Advertisement

ಬಿಆರ್‌ಟಿ ಮತ್ತು ಮಹದೇಶ್ವರ ವನ್ಯಧಾಮಗಳು ಸೇರಿದವು ‘ಕಪ್ಪು ಚಿರತೆಗಳ ಆವಾಸ ಸ್ಥಾನಕ್ಕೆ’ !

08:54 AM Jan 06, 2021 | Team Udayavani |

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕ್ಯಾಮರಾ ಟ್ರ್ಯಾಪ್ ಮೂಲಕ  ಕಂಡು ಬಂದಿರುವ ಕಪ್ಪು ಚಿರತೆ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ. ರಾಜ್ಯದಲ್ಲಿ ವಿರಳ ಸಂಖ್ಯೆಯಲ್ಲಿರುವ ಕಪ್ಪು ಬಣ್ಣದ ಚಿರತೆಗಳ ಆವಾಸ ಸ್ಥಾನದ ಪಟ್ಟಿಗೆ ಮಹದೇಶ್ವರ ವನ್ಯಧಾಮವೂ ಸೇರಿದಂತಾಗಿದೆ.

Advertisement

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ  ಬಿಳಿಗಿರಿರಂಗನಾಥಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬೈಲೂರು ವನ್ಯಜೀವಿ ವಲಯದ ಕೌಳಿಕಟ್ಟೆ ಡ್ಯಾಂ ಬಳಿ ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮರಾ ಟ್ರ್ಯಾಪ್‌ನಲ್ಲಿ ಕಪ್ಪು ಚಿರತೆಯ ಛಾಯಾಚಿತ್ರ ಮೂಡಿಬಂದಿತ್ತು.

ಇದಾದ ಬಳಿಕ, ಮಲೆ ಮಹದೇಶ್ವರ  ವನ್ಯಧಾಮದ ಪಿ.ಜಿ. ಪಾಳ್ಯ ವಲಯದ, ಲೊಕ್ಕನಹಳ್ಳಿ ಬೀಟ್‌ನಲ್ಲಿ  ಅಳವಡಿಸಿರುವ ಕ್ಯಾಮರಾ ಟ್ರ್ಯಾಪ್‌ನಲ್ಲಿ, ಕಳೆದ ಡಿಸೆಂಬರ್‌ನಲ್ಲಿ ಕಪ್ಪು ಚಿರತೆ ಸೆರೆಯಾಗಿದೆ. ಬಿಆರ್‌ಟಿ ಅರಣ್ಯ ಪ್ರದೇಶದ ಬೈಲೂರು ವನ್ಯಜೀವಿ ವಲಯ ಹಾಗೂ ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ. ಪಾಳ್ಯ ವನ್ಯಜೀವಿ ವಲಯಗಳು ಸಮೀಪದಲ್ಲೇ ಇದ್ದು, ಎರಡೂ ಕಡೆ ಕಂಡು ಬಂದಿರುವುದು ಒಂದೇ ಕಪ್ಪು ಚಿರತೆಯೇ  ಎಂಬುದು ಸ್ಪಷ್ಟವಾಗಿಲ್ಲ.

MM Hills forest 

Advertisement

ವನ್ಯಜೀವಿಗಳ ಅಧ್ಯಯನ ಹಾಗೂ ಕಳ್ಳ ಬೇಟೆಗಾರರ ಪತ್ತೆಗಾಗಿ, ಪಿಜಿ ಪಾಳ್ಯ ವನ್ಯಜೀವಿ ವಲಯದಲ್ಲಿ 200 ಕ್ಯಾಮರಾಗಳನ್ನು ಬೇರೆ ಬೇರೆ ಜಾಗಗಳಲ್ಲಿ ಅಳವಡಿಸಲಾಗಿದೆ. ಕ್ಯಾಮರಾ ಮುಂದೆ ಇನ್ನೊಂದು ವಸ್ತು, ಜೀವಿ ಚಲಿಸಿದಾಗ ಕ್ಯಾಮರಾ ತನ್ನಿಂತಾನೇ ಕ್ಲಿಕ್ ಆಗುತ್ತದೆ. ಹೀಗೆ ಕಪ್ಪು ಚಿರತೆ ಓಡಾಡುತ್ತಿರುವ ಚಿತ್ರ ನಾಲ್ಕು ಫ್ರೇಮ್‌ಗಳಲ್ಲಿ ಸೆರೆಯಾಗಿದೆ.

ಈ ಎರಡೂ ವನ್ಯಧಾಮಗಳಲ್ಲಿ ಕಂಡು ಬಂದಿರುವ ಚಿರತೆಗಳು ಒಂದೇ ಅಥವಾ ಎರಡೂ ಪ್ರತ್ಯೇಕವೇ ಎಂಬುದು ಖಚಿತವಾಗಿಲ್ಲ. ಅದೇನೇ ಆಗಿರಲಿ, ರಾಜ್ಯದಲ್ಲಿ ಕಪ್ಪು ಚಿರತೆಗಳ ಆವಾಸ ಸ್ಥಾನಕ್ಕೆ ಬಿಳಿಗಿರಿರಂಗನಬೆಟ್ಟ ಹಾಗೂ ಮಲೆ ಮಹದೇಶ್ವರ ಬೆಟ್ಟ ಅರಣ್ಯಗಳು ಸೇರ್ಪಡೆಯಾದಂತಾಗಿದೆ!

