ಬಿಎಸ್ IIIರಿಂದ ಬಿಎಸ್ IVಕ್ಕೆ ಬದಲಾಗುವುದು ವಾಹನ ಉದ್ಯಮದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಆದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಾಹನ ಉದ್ಯಮದ ಆರೋಗ್ಯಕ್ಕಿಂತಲೂ ಜನರ ಆರೋಗ್ಯ ಅತಿ ಮುಖ್ಯವಾಗಿರುವುದರಿಂದ ಆದೇಶದ ಪರಿಣಾಮವನ್ನು ಸಹಿಸಿಕೊಳ್ಳಲೇಬೇಕಾಗಿದೆ.
ದೇಶದ ವಾಹನ ಉದ್ಯಮದಲ್ಲಿ ಏ.1ರಿಂದ ಕ್ರಾಂತಿಕಾರಿ ಬದಲಾವಣೆಯಾಗಲಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ವಾಹನಗಳು ಎ. 1ರಿಂದ ಬಿಎಸ್ IIIಯಿಂದ ಬಿಎಸ್ IV ನಿಯಮಾವಳಿಗಳಿಗಳ ಅಂಶಗಳಿಗೆ ಅನುಗುಣವಾಗಿ ಪರಿವರ್ತನೆಗೊಂಡಿರಬೇಕು. ಭಾರತ್ ಸ್ಟೇಜ್ ಎನ್ನುವುದು ಬಿಎಸ್‌ನ ಪೂರ್ಣರೂಪ. ವಾಹನಗಳ ಎಂಜಿನ್ ಉಂಟುಮಾಡುವ ಮಾಲಿನ್ಯವನ್ನು ನಿರ್ಧರಿಸುವ ಒಂದು ಮಾನದಂಡ ಇದು. ಯುರೋಪ್ ದೇಶಗಳಲ್ಲಿ ಯುರೊ ಸ್ಟೇಜ್‌ಗಳಿರುವಂತೆ ನಮ್ಮಲ್ಲಿ ಅದನ್ನು ಭಾರತ್ ಸ್ಟೇಜ್ ಎಮಿಶನ್ ಸ್ಟಾಂಡರ್ಡ್ ಎಂದು ಗುರುತಿಸುತ್ತಾರೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಎಸ್ ಅನ್ನು ನಿರ್ಧರಿಸುವ ಶಾಸನಾತ್ಮಕ ಅಧಿಕಾರ ಹೊಂದಿರುವ ಸಂಸ್ಥೆ. ವಾಹನಗಳು ಹೊರಹಾಕುವ ಮಾಲಿನ್ಯಕಾರಕ ಅಂಶಗಳನ್ನು ಕಡಿಮೆಗೊಳಿಸುವ ಸಲುವಾಗಿ ಬಿಎಸ್ ಪರಿಮಿತಿಯನ್ನು ನಿರ್ಧರಿಸಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಬಿಎಸ್ 3 ವಾಹನಗಳು ಓಡಾಡುತ್ತಿವೆ. ಬಿಎಸ್4 ಅಂಶಗಳನ್ನು ಒಳಗೊಂಡಿರುವ ವಾಹಧಿಗಳು ಉಂಟುಮಾಡುವ ಮಾಲಿನ್ಯ ಬಿಎಸ್ 3 ವಾಹನಗಳ ಮಾಲಿನ್ಯದ ಅರ್ಧಕ್ಕಿಂತಲೂ ಕಡಿಮೆ ಎನ್ನುವ ಕಾರಣಕ್ಕೆ ಭಾರತದ ಮಟ್ಟಿಗೆ ಇದು ಮಹತ್ವದ ಆದೇಶವಾಗಿದೆ. ಹೀಗಾಗಿ ಎ.1ರಿಂದ ಬಿಎಸ್ 3 ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ. ವಾಹನ ಉದ್ಯಮದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಆದೇಶ ಇದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಾಹನ ಉದ್ಯಮದ ಆರೋಗ್ಯಕ್ಕಿಂತಲೂ ಜನರ ಆರೋಗ್ಯ ಅತಿ ಮುಖ್ಯವಾಗಿರುವುದರಿಂದ ಆದೇಶದ ಪರಿಣಾಮವನ್ನು ಸಹಿಸಿಕೊಳ್ಳಲೇಬೇಕಾಗಿದೆ.
ಈ ಪ್ರಕ್ರಿಯೆಯಿಂದ ವಾಹನ ಉದ್ಯಮದ ಮೇಲೆ ದೊಡ್ಡ ಮಟ್ಟದ ಪರಿಣಾಮವಾಗುತ್ತದೆ ಎನ್ನುವ ಮೇಲ್ನೋಟಕ್ಕೆ ಕಂಡುಬಂದರೂ ಒಟ್ಟಾರೆಯಾಗಿ ಇದು ಎಲ್ಲ ಕ್ಷೇತ್ರಗಳನ್ನು ಮತ್ತು ವರ್ಗದವರನ್ನು ತಟ್ಟುವ ಆದೇಶ. ಬಿಎಸ್ IV ವಾಹನಗಳ ಉತ್ಪಾದನಾ ವೆಚ್ಚ ಹೆಚ್ಚಿದಾಗ ಸಹಜವಾಗಿಯೇ ಬೆಲೆಯೂ ಹೆಚ್ಚುತ್ತದೆ. ಸ್ವಂತ ವಾಹನದ ಕನಸು ಕಾಣುವವರ ಜೇಬಿಗೆ ಕತ್ತರಿ ಬೀಳುವುದು ಖಚಿತ. ವಾಹನದ ಬೆಲೆ ಹೆಚ್ಚಾದಾಗ ಸಂಬಂಧಿಸಿದ ಸೇವೆಗಳ ಬೆಲೆಯೂ ಹೆಚ್ಚಾಗಲಿದೆ. ಭವಿಷ್ಯದ ಜನಾಂಗದ ದೃಷ್ಟಿಯಿಂದ ಈ ಬೆಲೆ ಏರಿಕೆಯ ಬಿಸಿಯನ್ನು ಸಹಿಸಿಕೊಳ್ಳುವುದು ಅನಿವಾರ್ಯ. ಇನ್ನು ವಾಹನ ಉದ್ಯಮದ ವಿಚಾರಕ್ಕೆ ಬರುವುದಾದರೆ ವಿವಿಧ ಕಂಪೆನಿಗಳು ಒಟ್ಟಾರೆಯಾಗಿ ಸುಮಾರು 20,000 ಕೋಟಿ. ರೂ. ನಷ್ಟ ಅನುಭವಿಸಬೇಕಾಗುತ್ತದೆ. ಉದ್ಯೋಗ ನಷ್ಟ, ಶೇರು ಮಾರುಕಟ್ಟೆ ಕುಸಿತದಂತಹ ಸಂಕಷ್ಟಗಳು ಎದುರಾಗುವ ಸಾಧ್ಯತೆಯಿದೆ.
