Advertisement

ಸಿಲಿಕಾನ್‌ ಸಿಟಿಯಲ್ಲಿ ಅಣ್ಣ-ತಮ್ಮನ ಜುಗಲ್‌ಬಂದಿ

11:59 AM May 31, 2017 | |

ಶ್ರೀನಗರ ಕಿಟ್ಟಿ ಹಾಗೂ ಸೂರಜ್‌ ಗೌಡ ಇವರಿಬ್ಬರೂ ಇದೇ ಮೊದಲ ಬಾರಿಗೆ  ಒಟ್ಟಿಗೆ ನಟಿಸಿದ್ದಾರೆ. “ಸಿಲಿಕಾನ್‌ ಸಿಟಿ’ ಇವರಿಬ್ಬರ ಕಾಂಬಿನೇಷನ್‌ನ ಮೊದಲ ಸಿನಿಮಾ. ಈಗಾಗಲೇ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದು ತಮಿಳಿನ “ಮೆಟ್ರೋ’ ಚಿತ್ರದ ರಿಮೇಕ್‌. ಹಾಗಂತ, ಯಥಾವತ್‌ ಅದೇ ರೂಪ ಇಲ್ಲಿ ಮೂಡಿ ಬಂದಿಲ್ಲ. ಕನ್ನಡಕ್ಕೆ ಏನೆಲ್ಲಾ ಬೇಕೋ ಅದನ್ನು ಅಳವಡಿಸಿಕೊಂಡೇ ಪ್ರೇಕ್ಷಕರ ಎದುರು ಬರಲು ತಯಾರಿ ಮಾಡಿಕೊಂಡಿದೆ ಚಿತ್ರತಂಡ. ಮುರಳಿ ಗುರಪ್ಪ ಈ ಚಿತ್ರದ ನಿರ್ದೇಶಕರು. ರವಿ ಗೆಳೆಯನ ನಿರ್ದೇಶನದ ಚಿತ್ರಕ್ಕೆ ನಿರ್ಮಾಣದಲ್ಲಿ ಸಾಥ್‌ ಕೊಟ್ಟಿದ್ದಾರೆ. ಈ ಸಿನಿಮಾದ ಪಾತ್ರ ಮತ್ತು ಅನುಭವ ಕುರಿತು ನಾಯಕ ಸೂರಜ್‌ಗೌಡ ಹಾಗೂ ಚಿತ್ರತಂಡ ಒಂದಷ್ಟು ಮಾತನಾಡಿದೆ.

Advertisement

“ಮದುವೆಯ ಮಮತೆಯ ಕರೆಯೋಲೆ’ ಚಿತ್ರದಲ್ಲಿ ನಟಿಸಿದ್ದ ಸೂರಜ್‌ಗೌಡ ಇದೀಗ ಶ್ರೀನಗರ ಕಿಟ್ಟಿ ಅಭಿನಯದ “ಸಿಲಿಕಾನ್‌ ಸಿಟಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಇದು ಹೊಸ ಇಮೇಜ್‌ ತಂದುಕೊಡುವಂತಹ ಚಿತ್ರವಾಗಲಿದೆಯಂತೆ. ಅವರೇ ಹೇಳುವಂತೆ, “ಈ ಸಿನಿಮಾ ನೋಡಿದವರು ನನ್ನನ್ನು ಹೊಸ ಸೂರಜ್‌ನನ್ನಾಗಿ ನೋಡುತ್ತಾರೆ. ಯಾಕೆಂದರೆ, ಮೊದಲ ಚಿತ್ರದಲ್ಲಿ ಎಲ್ಲರೂ ನನ್ನನ್ನು ಲವ್ವರ್‌ಬಾಯ್‌ ಆಗಿ, ಚಾಕೋಲೆಟ್‌ ಹೀರೋ ಆಗಿ ನೋಡಿದ್ದರು.

