Advertisement

ಅಣ್ಣ-ತಂಗಿಯ ವೇಣು ಗಾಯನ

06:00 AM Apr 13, 2018 | |

ಕಾರ್ಕಳ ಮಾಳದ ಡೋಂಗ್ರೆ ಅನಂತ ಶಾಸ್ತ್ರೀ ಸಾಂಸ್ಕೃತಿಕ ಕಲಾವೇದಿಕೆ ಕಾರ್ಕಳದ ಕರ್ನಾಟಕ ಸಂಗೀತಾಸಕ್ತರಿಗೆ ವಿನೂತನ ರಸದೌತಣವನ್ನು ಇತ್ತೀಚೆಗೆ ಉಣಬಡಿಸಿತು. ಚೆನ್ನೈಯ ಜೆ. ಬಿ. ಶ್ರುತಿಸಾಗರ್‌ ಮತ್ತು ಜೆ. ಬಿ. ಕೀರ್ತನಾರ ತನ್ಮಯತೆಯ ವೇಣು ಗಾಯನ ಎರಡು ಗಂಟೆಗಳಷ್ಟು ಕಾಲ ಶ್ರೋತೃಗಳನ್ನು ನಾದಲೋಕದಲ್ಲಿ ತಲ್ಲೀನಗೊಳಿಸಿತು. 

Advertisement

ಕಾನಡ ರಾಗದ ಅಟತಾಳ ವರ್ಣ ನೇರನಮ್ಮಿ… ಈ ಯುವ ಕಲಾವಿದರ ಪ್ರೌಢಿಮೆಯ ಬಗ್ಗೆ ಆರಂಭದಲ್ಲಿಯೇ ಭರವಸೆ ಮೂಡಿಸಿತು. ವರ್ಣದ ಪ್ರಸ್ತುತಿಯ ಗತಿ ಹೆಚ್ಚಿದಂತೆ ಕಲಾವಿದರ ಉತ್ಸಾಹ ಗರಿಗೆದರಿತು. ಪುರಂದರದಾಸರ ಜನಪ್ರಿಯ ಕೃತಿ ಗಜವದನ ಬೇಡುವೆ… ಕೇಳುಗರನ್ನು ಕಲಾವಿದರಿಗೆ ಹತ್ತಿರವಾಗಿಸಿತು. ಸುಬ್ರಹ್ಮಣ್ಯನ (ಮುರುಗ) ಮೇಲಿನ ತಮಿಳು ಕೃತಿಯ ಬಳಿಕ ಜನರಂಜನಿ ರಾಗದ ಪಾಹಿಮಾಂ ಶ್ರೀ ರಾಜರಾಜೇಶ್ವರಿ… ರಂಜಿಸಿತು.

ರೀತಿಗೌಳ ರಾಗದ ನನ್ನು ವಿಡಚಿ…ಯ ಸವಿಸ್ತಾರವಾದ ಪ್ರಸ್ತುತಿ ಕಲಾವಿದರ ಪರಸ್ಪರ ಹೊಂದಾಣಿಕೆಯ ನಡೆಗೆ ಸಾಕ್ಷಿಯಾಯಿತು. ನಿರೋಷ್ಟದಲ್ಲಿ ರಾಜರಾಜ ರಾಧಿತೆ ಸೊಗಸಾಗಿ ಮೂಡಿಬಂತು.ವಿಸ್ತƒತವಾಗಿ ಕಾಪಿ ರಾಗದಲ್ಲಿ ಮೂಡಿ ಬಂದ ತ್ಯಾಗರಾಜರ ಕೀರ್ತನೆ ಇಂತ ಸೌಖ್ಯಮನಿ… ಅಣ್ಣ-ತಂಗಿಯರ ಪ್ರಬುದ್ಧತೆಗೆ ಒರೆಗಲ್ಲಾಯಿತು. ಕಾರ್ಯಕ್ರಮದಲ್ಲಿ ಆಲಾಪನೆಯ ಪ್ರಸ್ತುತಿಯನ್ನೂ ಕೊಳಲು ಮತ್ತು ಗಾಯನದಲ್ಲಿ ವಿಭಜಿಸಿಕೊಂಡು ಕಿಂಚಿತ್ತೂ ಗೊಂದಲವಿಲ್ಲದೇ ನಿರ್ವಹಿಸಿದರು. ಸಿಂಧುಭೈರವಿ ರಾಗದಲ್ಲಿ ಪುರಂದರದಾಸರ ವೆಂಕಟಾಚಲನಿಲಯಂ…ದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. 