MM Hills forest

ಆಗಸ್ಟ್ ನಲ್ಲಿ ಬಿಆರ್‌ಟಿಯ ಬೈಲೂರು ವಲಯದಲ್ಲಿ ಕಂಡು ಬಂದ ಕಪ್ಪು ಚಿರತೆ ಮತ್ತು ಡಿಸೆಂಬರ್‌ನಲ್ಲಿ ಎಂ.ಎಂ. ಹಿಲ್ಸ್ ನ ಪಿ.ಜಿ.ಪಾಳ್ಯ ವಲಯದಲ್ಲಿ ಕಂಡು ಬಂದ ಕಪ್ಪು ಚಿರತೆ ಎರಡೂ ಒಂದೇನಾ ಇಲ್ಲವಾ ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಎರಡೂ ಅರಣ್ಯ ವಲಯಗಳು ಸಮೀಪದಲ್ಲೇ ಇವೆ ಎಂಬುದು ನಿಜ. ಇವು ಬೇರೆ ಬೇರೆ ಕಪ್ಪು ಚಿರತೆಗಳೂ ಆಗಿರಲೂ ಬಹುದು. ಈ ಬಗ್ಗೆ ನಿಖರತೆ ಇಲ್ಲ.

-ಏಡುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೆ ಮಹದೇಶ್ವರ ಬೆಟ್ಟ ವನ್ಯಧಾಮ.

ಕ್ಯಾಮರಾ ಟ್ರ್ಯಾಪ್ ಚಿತ್ರಗಳನ್ನು ಗಮನಿಸಿದಾಗ ಈ ಎರಡೂ ಚಿತ್ರಗಳಲ್ಲಿರುವುದು ಗಂಡು ಕಪ್ಪು ಚಿರತೆ ಎಂಬುದು ತಿಳಿದುಬರುತ್ತದೆ. ಬೈಲೂರು ವಲಯದ ಕೌಳಿಕಟ್ಟೆ ಡ್ಯಾಂ ಪ್ರದೇಶ ಮತ್ತು ಪಿ.ಜಿ.ಪಾಳ್ಯದ ಲೊಕ್ಕನಹಳ್ಳಿ ವನ್ಯಜೀವಿ ವಲಯಗಳ ಸಮೀಪ ಯಡಯಾರಳ್ಳಿ ಕಾರಿಡಾರ್ ಇದೆ. ಈ ಪ್ರದೇಶದ ಆಸುಪಾಸಿನಲ್ಲಿ ಈ ಎರಡೂ ಫೋಟೋಗಳು ಸೆರೆಯಾಗಿವೆ. ಎರಡೂ ಚಿತ್ರಗಳಲ್ಲಿರುವುದು ಗಂಡು ಚಿರತೆ ಯಾಗಿರುವುದರಿಂದ ಇದು ಒಂದೇ ಚಿರತೆ ಎಂಬ ಅಂದಾಜಿಗೆ ಬರಬಹುದು.

-ಸಂಜಯ್ ಗುಬ್ಬಿ, ವನ್ಯಜೀವಿ ತಜ್ಞ.

 

ಬೇರೆ ಪ್ರಭೇದವಲ್ಲ: ದಪ್ಪ ಚುಕ್ಕೆಗಳ ಚಿರತೆಗಳನ್ನು ನೋಡಿದವರಿಗೆ ಈ ಕರಿಚಿರತೆಗಳ ಬಗ್ಗೆ ಏನೋ ಒಂದು ಕುತೂಹಲ. ಅನೇಕರು ತಿಳಿದಿರುವ ಹಾಗೆ ಈ ಕಪ್ಪು ಚಿರತೆಗಳು ಬೇರೆ ಪ್ರಭೇದವಲ್ಲ ಅಥವಾ ಉಪಪ್ರಭೇದವೂ ಅಲ್ಲ! ಮಾಮೂಲಿ ಚಿರತೆಗಳ ವಂಶ ವಾಹಿನಿಯಿಂದ, ಚರ್ಮ ಮತ್ತು ಕೂದಲಿನಲ್ಲಿ ಮೆಲನಿನ್ ಅಂಶ ಜಾಸ್ತಿಯಾಗಿ  ಅವುಗಳ ಚರ್ಮದ ಬಣ್ಣ ಕಪ್ಪಾಗಿರುತ್ತದೆ. ಇದನ್ನು ಮೆಲನಿಸಂ ಎಂದು ಕರೆಯುತ್ತಾರೆ. ಈ ಮೆಲನಿಸಂ ಕೇವಲ ಚಿರತೆಗಳಿಗಷ್ಟೇ ಸೀಮಿತವಲ್ಲ. ಪ್ರಪಂಚದ 38 ಜಾತಿಯ ವನ್ಯ ಮಾರ್ಜಾಲಗಳ 14 ಪ್ರಭೇದಗಳಲ್ಲಿ ಈ ಮೆಲನಿಸಂ ಕಂಡು ಬಂದಿದೆ ಎನ್ನುತ್ತಾರೆ ಚಿರತೆಗಳ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್ ಪಡೆದಿರುವ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ. ಹಾಗೆಯೇ ಇವುಗಳ ಮೈಮೇಲೆಯೂ ಕಪ್ಪು ಚುಕ್ಕೆಗಳಿವೆ. ಬೆಳಕು ಓರೆಯಾಗಿ ಬಿದ್ದಾಗ ಈ ಚುಕ್ಕುಗಳು ಕಾಣುತ್ತವೆ ಎನ್ನುತ್ತಾರವರು.

