Advertisement

ಸಹೋದರರ ಅಪಹರಣ ಪ್ರಕರಣ: ಐವರ ಬಂಧನ; ಕೃತ್ಯಕ್ಕೆ ಚಿನ್ನ ಸಾಗಣೆ ನಂಟು

12:25 AM Jan 22, 2023 | Team Udayavani |

ಮಂಗಳೂರು: ಕಳೆದ ಗುರುವಾರ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಹೋದರರಿಬ್ಬರ ಅಪಹರಣ ಮತ್ತು ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಉಪ್ಪಿನಂಗಡಿಯ ಅಬೂಬಕ್ಕರ್‌ ಸಿದ್ದಿಕ್‌ ಆಲಿಯಾಸ್‌ ಕರ್ವೇಲ್‌ ಸಿದ್ಧಿಕ್‌ ಆಲಿಯಾಸ್‌ ಜೆಸಿಬಿ ಸಿದ್ದಿಕ್‌ (39), ಬಂಟ್ವಾಳದ ಕಲಂದರ್‌ ಶಾಫಿ ಗಡಿಯಾರ (22), ದೇರಳಕಟ್ಟೆಯ ಇರ್ಫಾನ್‌ (38), ಮಂಗಳೂರು ಪಾಂಡೇಶ್ವರದ ಮೊಹಮ್ಮದ್‌ ರಿಯಾಜ್‌ (33) ಮತ್ತು ಬೆಳ್ತಂಗಡಿ ಬಂಡಾರಿನ ಮಹಮ್ಮದ್‌ ಇರ್ಷಾದ್‌ (28) ಬಂಧಿತರು.

ನಿಜಾಮುದ್ದೀನ್‌ ಮತ್ತು ಅವರ ತಮ್ಮ ಶಾರೂಕ್‌ ಅಪಹರಣಕ್ಕೆ ಒಳಗಾದವರು. ಇವರೀರ್ವರ ಸಹೋದರ ಶಫೀಕ್‌ ವ್ಯಕ್ತಿಯೋರ್ವರಿಗೆ ವಿದೇಶದಿಂದ ಚಿನ್ನ ತಲುಪಿಸಬೇಕಾಗಿತ್ತು. ಆದರೆ ಅದನ್ನು ತಲುಪಿಸಿರಲಿಲ್ಲ. ಈ ವಿಚಾರ ತಿಳಿದ ಆರೋಪಿಗಳು ಅಪಹರಣ ಮಾಡಿರುವುದು ಗೊತ್ತಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ನಡೆದ ಪ್ರಕರಣದ ಆರೋಪಿಗಳ ಬಂಧನ, ತನಿಖೆಯ ಸಂದರ್ಭ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳು ಕೂಡ ಹೊರಬಿದ್ದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ
ಆರೋಪಿಗಳಲ್ಲಿ ಓರ್ವನಾದ ಸಿದ್ದಿಕ್‌ ಗುರುವಾರದಂದು ಕೊçಲದ ಕೆ.ಸಿ. ಫಾರ್ಮ್ ಬಳಿಯ ನಿಜಾಮುದ್ದೀನ್‌ ಅವರಿಗೆ ಕರೆ ಮಾಡಿ ಕರೆಯಿಸಿಕೊಂಡಿದ್ದ. ಬಳಿಕ ಇತರ ಆರೋಪಿಗಳೊಂದಿಗೆ ಸೇರಿ ನಿಜಾಮುದ್ದೀನ್‌ ಅವರನ್ನು ಕಾರಿನಲ್ಲಿ ಕುಳ್ಳಿರಿಸಿ ಮಲ್ಲೂರಿನಲ್ಲಿ ಮನೆಯೊಂದಕ್ಕೆ ಕರೆದೊಯ್ದು ಅಲ್ಲಿ ನಿಜಾಮುದ್ದೀನ್‌ ಅವರಲ್ಲಿ “ವಿದೇಶದಿಂದ ಬಂದ ನಿನ್ನ ತಮ್ಮ ಶಾರೂಕ್‌ ಎಲ್ಲಿದ್ದಾನೆ?’ ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದರು. ಬಳಿಕ ಆರೋಪಿಗಳು ನಿಜಾಮುದ್ದೀನ್‌ ಅವರ ಮೊಬೈಲ್‌ ಕಿತ್ತುಕೊಂಡು ಶಾರೂಕ್‌ಗೆ ಕರೆ ಮಾಡಿ ಕಡಂಬು ಎಂಬಲ್ಲಿಗೆ ಬರಲು ಹೇಳಿದರು. ಅನಂತರ ಶಾರೂಕ್‌ ಅವರನ್ನು ಕೂಡ ಮಲ್ಲೂರಿನ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದರು. ಶಾರೂಕ್‌ರನ್ನು ಒತ್ತೆ ಇರಿಸಿಕೊಂಡಿದ್ದರು. ನಿಜಾಮುದ್ದೀನ್‌ ಅವರಲ್ಲಿ “4 ಲ.ರೂ. ತಂದರೆ ಮಾತ್ರ ತಮ್ಮನನ್ನು ಬಿಡುತ್ತೇವೆ’ ಎಂದು ಹೇಳಿ ವಾಪಸ್‌ ಕಳುಹಿಸಿದ್ದರು. ನಿಜಾಮುದ್ದೀನ್‌ ಮನೆಗೆ ಬಂದು ನಡೆದ ಘಟನೆಯನ್ನು ತಿಳಿಸಿದ್ದರು. ಈ ಬಗ್ಗೆ ಶುಕ್ರವಾರ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿದ್ದಿಕ್‌ನ ಗಡೀಪಾರಿಗೆ ಪ್ರಸ್ತಾವನೆ
ಆರೋಪಿ ಅಬೂಬಕ್ಕರ್‌ ಸಿದ್ದಿಕ್‌ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ 4 ಕೊಲೆಯತ್ನ ಸೇರಿದಂತೆ 8 ಪ್ರಕರಣಗಳು ದಾಖಲಾಗಿದ್ದು, ಆತನನ್ನು ಜಿಲ್ಲೆಯಿಂದ ಗಡೀಪಾರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಲಂದರ್‌ ಶಾಫಿ ಮೇಲೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಒಂದು ದರೋಡೆ ಪ್ರಕರಣ ದಾಖಲಾಗಿದೆ. ಇರ್ಫಾನ್‌ ಮೇಲೆ ಬಂಟ್ವಾಳ ಗ್ರಾಮಾಂತರ, ಉಳ್ಳಾಲ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಮೊಹಮ್ಮದ್‌ ರಿಯಾಜ್‌ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆಯುಕ್ತರು ತಿಳಿಸಿದರು. ಎಸಿಪಿ ದಿನಕರ ಶೆಟ್ಟಿ ಉಪಸ್ಥಿತರಿದ್ದರು.

