ಅಣ್ಣಾ, ನಿನ್ನ ಸೋದರಿಯನ್ನ ಮರೆಯದಿರು ಎಂದೆಂದೂ ಓ ಅಣ್ಣಾ, – ಹೇಗೆ ಮರೆಯಲು ಸಾಧ್ಯ ತಂಗಿ? ಅಷ್ಟೊಂದು ನನ್ನ ಜೀವನದಲ್ಲಿ ನೀನು ಮಿಳಿತವಾಗಿರುವಾಗ, ನಿನ್ನ ಕಣ್ಣಿಗೆ ನನ್ನ ಎವೆ ಹೊಂದಿಕೊಂಡಿರುವಾಗ… ಅಮ್ಮ ಅಕಾಲಿಕವಾಗಿ ನಮ್ಮನ್ನಗಲಿದಾಗ ನೀನಿನ್ನೂ ಅಬೋಧ ಬಾಲೆ. ಅದೇನು ನಡೆಯುತ್ತಿದೆಯೋ ಅರಿಯದ ವಯಸ್ಸು, ಬಲಿಯದ ಮನಸ್ಸು. ಅಪ್ಪನಿಗೆನಿನ್ನೆಡೆಗೇ ಹೆಚ್ಚಿನ ಪ್ರೀತಿ. ಯಾವಾಗಲೂ ದದ್ದ ಎಂದೇ ಕರೆದು ಮುದ್ದಿಸುತ್ತಿದ್ದರು. ಅಮ್ಮನಿಲ್ಲದ ಕಂದನೆಂದೇ? ಗೊತ್ತಿಲ್ಲ.
ಬಾಲ್ಯದಲ್ಲಿ ಅಮ್ಮನೊಂದಿಗೆ ಪ್ರತಿ ರಜೆಯಲ್ಲಿ ಊರಿಗೆ ಹೋಗುತ್ತಿದ್ದುದು, ಬಸ್ನಲ್ಲಿ ಕಿಟಕಿ ಪಕ್ಕದ ಸೀಟಿಗೆ ಜಗಳ, ಮಳೆ ನೀರು ಹರಿಯುವ ತೋಡಿನಲ್ಲಿಕೈಗಳಿಂದ ಮೀನು ಹಿಡಿಯುತ್ತಿದ್ದುದು, ಗೇರುಬೀಜ,ಜೋನಿಬೆಲ್ಲ, ಹಲಸಿನ ಹಪ್ಪಳ, ಕೊಟ್ಟೆ ಕಡಬು, ಹಾಲುಬಾಯಿ, ಅಜ್ಜಿ ಸೀರೆ ಎಳೆಯುತ್ತಿದುದು, ಅಜ್ಜನ ಚಾಳೀಸು ಅಡಗಿಸಿಡುತ್ತಿದ್ದುದು, ಆನೆಗುಡ್ಡೆ, ಬಾರಕೂರು, ನಾಲೂ¤ರು, ಕಿರಾಡಿ, ಅಬ್ಟಾ! ಮೊಗೆದಷ್ಟೂ ಉಕ್ಕುತ್ತವೆ ಸುಂದರ ನೆನಪುಗಳು!