ಇದನ್ನು ಜನ ಸಾಮಾನ್ಯರಿಗೆ ಸರಳ ರೀತಿಯಲ್ಲಿ ಅರ್ಥೈಸುವುದಾದರೆ, ನಾಡಿನ ಬೆಕ್ಕುಗಳಲ್ಲಿ, ಹೆಚ್ಚಿನ ಸಂಖ್ಯೆಯ ಸಾಮಾನ್ಯ ಬಣ್ಣದ ಬೆಕ್ಕುಗಳ ನಡುವೆ, ಕಪ್ಪು ಬೆಕ್ಕು, ಬಿಳಿಬೆಕ್ಕು ಇರುವಂತೆ ವನ್ಯ ಮಾರ್ಜಾಲ ಪ್ರಭೇದದಲ್ಲಿ ಮೈಬಣ್ಣ ಕಪ್ಪಾಗಿರುವ  ಚಿರತೆಗಳೂ ಇವೆ.

BRT forest

ಪ್ರಾಣಿಶಾಸ್ತ್ರಜ್ಞರು 1917ರವರೆಗೂ ಇದನ್ನು ಬೇರೆ ಪ್ರಭೇದವೆಂದು ನಂಬಿದ್ದರು. ಆ ಪ್ರಭೇದಕ್ಕೆ ಫೆಲಿಸ್ ನಿಗ್ರಾ ಎಂಬ ವೈಜ್ಞಾನಿಕ ಹೆಸರು ನೀಡಿದ್ದರು. ಆದರೆ 1917ರಲ್ಲಿ ಇದು ಮಾಮೂಲು ಚಿರತೆಯೆಂದು ಗುರುತಿಸಿ, ಚಿರತೆಯ ವೈಜ್ಞಾನಿಕ ಹೆಸರಾದ ಪ್ಯಾಂಥೆರಾ ಪಾರ್ಡ್‌ಸ್ ಪ್ರಭೇದಕ್ಕೆ ಸೇರಿಸಲಾಯಿತು ಎಂದು ವಿವರಿಸುತ್ತಾರೆ ಸಂಜಯ್ ಗುಬ್ಬಿ.

ಪ್ರಪಂಚದ ಚಿರತೆಗಳಲ್ಲಿ ಶೇ. 11ರಷ್ಟು ಕಪ್ಪು ಚಿರತೆಗಳಿವೆ. ಮಲೇಷ್ಯಾ, ಥೈಲ್ಯಾಂಡ್, ಜಾವಾ ದ್ವೀಪಗಳಲ್ಲಿ ಈ ಕಪ್ಪು ಚಿರತೆಗಳು ಹೆಚ್ಚಿವೆ. ಅಲ್ಲದೇ ಭಾರತ, ಶ್ರೀಲಂಕಾ, ನೇಪಾಳದಲ್ಲೂ ಕಂಡು ಬರುತ್ತವೆ. ಭಾರತದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ, ಒಡಿಶಾ, ಛತ್ತೀಸ್‌ಗಢ, ಪ.ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಕಂಡು ಬರುತ್ತವೆ.

ಕರ್ನಾಟಕದಲ್ಲಿ ನಾಗರಹೊಳೆ, ಬಂಡೀಫುರ, ಭದ್ರಾ, ಕಾಳಿ, ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶಗಳಲ್ಲಿ ಕಂಡು ಬಂದಿವೆ. ಈಗ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲೂ ಕಪ್ಪು ಚಿರತೆ ಪತ್ತೆಯಾಗಿದೆ. ಆದರೆ, ನಾಗರಹೊಳೆಯ ಕಬಿನಿ ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆಗಳು ವನ್ಯಜೀವಿ ಛಾಯಾಗ್ರಾಹಕರಿಗೆ ಹೆಚ್ಚು ಸೆರೆಸಿಕ್ಕಿ ಪ್ರಸಿದ್ಧಿಯಾಗಿವೆ!

 

  • ಕೆ.ಎಸ್. ಬನಶಂಕರ ಆರಾಧ್ಯ
Advertisement

Udayavani is now on Telegram. Click here to join our channel and stay updated with the latest news.

Next