Advertisement
ತ್ವರಿತ ಬಸ್ ಸಾರಿಗೆ ವ್ಯವಸ್ಥೆ ಆರಂಭವಾಗಿ ಎರಡು ವರ್ಷಗಳಷ್ಟೇ ಆಗಿವೆ. ಇನ್ನೂ ಸಣ್ಣಪುಟ್ಟ ಕಾರ್ಯಗಳು ಬಾಕಿವೆ. ಹೀಗಿರುವಾಗ ನಿರ್ವಹಣೆ ಹಂತದಲ್ಲೇ ಸಮಸ್ಯೆಗಳು ಉದ್ಭವವಾಗುತ್ತಿವೆ. ರೈಲ್ವೆ ನಿಲ್ದಾಣ ಬಳಿಯ ಬಿಆರ್‌ಟಿಎಸ್ ಬಸ್ ನಿಲ್ದಾಣದ ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಹೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಎನ್ನಲಾಗುತ್ತಿದೆ. ಸುಮಾರು 4.5 ಲಕ್ಷ ರೂ. ಬಾಕಿ ಉಳಿಸಿಕೊಂಡ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಕೋವಿಡ್-19 ನಂತರದಲ್ಲಿ ಬಸ್ ಆರಂಭವಾದ ದಿನಗಳಿಂದಲೂ ವಿದ್ಯುತ್ ಕಡಿತಗೊಂಡಿದ್ದು, ಮೂರ್‍ನಾಲ್ಕು ತಿಂಗಳಿನಿಂದ ಕತ್ತಲಲ್ಲೇ ಪ್ರಯಾಣಿಕರು ಬಸ್ ಹತ್ತುವಂತಾಗಿದೆ.
Related Articles
Advertisement
ಸಿಬ್ಬಂದಿ ಪಾಡು ಹೇಳತೀರದು : ಸಂಜೆ ನಂತರ ಕರ್ತವ್ಯಕ್ಕೆ ಆಗಮಿಸುವ ಸಿಬ್ಬಂದಿ ಪಾಡಂತೂ ಹೇಳ ತೀರದು. ವಿದ್ಯುತ್ ಸಂಪರ್ಕವಿಲ್ಲದ ಕಾರಣ ಟಿಕೆಟ್ ಕೌಂಟರ್ ಬಂದಾಗಿದ್ದು, ಆನ್‌ಲೈನ್ ಇಟಿಎಂ ಯಂತ್ರದಿಂದ ಟಿಕೆಟ್ ನೀಡುತ್ತಾರೆ. ಮೊಬೈಲ್ ಬ್ಯಾಟರಿ ಸಹಾಯದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಟಿಕೆಟ್ ನೀಡುವ ಇಟಿಎಂ ಯಂತ್ರದ ಚಾರ್ಜ್ ಮುಗಿಯುತ್ತಿದ್ದಂತೆ ಅಂಬೇಡ್ಕರ್ ನಿಲ್ದಾಣಕ್ಕೆ ತಂದು ಚಾರ್ಜ್ ಮಾಡಬೇಕು. ಸಿಸಿ ಕ್ಯಾಮೆರಾ, ಗೇಟ್ ಸೇರಿದಂತೆ ಕಾರ್ಯಗಳು ಸ್ಥಗಿತಗೊಂಡಿವೆ. ಹೀಗಾಗಿ ಈ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸಂಗ್ರಹವಾಗುವ ಸಾರಿಗೆ ಆದಾಯವನ್ನು ರಾತ್ರಿ 10 ಗಂಟೆವರೆಗೆ ಜಾಗ್ರತೆಯಿಂದ ಕಾಪಾಡಿಕೊಂಡು ಹೋಗಬೇಕು. ಸಿಸಿ ಕ್ಯಾಮೆರಾ ಕೆಲಸ ಮಾಡದ ಪರಿಣಾಮ ಕಳ್ಳತನದಂತಹ ಘಟನೆಗಳು ನಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ವಿದ್ಯುತ್ ಸಂಪರ್ಕ ಕಡಿತ ಮಾಡಿರುವ ಪರಿಣಾಮ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಬಸ್ ಗಳ ಎಂಜಿನ್ ಬಂದ್ ಮಾಡದೆ ಬಸ್‌ಗಳ ದೀಪ ಉರಿಸಲಾಗುತ್ತಿದೆ. ಮೊದಲೇ ಮೈಲೇಜ್ ಬಾರದೆ ಆರ್ಥಿಕ ನಷ್ಟವಾಗುತ್ತಿರುವ ಸಂದರ್ಭದಲ್ಲಿ ಸಂಜೆ 6 ಗಂಟೆಯ ನಂತರ ಬರುವ ಎಲ್ಲಾ ಬಸ್‌ಗಳು ಕನಿಷ್ಟ 6-8 ನಿಮಿಷಗಳ ಕಾಲ ಎಂಜಿನ್ ಬಂದ್ ಮಾಡುವಂತಿಲ್ಲ. ಕತ್ತಲು ಇರುವ ಪರಿಣಾಮ ಪ್ರಯಾಣಿಕರು ಇತ್ತ ಆಗಮಿಸದೆ ಆಟೋ ರಿಕ್ಷಾ ಮೂಲಕ ತೆರಳುತ್ತಿದ್ದಾರೆ. –ಹೆಸರು ಹೇಳಲಿಚ್ಛಿಸದ ಸಿಬ್ಬಂದಿ
ಸರಕಾರ ಯೋಜನೆಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಿದೆ. ಅಧಿಕಾರಿಗಳಿಗೆ ನಿಲ್ದಾಣದಲ್ಲಿನ ವಿದ್ಯುತ್ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗುತ್ತಿಲ್ಲ. ನಾಲ್ಕೈದು ಗಂಟೆಗಳ ಕಾಲ ಮೊಬೈಲ್ ಬ್ಯಾಟರಿ ಸಹಾಯದಿಂದ ಕೆಲಸ ಮಾಡುವ ಸಿಬ್ಬಂದಿ ಪಾಡೇನು. -ಪ್ರಶಾಂತ ಕುಲಕರ್ಣಿ, ಪ್ರಯಾಣಿಕ
-ಹೇಮರಡ್ಡಿ ಸೈದಾಪುರ