ಈ ಹಕ್ಕಿ ಕುಟುರ್, ಕುಟುರ್ ಎಂದು ಏಕ ರೀತಿಯಲ್ಲಿ ಕೂಗುತ್ತದೆ. ಆ ಕಾರಣದಿಂದಲೇ ಇದಕ್ಕೆ ಕುಟರ್ ಹಕ್ಕಿ ಅಥವಾ ಗುಟರ್ ಹಕ್ಕಿ ಎಂದು ಕರೆಯಲಾಗುತ್ತದೆ. ಪಪ್ಪಾಯಿ, ಬಾಳೆ, ಮಾವಿನ ತೋಪುಗಳಲ್ಲಿ ಹೆಚ್ಚಾಗಿ ವಾಸಿಸುವ ಈ ಹಕ್ಕಿ, ಎರಡು ಅಥವಾ ನಾಲ್ಕು ಮೊಟ್ಟೆ ಇಡುತ್ತದೆ.
ಇದಕ್ಕೆ ಮೈನಾ ಹಕ್ಕಿಯಷ್ಟು ದೊಡ್ಡದಾದ ದುಂಡಗಿನ ದೇಹವಿದೆ. ಇದು ಬಲವಾದ ದಪ್ಪ ಚುಂಚು ಹೊಂದಿರುವ ಹಕ್ಕಿ. ಕುರ್-ರ್-ರ್-ಕುಟುರ್, ಕುಟುರ್, ಕುಟರುರ್‌ಎಂದು ಏಕರೀತಿಯಲ್ಲಿ ಕೂಗುತ್ತಾ ಒಂದು ಇನ್ನೊಂದರೊಡನೆ ಸೇರುವುದರಿಂದ ಇದಕ್ಕೆ ಗುಟುರ್ ಇಲ್ಲವೇ ಕುಟೂರ್ ಹಕ್ಕಿ ಎಂಬ ಹೆಸರು ಬಂದಿದೆ.
ಕಪ್ಪುಗುಟುರ, ಕೆಂಪುತಲೆ ಗುಟುರ, ಜುಟ್ಟಿನ ಗುಟುರ, ಬಿಳಿ ಕೆನ್ನೆಗುಟುರ, ತಾಮ್ರದ ಮೇಲೆ ಕುಟ್ಟಿದಂತೆ ಕೂಗುವ ಗುಟರ ಹಕ್ಕಿ… ಹೀಗೆ ಇದರಲ್ಲಿ ಭಿನ್ನ ಪ್ರಬೇಧಗಳಿವೆ. ಈ ಎಲ್ಲಾ ಪ್ರಬೇಧದ ಹಕ್ಕಿ ದುಂಡಗಾಗಿ ಉರುಟಾಗಿರುವುದು ವಿಶೇಷ. ಎಲ್ಲಾ ಹಕ್ಕಿಗಳಿಗೂ ಬಲವಾದ ಚುಂಚು, ಚುಂಚಿನ ಬುಡದಲ್ಲಿ ಮೀಸೆಯಂಥ ಉದ್ದಕೂದಲು ಇರುತ್ತದೆ. ತಲೆ, ಕುತ್ತಿಗೆ, ಬೆನ್ನಿನ ಮೇಲ್ಭಾಗ, ಎದೆ ಹಳದಿ ಮಿಶ್ರಿತ ಕಂದು ಬಣ್ಣ ಇದೆ. ಬಾಲ ರೆಕ್ಕೆಯ ಕೆಳಭಾಗ ಅಂದರೆ, ರೆಕ್ಕೆ, ಪುಕ್ಕದ ಅಡಿಯಲ್ಲಿ ತಿಳಿ ನೀಲಿ ಬಣ್ಣದಿಂದ ಕೂಡಿರುತ್ತದೆ. ಕಣ್ಣಿನ ಸುತ್ತಲೂ ಚುಂಚಿನ ಬುಡದವರೆಗೆ ತಿಳಿ ಕಿತ್ತಳೆ ಬಣ್ಣ ಇದೆ.
