾಟಕಕ್ಕೆ ನಾಲ್ವರು ಉಪಮುಖ್ಯಮಂತ್ರಿ ಹುದ್ದೆ ಸಿಗಲಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಇಂದು ಬಸವರಾಜ ಬೊಮ್ಮಾಯಿ ಅವರು ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಕೆಎಸ್ ಈಶ್ವರಪ್ಪ, ಶ್ರೀರಾಮುಲು, ಆರ್.ಅಶೋಕ್ , ನಿರಾಣಿ ಹೆಸರು ಕೇಳಿಬಂದಿತ್ತು. ಒಂದೆಡೆ ವಿರೋಧಿ ಬಿಎಸ್ ವೈ ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯೇನೋ ಆಗಿದೆ. ಮತ್ತೊಂದೆಡೆ ಬಿಎಸ್ ವೈ ತನ್ನ ಆಪ್ತ ಬೊಮ್ಮಾಯಿ ಅವರನ್ನು ಸಿಎಂ ಗದ್ದುಗೆಯಲ್ಲಿ ಕೂರಿಸುವ ಮೂಲಕ ಹಿಡಿತ ಸಾಧಿಸಿದ್ದಾರೆ. ಇದೀಗ ಮುಂಬರುವ ದಿನಗಳಲ್ಲಿ ವಲಸಿಗರು, ಡಿಸಿಎಂ ಹುದ್ದೆ, ಅಸಮಧಾನಗಳನ್ನು ಬಸವರಾಜ ಬೊಮ್ಮಾಯಿ ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next