ಶ್ರುತಿ ಸಾಗರರು ಆರಂಭಿಕ ಶಿಕ್ಷಣವನ್ನು ಕೊಳಲುವಾದಕ ಬಾಲ ಸಾಯಿಯವರಿಂದ ಪಡೆದರೂ, ಅವರ ಸುದೀರ್ಘ‌ ಕಲಿಕೆ ಗಾಯಕ ಕಲೈಮಾಮಣಿ ಡಾ. ಸುಂದರಂ ಸುಬ್ರಹ್ಮಣ್ಯಂ ಅವರೊಂದಿಗೆ. ತಂಗಿ ಕೀರ್ತನಾರ ಹಾಡುಗಾರಿಕೆಯ ತರಬೇತಿಯೂ ಜತೆಯಾಗಿಯೇ ನಡೆಯಿತು. ಬಹುಶಃ ಈ ಕಾರಣದಿಂದಾಗಿ ಶ್ರುತಿ ಸಾಗರರ ಕೊಳಲು ನುಡಿಯುವುದಿಲ್ಲ, ಉಲಿಯುತ್ತದೆ. ಕೊಳಲು ಅವರ ಕಂಠವಾಗಿದೆ. ಅವರೀರ್ವರ ದ್ವಂದ್ವ ಪ್ರಸ್ತುತಿ ಯಾವುದೇ ದ್ವಂದ್ವವಿಲ್ಲದೆಯೇ ಸಾಗುತ್ತದೆ.ಎನಿತೂ ಪಲ್ಲಟವಾಗದ ಶ್ರುತಿಗೆ ಈ ಯುವ ಕಲಾವಿದ ಅನ್ವರ್ಥನಾಮ. 

ಕೀರ್ತನಾರವರದ್ದು ಕಂಚಿನ ಕಂಠವಲ್ಲದಿದ್ದರೂ, ಸ್ವರ ಸಂಚಾರ, ಭಾವ ತೀವ್ರತೆ ಮತ್ತು ತನ್ಮಯತೆಗಳು ಅವರನ್ನು ವಿಶಿಷ್ಟ ಶಾರೀರದ ಉತ್ಛ ಮಟ್ಟದ ಕಲಾವಿದೆಯಾಗಿ ರೂಪಿಸಿವೆ.ವೈಣಿಕರ ಕುಟುಂಬದಲ್ಲಿ ಜನಿಸಿದ ಈ ಒಡಹುಟ್ಟಿದವರು ಕೊಳಲು ಮತ್ತು ಹಾಡುಗಾರಿಕೆಯಲ್ಲಿ ಎಳೆಯ ವಯಸ್ಸಿನಲ್ಲಿಯೇ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅಣ್ಣ-ತಮ್ಮ, ಅಕ್ಕ-ತಂಗಿಯರು, ಒಂದೇ ಕಲಾಪ್ರಕಾರದಲ್ಲಿ ಕಾಣಸಿಗುವ ಉದಾಹರಣೆಗಳು ಬಹಳಷ್ಟಿವೆ. ಆದರೆ ಶ್ರುತಿ ಸಾಗರ್‌ ಮತ್ತು ಕೀರ್ತನಾ ಅಣ್ಣ-ತಂಗಿಯರ ಜೋಡಿ ವಿಭಿನ್ನ ಪೂರಕ ಮಾಧ್ಯಮಗಳ ಮೂಲಕ ಸಮಾನ ಅಭಿವ್ಯಕ್ತಿಯನ್ನು ಸಾಧಿಸುವಲ್ಲಿ ಸಫ‌ಲರಾಗಿದ್ದಾರೆ. 

Advertisement

ಮೃದಂಗದಲ್ಲಿ ಪಾಲಕ್ಕಾಡ್‌ ಜಯಕೃಷ್ಣನ್‌ ಮತ್ತು ಮೊರ್ಸಿಂಗ್‌ನಲ್ಲಿ ಕಲಾಮಂಡಲಂ ಶೈಜು ದ್ವಂದ್ವ ಪ್ರಸ್ತುತಿಯ ಯಶಸ್ಸಿಗೆ ಸಮರ್ಥವಾಗಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಗುರು ಡಾ| ಸುಂದರಂ ಸುಬ್ರಮಣ್ಯಂರವರ ಉಪಸ್ಥಿತಿ ವಿಶೇಷವಾಗಿತ್ತು.
 
ಸಾಣೂರು ಇಂದಿರಾ ಆಚಾರ್ಯ 

Advertisement

Udayavani is now on Telegram. Click here to join our channel and stay updated with the latest news.

Next