ಕಾಲು ಹಳದಿಬಣ್ಣ ಇದ್ದು, ಕಾಲಿನ ಬೆರಳುಗಳಲ್ಲಿ ಕಂದು ಬಣ್ಣದ ಉಗುರು ಇರುತ್ತದೆ. ಇದರ ಪುಟ್ಟ ಬಾಲ ಮರ ಏರುವಾಗ, ಮರದ ಟೊಂಗೆ ಕೊರೆಯುವಾಗ ಆಧಾರವಾಗಿ ನಿಲ್ಲಲು ಮೂರನೆ ಕಾಲಿನಂತೆ ಕಾರ್ಯ ನಿರ್ವಹಿಸುವುದು. ಈ ಹಕ್ಕಿ 27 ಸೆಂ.ಮೀ. ನಷ್ಟು ದೊಡ್ಡದಾಗಿದೆ. ದೊಡ್ಡ ಚುಂಚು, ಚಿಕ್ಕಕುತ್ತಿಗೆ, ಚಿಕ್ಕ ಬಾಲ ಇದರ ಲಕ್ಷಣ. ಭಾರತದ ಹಕ್ಕಿ ಇದು. ಶ್ರೀಲಂಕಾ, ಬಾಂಗ್ಲಾದೇಶ, ಪಶ್ಚಿಮ ಘಟ್ಟದ ಭಾಗದಲ್ಲಿ
ರಾಜಸ್ಥಾನದ ಭರತಪುರಗಳಲ್ಲೂ ಕಂಡಿದ್ದು ದಾಖಲಾಗಿದೆ. ಆಲ, ಅಶ್ವತ್ಥ, ಬಸರಿ ಮರಗಳಲ್ಲಿ ಹಣ್ಣು ಬಿಟ್ಟಾಗ ಏಕಾಂಗಿಯಾಗಿ ಇಲ್ಲವೇ 10 ರಿಂದ 20ರ ಗುಂಪಿನಲ್ಲೂ ಈ ಪಕ್ಷಿ ಕಾಣುವುದು. ಹಸಿರೆಲೆಯ ದೊಡ್ಡ ಮರಗಳಿರುವ ಕಾಡು. ಪಕ್ಕದ ತೋಟಪಟ್ಟಿ, ನಗರದ ಸುತ್ತಲಿನ ಉದ್ಯಾನವನಗಳು ಇವುಗಳಿಗೆ ಪ್ರಿಯ. ಅತ್ತಿ, ವಾಟೆ, ಹಾಲವಾಣ, ಮಾವಿನ ಇತ್ಯಾದಿ ಮರಗಳಲ್ಲಿ ಒಟ್ಟೆಕೊರೆದು ಗೂಡು ನಿರ್ಮಿಸಿ, ಅಲ್ಲಿ ಮೊಟ್ಟೆ ಇಟ್ಟು ಮರಿಮಾಡುತ್ತವೆ. ಬಳಸಿದ ಮರದ ಒಟ್ಟೆಯನ್ನೆ ಪುನಃ ಮೊಟ್ಟೆ ಇಡಲು ಬಳಸುವುದೂ ಇದೆ. ಪಪ್ಪಾಯಿ, ಬಾಳೆ, ಮಾವು ತೋಪುಗಳಲ್ಲಿ ಇವು ವಾಸಿಸುತ್ತವೆ. ಅರ್ಧತಿಂದ ಹಣ್ಣಿಗೆ ಬರುವಕೀಟ ಸಹ ಇದರ ಆಹಾರ. ಇಂತಹ ಕೊರೆದ ಮರದ ಒಟ್ಟೆಗಳಲ್ಲಿ 2-4 ಮೊಟ್ಟೆ ಇಡುತ್ತದೆ. ಸಾಮಾನ್ಯವಾಗಿ 3 ಮೊಟ್ಟೆ ಇಡುವುದೇ ಹೆಚ್ಚು. ಇದು ಮರದ ಮೂಲ ಟೊಂಗೆಯಲ್ಲಿ 2-15 ಮೀ.
ಎತ್ತರದಲ್ಲಿ ಕೊರೆದು ತನ್ನಗೂಡನ್ನು ಮಾಡುತ್ತದೆ. ಫೆಬ್ರವರಿ-ಜೂನ್‌ಇದು ಮರಿಮಾಡುವ ಸಮಯ. ಗಂಡು, ಹೆಣ್ಣು ಒಂದೇ ರೀತಿ ಇರುತ್ತವೆ. ಗಂಡು ಹೆಣ್ಣು ಎರಡೂ ಸೇರಿ ಮರಿಗಳ ಪಾಲನೆ-ಪೋಷಣೆ ಮಾಡುವುದು. ಇದರಲ್ಲೇ ಆಫ್ರಿಕಾದಲ್ಲಿ ಜುಟ್ಟುಗುಟುರ, ಕೆಂಪುತಲೆ ಗುಟುರ, ಕಪ್ಪುಗುಟುರ ಎಂಬ ಪ್ರಬೇಧವೂ ಇದೆ. ಗುಟುರದ ವಿವಿಧ ತಳಿಗಳ ಕೂಗಿನಲ್ಲಿ ಸ್ವಲ್ಪ ವ್ಯತ್ಯಾಸಇದೆ. ಇಂತಹ ಸೂಕ್ಷ್ಮ ವ್ಯತ್ಯಾಸ ಗ್ರಹಿಸುವ ಕೌಶಲ ಹುಟ್ಟಿನಿಂದಲೇ ಬರುವುದೋ ಅಥವಾ ತಂದೆ ತಾಯಿಯ ಕೂಗನ್ನು ಗಮನಿಸಿ ಇತರ ಪ್ರಬೇಧದ ಗುಟುರದ ಕೂಗನ್ನು, ವ್ಯತ್ಯಾಸವನ್ನು ತಿಳಿಯಲು ಮರಿಗಳು ಹೇಗೆ ಕಲಿಯುತ್ತವೆಯೋ ಎಂಬುದು ತಿಳಿದಿಲ್ಲ. ಈ ಸಂಬಂಧವಾಗಿ ಹೆಚ್ಚಿನ ಅಧ್ಯಯನಕ್ಕೆಯೋಗ್ಯ ವಿಷಯ.
ಪಿ.ವಿ.ಭಟ್ ಮುರೂರು