Advertisement

ಬಿರು ಬೇಸಿಗೆಯಲ್ಲಿ ವರವಾದ ವರುಣ

12:21 PM Apr 22, 2018 | Team Udayavani |

ಬೆಂಗಳೂರು: ರಾಜ್ಯದ ಹಲವೆಡೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಬಿಸಿಲ ಬೇಗೆಯಿಂದ ಬಳಲಿದ್ದವರಿಗೆ ತುಸು ತಂಪೆರೆದಿದ್ದರೆ ಇನ್ನೊಂದೆಡೆ ವಿದ್ಯುತ್‌ ಬೇಡಿಕೆ 1200 ಮೆಗಾವ್ಯಾಟ್‌ನಷ್ಟು ತಗ್ಗಿದ್ದು, ಇಂಧನ ಇಲಾಖೆಗೆ ವರದಾನವಾಗಿ ಪರಿಣಮಿಸಿದೆ.

Advertisement

ಕಳೆದ ಬುಧವಾರದಿಂದ ನಾನಾ ಕಡೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಪಂಪ್‌ಸೆಟ್‌ ಬಳಕೆ ಇಳಿಕೆಯಾಗಿದೆ. ಬೆಂಗಳೂರು ಸೇರಿದಂತೆ ಇತರೆ ಕೆಲ ನಗರಗಳಲ್ಲೂ  ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ವಿದ್ಯುತ್‌ ಬಳಕೆ ಪ್ರಮಾಣ ಇಳಿಕೆಯಾಗಿದೆ. ರಾಜ್ಯಾದ್ಯಂತ ಇತ್ತೀಚಿನವರೆಗೂ ನಿತ್ಯ 10,300ರಿಂದ 10,700 ಮೆಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆ ಇತ್ತು.

ಕೆಲ ದಿನಗಳಿಂದ ಮಳೆಯಾಗುತ್ತಿರುವುದರಿಂದ ಬೇಡಿಕೆಯು 1000ದಿಂದ 1,200 ಮೆಗಾವ್ಯಾಟ್‌ನಷ್ಟು ಇಳಿಕೆಯಾಗಿದೆ. ಇದರಿಂದಾಗಿ ಸದ್ಯ 9,500ರಿಂದ 9,700 ಮೆಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆಯಿದ್ದು, ಅಗತ್ಯವಿರುವಷ್ಟು ವಿದ್ಯುತ್‌ ಪೂರೈಸಲಾಗುತ್ತಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

 ಇದುವೆಗೂ ರಾಜ್ಯದಲ್ಲಿ ತಾಪಮಾನ ಏರುಮುಖವಾಗಿದ್ದು, ಬಿಸಿಲ ಬೇಗೆಯೂ ಏರುತ್ತಿದೆ. ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ಹವಾನಿಯಂತ್ರಣ ಸಾಧನ, ಕೂಲರ್‌, ಫ್ಯಾನ್‌ ಸೇರಿದಂತೆ ಇತರೆ ವಿದ್ಯುತ್‌ ಉಪಕರಣಗಳ ಬಳಕೆ ಹೆಚ್ಚಾಗಿದ್ದು, ವಿದ್ಯುತ್‌ ಬೇಡಿಕೆ ಏರುತ್ತಲೇ ಇದೆ.

ಬೇಸಿಗೆಯಲ್ಲಿ ಬಹುತೇಕ ಕಡೆ ಕೃಷಿ ಚಟುವಟಿಕೆಗೆ ಕೊಳವೆ ಬಾವಿ ನೀರು  ಆಶ್ರಯಿಸಲಾಗುತ್ತಿತ್ತು. ಹೀಗಾಗಿ,  ಕೃಷಿ ವಲಯದಲ್ಲೂ ವಿದ್ಯುತ್‌ ಬೇಡಿಕೆ ಹೆಚ್ಚಾಗಿತ್ತು.. ಪರಿಣಾಮವಾಗಿ ರಾಜ್ಯಾದ್ಯಂತ ನಿತ್ಯ ಸರಾಸರಿ ವಿದ್ಯುತ್‌ ಬೇಡಿಕೆ 10,500 ಮೆಗಾವ್ಯಾಟ್‌ಗೆ ಏರಿಕೆಯಾಗಿತ್ತು.