ನಿನಗೆ ನೆನಪಿದೆಯಾ? ಒಂದು ದಿನ ಮಧ್ಯಾಹ್ನ ನಾನು ಮಲಗಿದ್ದಾಗ, ನಿನ್ನನ್ನು ಕರೆದು 2 ತಿಂಗಳ ಹಿಂದಿನ ವಾರಪತ್ರಿಕೆ ತರಲು ಹೇಳಿದ್ದೆ, ನೀನು ಕಷ್ಟಪಟ್ಟು ಹುಡುಕಿ ತಂದಾಗ ಅಬ್ಟಾ ಸೆಖೆ ಕಣೇ! ಎಂದು ಅದರಲ್ಲಿ ಗಾಳಿ ಬೀಸಿಕೊಂಡಿದ್ದೆ. ನೀನು ಆ ಪತ್ರಿಕೆಯಿಂದಲೇ ನನಗೆ ನಾಲ್ಕು ಕೊಟ್ಟಿದ್ದೆ! ಆಗೆಲ್ಲ ಮಜಾ! ನೀನು ಡಿಗ್ರಿ ಮುಗಿಸಿ ಬ್ಯಾಂಕಿಂಗ್ ಪರೀಕ್ಷೆ ಪಾಸಾಗಿ ಓರಲ್ ಟೆಸ್ಟ್ ಗೆಂದು ಹೋಗಿದ್ದಾಗ ಅಲ್ಲಿ ಸಂದರ್ಶಕರು ನಿನ್ನ ಕೇಳಿದ್ದರು: ಗುಳೇದಗುಡ್ಡಕ್ಕೆ ಹಾಕ್ತೀವಿ ಹೋಗ್ತಿಯೇನಮ್ಮಾ? ಅವರೆದುರು ಒಪ್ಪಿಗೆ ಸೂಚಿಸಿ ಹೊರಬಂದವಳು, ನನ್ನೆದರು ಕಣ್ಣೀರಾಗಿ- ಈ ಗುಳೇದಗುಡ್ಡ ಎಲ್ಲಿದೆ ಅಣ್ಣಾ? ಎಂದಿದ್ದೆ. ಮುಂದೆ ಮದುವೆಯಾಯಿತು.
ಚೆಂದದ ಗಂಡ ಜೊತೆಯಾದ. ಮುತ್ತಿನಂಥ ಎರಡು ಹೆಣ್ಣು ಮಡಿಲು ತುಂಬಿದವು. ಆದರೆ ದೇವರಿಗೆ ನಿನ್ನ ಸುಖ ಕಣ್ಣಿಗೆ ಕುಕ್ಕಿಬಿಟ್ಟಿತ್ತು. ಕಿರಿ ಮಗಳು ಅಪಘಾತದಲ್ಲಿ ಮಡಿದಾಗ ನೀನು ಜರ್ಝರಿತಳಾಗಿದ್ದೆ. ನನ್ನ ಎದೆಗೊರಗಿ ಕೇಳಿದ್ದೆ. ಅಣ್ಣಾ, ಈ ಬೆಂಗಳೂರಿನ ಲಕ್ಷಾಂತರ ಜನರಲ್ಲಿಆ ದೇವರಿಗೆ ನನ್ನ ಮಗಳೇ ಬೇಕಿತ್ತೇನೋ? ನಾನೇನು ಪಾಪ ಮಾಡಿದ್ದೆ? ನಾನು ಏನೆಂದು ಹೇಳಲಿ? ಆದರೆ ನಿನ್ನಆತ್ಮಬಲ ಅಗಾಧ. ಕೇವಲ ಒಂದು ವರ್ಷದಲ್ಲಿ ಮತ್ತೆ ಮೊದಲಿನ ಉತ್ಸಾಹದ ಬುಗ್ಗೆಯಾದೆ! ಇಂದು ನಿನಗೆ ಅರವತ್ತರ ಸಂಭ್ರಮ. ನನ್ನಂತೆ ಹಿರಿಯ ನಾಗರಿಕಳಾದೆ. ಇನ್ನು ಬಸ್‌ನಲ್ಲಿ, ರೈಲಿನಲ್ಲಿ, ಎಲ್ಲೆಡೆ ರಿಯಾಯಿತಿ! ಜನರಿಂದ ಗೌರವ. ಏನೇನೋ ಬರೆದೆ. ಹೃದಯ ಹೇಳಿದ್ದನ್ನು, ಮೆದುಳು ಎಡಿಟ್ ಮಾಡಿ, ಮೂಗಲ್ಲಿ ಅಘ್ರಾಣಿಸಿ, ಕಿವಿಯಲ್ಲಿ ಕೇಳಿಸಿಕೊಂಡು, ನಾಲಿಗೆ ಚುಪ್ ಆಗಿ, ಕೈಗಳು ಬರೆದಿವೆ. 60ನೇ ವರ್ಷಕ್ಕೆ ಶುಭಾಕಾಂಕ್ಷೆಗಳು.
– ಕೆ. ಶ್ರೀನಿವಾಸ ರಾವ್, ಹರಪನಹಳ್ಳಿ