ಆದರೆ, ಇಲ್ಲಿ ಬೇರೆಯದ್ದೇ ಪಾತ್ರವಿದೆ. ಖಂಡಿತವಾಗಿಯೂ ಊಹೆ ಮಾಡುವುದಕ್ಕೂ ಸಾಧ್ಯವಿಲ್ಲದ ಪಾತ್ರವದು. ಆ ಕುತೂಹಲವಿದ್ದರೆ, ಎಲ್ಲರೂ “ಸಿಲಿಕಾನ್‌ ಸಿಟಿ’ ಸಿನಿಮಾ ನೋಡಲೇಬೇಕು’ ಎಂಬುದು ಸೂರಜ್‌ ಗೌಡ ಮಾತು. “ಸಿನಿಮಾ ಟೀಮ್‌ ಬಗ್ಗೆ ಹೇಳುವುದಾದರೆ, ಅದೊಂದು ಒಳ್ಳೆಯ ತಂಡ. ಅಷ್ಟೇ ಚೆನ್ನಾಗಿರುವ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡಿದ ಖುಷಿ ನನ್ನದು. ನಟನಾಗಿ ಒಳ್ಳೇ ಸಿನಿಮಾದಲ್ಲಿ ಮರೆಯಲಾರದಂತಹ ಪಾತ್ರ ಮಾಡಿರುವ ತೃಪ್ತಿ ನನಗಿದೆ.

ಇದುವರೆಗೆ ಮಾಡಿದ ಪಾತ್ರಗಳಿಗಿಂತಲೂ ವಿಭಿನ್ನವಾಗಿದೆ. ಚಿತ್ರೀಕರಣ ನಡೆದ ಪ್ರತಿ ದಿನವೂ ಕೂಡ ನಾನು ಎಂಜಾಯ್‌ ಮಾಡಿಕೊಂಡೇ ಕೆಲಸ ಮಾಡಿದ್ದೇನೆ. ಅಂತಹ ವಾತಾವರಣ ಈ ಚಿತ್ರತಂಡದಲ್ಲಿತ್ತು. ಇನ್ನು, ಇದು ತಮಿಳಿನ “ಮೆಟ್ರೋ’ ಚಿತ್ರದ ರೀಮೇಕ್‌. ಆದರೂ, ಇಲ್ಲಿ ಕನ್ನಡತನ ಬಿಟ್ಟಿಲ್ಲ. ಕನ್ನಡದ ನೇಟಿವಿಟಿಗೆ ತಕ್ಕಂತೆಯೇ ಚಿತ್ರ ಮಾಡಿದ್ದೇವೆ. ಇನ್ನು, ಪಾತ್ರದ ಬಗ್ಗೆ ಹೇಳುವುದಾದರೆ, ನನ್ನದು ಎರಡು ಶೇಡ್‌ನ‌ಲ್ಲಿ ಬರುವಂತಹ ಪಾತ್ರ ಇದೆ. ಆ ಪಾತ್ರದಲ್ಲಿ ಸಾಕಷ್ಟು ವಿಭಿನ್ನತೆಯೂ ಇದೆ.  

ನನ್ನ ಹಿಂದಿನ ಚಿತ್ರದಲ್ಲಿ ಪಾತ್ರಕ್ಕಿಂತಲೂ ಇಲ್ಲಿ ಹೊಸದಾಗಿದೆ. ನೋಡಿದವರೆಲ್ಲರಿಗೂ ಹೀಗೂ ಮಾಡಿದ್ದಾರಾ ಅನ್ನುವಷ್ಟರಮಟ್ಟಿಗೆ ಆ ಪಾತ್ರವಿದೆ.  ಒಳ್ಳೆಯ ಕಥೆ ಇದ್ದಾಗ, ಒಳ್ಳೆಯ ಚಿತ್ರ ತಯಾರಾಗುತ್ತದೆ. ಅದು “ಸಿಲಿಕಾನ್‌ ಸಿಟಿ’ಯಲ್ಲಾಗಿದೆ. ಎಲ್ಲಾ ಪಾತ್ರಗಳಿಗೂ ಇಲ್ಲಿ ಪ್ರಾಮುಖ್ಯತೆ ಕೊಡಲಾಗಿದೆ. ಮೊದಲೇ ಹೇಳಿದಂತೆ ಚಿತ್ರತಂಡದ ಜತೆ ಕೆಲಸ ಮಾಡಿದ್ದು ಮರೆಯದ ಅನುಭವ. ಎಲ್ಲರೂ ಚಿತ್ರೀಕರಣ ಸಂದರ್ಭದಲ್ಲಿ ಕುಟುಂಬದಂತೆ ಕೆಲಸ ಮಾಡಿದ್ದು ವಿಶೇಷ.