ಪ್ರಸ್ತುತ ದೇಶದಲ್ಲಿ 8.24 ಲಕ್ಷ ಬಿಎಸ್ III ಹೊಸ ವಾಹನಗಳು ಉತ್ಪಾದನೆಯಾಗಿ ಮಾರುಕಟ್ಟೆಗೆ ಬರಲು ತಯಾರಾಗಿ ನಿಂತಿವೆ. ಇಷ್ಟು ವಾಹನಗಳನ್ನು ಕೇವಲ ಎರಡು ದಿನಗಳಲ್ಲಿ ಮಾರಾಟ ಮಾಡಿ ಮುಗಿಸುವ ಒತ್ತಡ ಕಂಪೆನಿಗಳ ಮೇಲಿದೆ. ಹೀರೊ ಮೋಟೊಕಾರ್ಪ್ ಮತ್ತು ಹೋಂಡಾ ಕಂಪೆನಿಗಳು ಭಾರೀ ರಿಯಾಯಿತಿ ಘೋಷಿಸುವ ಮೂಲಕ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿವೆ. ಅನಂತರವೂ ಉಳಿಯುವ ವಾಹನಗಳನ್ನು ಬಿಎಸ್ III ನಿಯಮ ಚಾಲ್ತಿಯಲ್ಲಿರುವ ದೇಶಗಳಿಗೆ ರಫ್ತು ಮಾಡುವ ಮತ್ತು ಎಂಜಿನ್‌ಗಳನ್ನು ಬಿಎಸ್IVಗೆ ಪರಿವರ್ತಿಸುವ ಆಯ್ಕೆಗಳಿದ್ದರೂ ಇವುಗಳು ಹೆಚ್ಚುವರಿ ವೆಚ್ಚ ಅಪೇಕ್ಷಿಸುತ್ತವೆ. ಕೆಲವು ಕಾಲ ವಾಹನ ಉದ್ಯಮ ತುಸು ಸಂಕಷ್ಟ ಎದುರಿಸಬೇಕಾದರೂ ಅಶೋಕ್ ಲೇಲ್ಯಾಂಡ್‌ನ ವಿನೋದ್ ಕೆ. ದಾಸರಿ, ಬಜಾಜ್ ಅಟೊದ ರಾಜೀವ್ ಬಜಾಜ್, ಟೊಯೋಟ ಕಿರ್ಲೋಸ್ಕರ್‌ನ ವಿಕ್ರಮ್ ಕಿರ್ಲೋಸ್ಕರ್ ಸೇರಿದಂತೆ ಹೆಚ್ಚಿನೆಲ್ಲ ಉದ್ಯಮಿಗಳು ಭವಿಷ್ಯದ ಜನಾಂಗದ ಹಿತದೃಷ್ಟಿಯಿಂದ ಈ ನಡೆಯನ್ನು ಸ್ವಾಗತಿಸಿರುವುದು ಉದ್ಯಮದ ವಿವೇಚನೆಯನ್ನು ತೋರಿಸುತ್ತದೆ.
2002ರಲ್ಲಿ ಸರಕಾರ ಮಾಶೇಲ್ಕರ್ ಸಮಿತಿಯ ವರದಿಯ ಶಿಫಾರಸಿನಲ್ಲಿರುವಂತೆ ಯುರೋ ಮಾದರಿಯ ನಿಯಮಾವಳಿಗಳನ್ನು ಹಂತಹಂತವಾಗಿ ಅನುಷ್ಠಾನಿಸಲು ಒಪ್ಪಿಕೊಂಡಿತು. ಆ ಪ್ರಕಾರ 2010ರಲ್ಲೇ ಬಿಎಸ್ IV ನಿಯಮ ಅನುಷ್ಠಾನ ಪ್ರಾರಂಭವಾಗಿತ್ತು. ಕೆಲವು ಕಂಪೆನಿಗಳು ಬಿಎಸ್ IV ಕಾರುಗಳನ್ನು ಉತ್ಪಾದಿಸಿದ್ದರೂ ತಕ್ಕ ಇಂಧನ ದೊರೆಯದ ಕಾರಣ ಬಿಎಸ್ 3 ಮಾದರಿಯಲ್ಲೇ ಓಡುತ್ತಿದ್ದವು. ಬಿಎಸ್ IV ನಿಯಮಗಳನ್ನು ಅನುಷ್ಠಾನಿಸುವಾಗ ಇಂತಹ ಪೂರಕ ಅಂಶಗಳತ್ತಲೂ ಗಮನ ಹರಿಸುವುದು ಸರಕಾರದ ಹೊಣೆ.