Advertisement
ತಮ್ಮ ಭಾಷಣದ ಆರಂಭದಲ್ಲಿಯೇ, ಬೆಂಗಳೂರು ನಗರ ನಾಯಕರಾಗಿದ್ದ ವೆಂಕಟೇಶ್ ಮೂರ್ತಿ ಅವರನ್ನು ಅಮಾನತು ಮಾಡುವ ಮೂಲಕ ರಾಜ್ಯ ನಾಯಕರನ್ನಾಗಿ ಮಾಡಲಾಗಿದೆ. ಇದಕ್ಕೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದು ಹೇಳುವ ಮೂಲಕ ವ್ಯಂಗ್ಯವಾಡಿದರು.
Related Articles
Advertisement
ಯಡಿಯೂರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೇಡ ಎನ್ನುತ್ತಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಬೇಡ ಎಂಬುದನ್ನು ಮಾತ್ರ ಹೇಳುತ್ತಿಲ್ಲ. ಬ್ರಿಗೇಡ್ ಕುರಿತು ಅವರಿಗೆ ಯಾರೋ ತಪ್ಪಾಗಿ ಹೇಳಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಕಾರಣಕ್ಕಾಗಿ ಸಂಘಟನೆ ಆರಂಭಿಸಲಾಗಿದೆ. ಅವರಿಗೆ ಗೊಂದಲ ಮೂಡಿದ್ದು, ಬ್ರಿಗೇಡ್ ಪ್ರಾರಂಭಕ್ಕೆ ಸಂತೋಷ ಪಡಬೇಕಾಗಿತ್ತು ಎಂದು ಚಾಟಿ ಬೀಸಿದರು.
ಪಕ್ಷದ ಮೋರ್ಚಾಗಳ ಮೂಲಕ ಸಮಾವೇಶಗಳನ್ನು ನಡೆಸಿ ಎಂಬುದಾಗಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ, ಪಕ್ಷದ ಮೋರ್ಚಾಗಳ ಮೂಲಕ ಸಮಾವೇಶ ನಡೆಸಿದರೆ ಪಕ್ಷದ ಬಾವುಟಗಳು ರಾರಾಜಿಸುತ್ತವೆ. ಇವುಗಳನ್ನು ನೋಡಿ ಬಿಜೆಪಿಯೇತರ ನಾಯಕರು, ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗವಹಿಸುತ್ತಾರಾ ಎಂದು ಯಡಿಯೂರಪ್ಪ ಅವರನ್ನು ನೇರವಾಗಿ ಪ್ರಶ್ನಿಸಿದರು.
ಈಶ್ವರಪ್ಪ ಮತ್ತು ಯಡಿಯೂರಪ್ಪ ಬಡಿದಾಡಿಕೊಂಡ್ರೆ ನಮಗೆ ಲಾಭ ಅಂತ ಕಾಂಗ್ರೆಸ್‌ನವರು ತಿಳಿದುಕೊಂಡಿದ್ದಾರೆ. ಆದರೆ ನಮ್ಮನ್ನು ಕೇಳಲು ಕೇಂದ್ರದ ವರಿಷ್ಠರು ಇದ್ದಾರೆ. ದೊಡ್ಡವರು ಗೊಂದಲವನ್ನು ಬಗೆಹರಿಸುತ್ತಾರೆ. ನಾವಿಬ್ಬರೂ ಮತ್ತೆ ಒಂದಾಗುತ್ತೇವೆ.– ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ ಅಮಾನತಿನಿಂದ ನೋವಾಗಿದೆ,
ಆದರೂ ಬ್ರಿಗೇಡ್ ನಿಲ್ಲಿಸಲ್ಲ
ಪಕ್ಷದ ನಿಷ್ಠಾವಂತ ಕಾರ್ಯಕರ್ತ ವೆಂಕಟೇಶ್ ಮೂರ್ತಿ ಅವರನ್ನು ಅಮಾನತುಗೊಳಿಸಿರುವುದು ನನಗೆ ನೋವು ತಂದಿದೆ ಎಂದು ಈಶ್ವರಪ್ಪ ಹೇಳಿದರು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಳ್ಳುವುದು ತಪ್ಪಾ? ಇದನ್ನೇ ಪಕ್ಷದ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಮಾನತು ಮಾಡಲಾಗಿದೆ. ಪಕ್ಷದ ಈ ಕ್ರಮದಿಂದ ನನಗೆ ನೋವಾಗಿದೆ. ಯಾರು ಏನೇ ಮಾಡಿದರೂ ರಾಯಣ್ಣ ಬ್ರಿಗೇಡ್ ಚಟುವಟಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದರು. ಪಕ್ಷದ ಶಿಸ್ತು ಸಮಿತಿಯಲ್ಲಿ ಅಶಿಸ್ತು
ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ಶಿಸ್ತು ಸಮಿತಿಗೆ ಅಶಿಸ್ತು ಬಂದಿದೆಯಾ ಎಂಬ ಅನುಮಾನ ಮೂಡಿದೆ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಮುಖಂಡರಾದ ಸೊಗಡು ಶಿವಣ್ಣ ಮತ್ತು ನಂದೀಶ್ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಕ್ಷದ ಶಿಸ್ತು ಸಮಿತಿ ಏನು ಮಾಡುತ್ತಿದೆ ಎಂಬುದೇ ಗೊತ್ತಿಲ್ಲ. ವೆಂಕಟೇಶ್ ಮೂರ್ತಿಗೆ ನೋಟಿಸ್ ಜಾರಿಗೊಳಿಸದೆ ಅಮಾನತುಗೊಳಿಸಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದ ಬಗ್ಗೆ ಮತ್ತು ವ್ಯವಸ್ಥೆ ಕುರಿತು ಅನುಮಾನ ಮೂಡಿದೆ ಎಂದರು. ದಕ್ಷಿಣ ಕರ್ನಾಟಕಕ್ಕೂ ಬ್ರಿಗೇಡ್ ಬರಲಿದೆ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಸ್ತುತ ಉತ್ತರ ಕರ್ನಾಟಕದಲ್ಲಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ಜ.26ರಂದು ಕೂಡಲ ಸಂಗಮ ಸಮಾವೇಶದ ಬಳಿಕ ದಕ್ಷಿಣ ಕರ್ನಾಟಕಕ್ಕೂ ಸಂಘಟನೆ ಕಾರ್ಯಗಳು ವ್ಯಾಪಿಸಲಿವೆ ಎಂದು ಈಶ್ವರಪ್ಪ ತಿಳಿಸಿದರು. ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಎಲ್ಲಾ ವರ್ಗದ ಬಡವರ ಏಳ್ಗೆಗಾಗಿ 10 ಸಾವಿರ ಕೋಟಿ ರೂ .ಮೀಸಲಿರಿಸುತ್ತೇವೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಈಶ್ವರಪ್ಪ ಆಸೆ ಎಂದು ಹೇಳಿದರು.