Advertisement

ಒಂದು ಸಿನಿಮಾದಲ್ಲಿ ಕೆಲಸ ಮಾಡುವವರಿಗೆ ಇದಕ್ಕಿಂತ ಬೇರೇನು ಬೇಕು?’ ಎನ್ನುತ್ತಾರೆ ಸೂರಜ್‌ ಗೌಡ. “ಸಿನಿಮಾದಲ್ಲಿ ಎಲ್ಲವೂ ಸ್ಟ್ರಾಂಗ್‌ ಆಗಿದೆ. ಮುಖ್ಯವಾಗಿ ತಂತ್ರಜ್ಞರ ಬಗ್ಗೆ ಹೇಳಲೇಬೇಕು. ಎಲ್ಲರಲ್ಲೂ ಪಾಸಿಟಿವ್‌ ಇತ್ತು. ಯಾರೊಬ್ಬರಿಗೂ ಟೀಮ್‌ನಲ್ಲಿ ನರ್ವಸ್‌ ಅನ್ನೋದೇ ಇರಲಿಲ್ಲ. ಹಾಗಾಗಿಯೇ ಚಿತ್ರ ನಾವಂದುಕೊಂಡದ್ದಕ್ಕಿಂತಲೂ ಸೊಗಸಾಗಿ ಮೂಡಿಬಂದಿದೆ. ಇನ್ನು ಕಿಟ್ಟಿ ಬ್ರದರ್‌ ಜತೆ ಮೊದಲ ಸಿನಿಮಾ ಇದು. ಅವರು ನನ್ನ ಅಣ್ಣನಾಗಿ ಇಲ್ಲಿ ನಟಿಸಿದ್ದಾರೆ.

ಅವರು ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಅಣ್ಣನಂತೆ ಇದ್ದಾರೆ. ಪ್ರತಿ ಸೀನ್‌ನಲ್ಲೂ ನಾವಿಬ್ಬರೂ ಮುಂಚಿತವಾಗಿ ಚರ್ಚೆ ನಡೆಸಿಯೇ ಕೆಲಸ ಮಾಡುತ್ತಿದ್ದೆವು. ಅವರಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ.ಇದೊಂದು ಅಣ್ಣತಮ್ಮಂದಿರ ನಡುವಿನ ಸ್ಟೋರಿ. ಇಲ್ಲಿ ತಾಯಿ, ತಂದೆ, ಗೆಳೆಯರು, ಪ್ರೀತಿ ಎಲ್ಲವೂ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಒಂದು ಸೆಂಟಿಮೆಂಟ್‌ ಇದೆ. ಅದೇ ಇಲ್ಲಿನ ಹೈಲೆಟ್‌. ಸಿನಿಮಾ ನೋಡಿ ಹೊರಬಂದವರಿಗೆ ಒಂದು ದೃಶ್ಯ ಕಾಡದೇ ಇರದು.