Advertisement

ಹಣ, ಚಿನ್ನ ವಸೂಲಿಗಾಗಿ ಅಪಹರಣ
ನಿಜಾಮುದ್ದೀನ್‌, ಶಾರೂಕ್‌ ಮತ್ತು ಶಫೀಕ್‌ ಸಹೋದರರು. ಶಾರೂಕ್‌ ಮತ್ತು ಶಫೀಕ್‌ ಸೌದಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಶಾರೂಕ್‌ ಇತ್ತೀಚೆಗೆ ಊರಿಗೆ ಬಂದಿದ್ದರು. ಶಫೀಕ್‌ ಸುಮಾರು 40 ಲ.ರೂ. ಮೌಲ್ಯದ ಚಿನ್ನವನ್ನು ಯಾರಿಗೋ ತಲುಪಿಸಬೇಕಾಗಿತ್ತು. ಆದರೆ ಆತ ತಲುಪಿಸಲಿಲ್ಲ. ಹಾಗಾಗಿ ಆತನಿಂದ ಚಿನ್ನ ವಸೂಲು ಮಾಡಲು ಆರೋಪಿಗಳು ಯತ್ನಿಸಿದ್ದರು. ಅದಕ್ಕಾಗಿ ಶಫೀಕ್‌ನ ಸಹೋದರರಾದ ನಿಜಾಮುದ್ದೀನ್‌ ಮತ್ತು ಶಾರೂಕ್‌ನನ್ನು ಅಪಹರಿಸಿರುವ ಸಾಧ್ಯತೆ ಇದೆ. ಆರೋಪಿಗಳು ನಿಜಾಮುದ್ದೀನ್‌ ಮತ್ತು ಶಾರೂಕ್‌ನನ್ನು ತಲ್ಲತ್‌ ಫೈಸಲ್‌ನಗರ ಎಂಬಾತನ ಸೂಚನೆಯಂತೆ ಅಪಹರಣ ಮಾಡಿದ್ದರು ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ಕಾರಿನಲ್ಲೇ ಇದ್ದ ಆರೋಪಿಗಳು
ಶಾರೂಕ್‌ನನ್ನು ಒತ್ತೆ ಇರಿಸಿಕೊಂಡವರಿಗಾಗಿ ಉಪ್ಪಿನಂಗಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ನಡುವೆ, ಶುಕ್ರವಾರ ಮುಂಜಾವ 2 ಗಂಟೆಯ ಸುಮಾರಿಗೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ರಾತ್ರಿ ಗಸ್ತು ನಡೆಸುತ್ತಿದ್ದಾಗ ಅರ್ಕುಳ ಗ್ರಾಮದ ತುಪ್ಪೆಕಲ್ಲು ಎಂಬಲ್ಲಿ ರೈಲ್ವೇ ಹಳಿಯ ಬಳಿ ಒಂದು ಆಲ್ಟೋ ಕಾರಿನಲ್ಲಿ ಕೆಲವು ಮಂದಿ ಇರುವುದನ್ನು ಗಮನಿಸಿದ್ದರು. ಅವರನ್ನು ವಿಚಾರಿಸಿದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಬಗ್ಗೆ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳ ಶೋಧ ಕಾರ್ಯ ಆರಂಭಿಸಿದ್ದರು. ಬಳಿಕ ಆರೋಪಿಗಳಾದ ಕರ್ವೇಲ್‌ ಸಿದ್ದಿಕ್‌, ಕಲಂದರ್‌ ಶಾಫಿ ಗಡಿಯಾರ, ಮಹಮ್ಮದ್‌ ಇರ್ಷಾದ್‌ ಮತ್ತು ಇರ್ಫಾನ್‌ನನ್ನು ಬಂಧಿಸಿದ್ದರು. ಇವರ ಜತೆ ಶಾರೂಕ್‌ ಕೂಡ ಇದ್ದರು. ಶಾರೂಕ್‌ನನ್ನು ವಿಚಾರಿಸಿದಾಗ ಅಪಹರಣ ಘಟನೆಯ ವಿವರಗಳು ಬಯಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next