Advertisement

ವರುಣನ ವರದಾನ: ಬುಧವಾರದಿಂದೀಚೆಗೆ ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಕೆಲವೆಡೆ ಎರಡು- ಮೂರು ದಿನ ಮಳೆಯಾದ ಕಾರಣ ವಾತಾವರಣ ತಂಪಾಗುವ ಜತೆಗೆ ಬೇಡಿಕೆಯಲ್ಲಿ ದಿಢೀರ್‌ ಇಳಿಕೆ ಕಂಡಿದೆ. ವಿದ್ಯುತ್‌ ಉತ್ಪಾದನೆ ಮೇಲಿನ ಒತ್ತಡ ತಾತ್ಕಾಲಿಕವಾಗಿ ತಗ್ಗಿದೆ. ಬೇಡಿಕೆಯಷ್ಟು ವಿದ್ಯುತ್‌ ಪೂರೈಸಲು ಹೆಣಗಾಡುತ್ತಿರುವ ಇಂಧನ ಇಲಾಖೆಗೆ ಇತ್ತೀಚೆಗೆ ಸುರಿದ ವರುಣ ವರದಾನದಂತಾಗಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಉಷ್ಣ ವಿದ್ಯುತ್‌ ಗರಿಷ್ಠ ಉತ್ಪಾದನೆ: ಜಲವಿದ್ಯುತ್‌ ಘಟಕಗಳಿಗಿರುವ ಜಲಾಶಯಗಳಲ್ಲಿ ಶೇ.25ರಷ್ಟು ನೀರಿನ ಸಂಗ್ರಹವಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿದ್ದಷ್ಟು ವಿದ್ಯುತ್‌ ಮಾತ್ರ ಉತ್ಪಾದಿಸಲಾಗುತ್ತಿದೆ. ಉಷ್ಣ ವಿದ್ಯುತ್‌ ಘಟಕಗಳಿಂದ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಉಷ್ಣ ವಿದ್ಯುತ್‌ ಘಟಕಗಳಲ್ಲಿ ಒಂದೆರಡು ದಿನಕ್ಕಾಗುವಷ್ಟು ಕಲ್ಲಿದ್ದಲು ಸಂಗ್ರಹವಷ್ಟೇ ಇದ್ದು, ಬೇಡಿಕೆಗೆ ಅನುಗುಣವಾಗಿ ಉತ್ಪಾದಿಸಲಾಗುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಮಧ್ಯರಾತ್ರಿ ಇಂಧನ ವಿನಿಮಯ ವ್ಯವಸ್ಥೆಯಡಿ ಅಗತ್ಯವಿರುವಷ್ಟು ವಿದ್ಯುತ್‌ ಪಡೆದು ಪೂರೈಸಲಾಗುತ್ತಿದೆ ಎಂದು ಹೇಳಿದರು.  

ಶೇ.48ರಷ್ಟು ಬೆಸ್ಕಾಂನಲ್ಲಿ ಬಳಕೆ: ರಾಜ್ಯಕ್ಕೆ ನಿತ್ಯ ಹಂಚಿಕೆಯಾಗುವ ವಿದ್ಯುತ್‌ನಲ್ಲಿ ಶೇ.48ರಷ್ಟು ಬೆಸ್ಕಾಂ ವ್ಯಾಪ್ತಿಯಲ್ಲೇ ಬಳಕೆಯಾಗುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲೇ ಬಳಕೆ ಹೆಚ್ಚಾಗಿದ್ದು, ಬೇಡಿಕೆಯೂ ತೀವ್ರವಾಗಿದೆ. ಬೆಸ್ಕಾಂ ವ್ಯಾಪ್ತಿಗೆ ಸರಾಸರಿ 4,800 ಮೆಗಾವ್ಯಾಟ್‌ ಬಳಕೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಏರುತ್ತಲೇ ಇದ್ದು, ಬೇಡಿಕೆಯಷ್ಟು ವಿದ್ಯುತ್‌ ಪೂರೈಸುವುದು ಸವಾಲೆನಿಸಿದೆ.

ದಾಖಲೆ ಪ್ರಮಾಣದ ಬೇಡಿಕೆ: ಕಳೆದ ಮಾರ್ಚ್‌ನಲ್ಲಿ ದಿನದ ಗರಿಷ್ಠ ಬೇಡಿಕೆ 10,777 ಮೆಗಾವ್ಯಾಟ್‌ಗೆ ಏರಿಕೆಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿದೆ. ಕಳೆದ ವರ್ಷ ಬೇಸಿಗೆಯಲ್ಲಿ 10,424 ಮೆಗಾವ್ಯಾಟ್‌ ಗರಿಷ್ಠ ಬೇಡಿಕೆಯಾಗಿತ್ತು (ಪೀಕ್‌ ಲೋಡ್‌).

ಸದ್ಯ ದಿನದ ಗರಿಷ್ಠ ವಿದ್ಯುತ್‌ ಬೇಡಿಕೆ ಸರಾಸರಿ 10,300 ಮೆಗಾವ್ಯಾಟ್‌ನಿಂದ 10,700 ಮೆಗಾವ್ಯಾಟ್‌ರಷ್ಟಿದೆ. ಕಳೆದ ಮಾರ್ಚ್‌ನಲ್ಲಿ ವಿದ್ಯುತ್‌ ಬೇಡಿಕೆಯು 10,777 ಮೆಗಾವ್ಯಾಟ್‌ಗೆ ಏರಿಕೆಯಾಗಿರುವುದು ಈವರೆಗಿನ ಗರಿಷ್ಠ ಬೇಡಿಕೆ ದಾಖಲೆ ಎಂದು  ಇಂಧನ ಮೂಲಗಳು ತಿಳಿಸಿವೆ.

* ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next