ಅದನ್ನು ಈಗಲೇ ಹೇಳಿಬಿಟ್ಟರೆ ಮಜ ಇರುವುದಿಲ್ಲ. ಅದನ್ನು ಚಿತ್ರಮಂದಿರದಲ್ಲೇ ನೋಡಬೇಕು. ಕಾಲೇಜ್‌ಗೆ ಹೋಗುವ ಮಗ ಯಾವುದೋ ಒಂದು ಘಟನೆಯಲ್ಲಿ ತಪ್ಪು ದಾರಿ ತುಳಿದುಬಿಟ್ಟರೆ, ಆ ಕುಟುಂಬದ ಮನಸ್ಥಿತಿ ಹೇಗಾಗಬೇಡ. ಅದು ಕೂಡ ಇಲ್ಲಿ ಕಾಡುತ್ತಾ ಹೋಗುತ್ತದೆ. ಇದು ರೀಮೇಕ್‌ ಸಿನಿಮಾ. ಹಾಗಂತ ಸುಲಭವಾಗಿ ಈ ಚಿತ್ರ ಮೂಡಿಬಂದಿಲ್ಲ. ಸಾಮಾನ್ಯವಾಗಿ ಒಂದು ಹಿಟ್‌ ಸಿನಿಮಾವನ್ನು ಇಲ್ಲಿ ಮಾಡಬೇಕಾದರೆ, ಅದಕ್ಕಿಂತಲೂ ಚೆನ್ನಾಗಿಯೇ ಮಾಡಬೇಕು.

ಸಾಕಷ್ಟು ಬದಲಾವಣೆಯೊಂದಿಗೆ, ಇಲ್ಲಿನ ಮಂದಿಗೆ ಇಷ್ಟವಾಗುವಂತೆ ನಿರ್ದೇಶಕ ಮುರಳಿ ಗುರಪ್ಪ ಮಾಡಿದ್ದಾರೆ. ನಿರ್ಮಾಪಕ ರವಿ ಸರ್‌ ಕೂಡ ಸಿನಿಮಾಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಒದಗಿಸಿ, ಅದ್ಧೂರಿಯಾಗಿಸಿದ್ದಾರೆ. ಅನೂಪ್‌ ಸೀಳಿನ್‌ ಅವರ ಸಂಗೀತ ಚಿತ್ರದ ಪ್ಲಸ್‌ ಎನ್ನಬಹುದು’ ಎನ್ನುತ್ತಾರೆ ಸೂರಜ್‌ಗೌಡ. “ಸಿಲಿಕಾನ್‌ ಸಿಟಿ’ ಚಿತ್ರವನ್ನು ರವಿ ಹಾಗೂ ಮಂಜುಳ ಸೋಮಶೇಖರ್‌ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು ಇಷ್ಟು ವರ್ಷ ಸಂಕಲನಕಾರರಾಗಿ ದುಡಿದಿದ್ದ ಮುರಳಿ ಗುರಪ್ಪ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರಕ್ಕೆ ಶ್ರೀನಿವಾಸ್‌ ರಾಮಯ್ಯ ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಕಾಂತ್‌ ಸಂಕಲನವಿದೆ. ಚಿನ್ನ ಅವರು ಹಿನ್ನೆಲೆ ಸಂಗೀತ ನೀಡಿದರೆ, ಅನೂಪ್‌ ಸೀಳಿನ್‌ ಹಾಗೂ ಜೋಹಾನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಐದು ಹಾಡುಗಳಿದ್ದು, ಅರಸು ಅಂತಾರೆ ಮತ್ತು ಮಮತಾ ಜಗನ್ಮೋಹನ್‌ ಗೀತೆಗಳನ್ನು ರಚಿಸಿದ್ದಾರೆ. ಶ್ರೀನಗರ ಕಿಟ್ಟಿ ಅವರಿಗೆ ಕಾವ್ಯಾಶೆಟ್ಟಿ ಜೋಡಿಯಾಗಿದ್ದರೆ, ಸೂರಜ್‌ಗೌಡ ಅವರಿಗೆ ಯಕ್ತಾ ರಾಥೋಡ್‌ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಅಶೋಕ್‌, ತುಳಸಿ ಶಿವಮಣಿ, ಚಿಕ್ಕಣ್ಣ, ಕಡ್ಡಿ ವಿಶ್ವ, ಗಿರಿ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next