ಹನೂರು (ಚಾಮರಾಜನಗರ): ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ತಮಗೆ ಕೆಲಸ ನೀಡುವಲ್ಲಿ ವಿಫಲವಾಗಿರುವ ಟೆಂಡರ್ ದಾರರನ್ನು ರದ್ದುಮಾಡಿ ನಿಯಮಾನುಸಾರ ಕ್ರಮ ವಹಿಸಿ ತಮಗೆ ಉದ್ಯೋಗ ಕಲ್ಪಿಸಿಕೊಡುವಂತೆ ತಾಲೂಕಿನ ಚಿಕ್ಕಮರೂರು ಗ್ರಾಮದ ಗಿರಿಜನರು ಆಗ್ರಹಿಸಿದ್ದಾರೆ.
ಪೊನ್ನಾಚಿ ಗ್ರಾಮ ಪಂಚಾಯಿತಿ ಸುತ್ತಮುತ್ತಲ ಗಿರಿಜನರು ತಮ್ಮ ಜೀವನೋಪಾಯಕ್ಕಾಗಿ ಪೊರಕೆ ಹುಲ್ಲು ಸಂಗ್ರಹಣೆಯನ್ನು ನಂಬಿಕೊಂಡು ಬಂದಿದ್ದು ಕಳೆದ ಏಪ್ರಿಲ್‍ನಿಂದ ಪೊರಕೆ ಹುಲ್ಲು ಸಂಗ್ರಹಣೆ ಕೆಲಸವನ್ನು ಪ್ರಾರಂಭಿಸದೆ ಇರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ.ಹೀಗಾಗಿ, ಕೂಡಲೇ ಟೆಂಡರುದಾರರಿಗೆ ಕೆಲಸ ಪ್ರಾರಂಭಿಸಲು ಸೂಚನೆ ನೀಡಬೇಕು ಎಂಬುದು ಇವರ ಆಗ್ರಹವಾಗಿದೆ.
ಆದರೆ ಟೆಂಡರುದಾರರ ನಡುವಿನ ಹಗ್ಗಜಗ್ಗಾಟದಿಂದ ತಮಗೆ ಉದ್ಯೋಗ ಇಲ್ಲದಂತಾಗಿದ್ದು ಕೂಲಿ ಕೆಲಸವೂ ಇಲ್ಲದೆ ಪರಿತಪಿಸುವಂತಾಗಿದೆ. ಮೊದಲೇ ಕಳೆದ 6 ತಿಂಗಳಿನಿಂದ ಕೋವಿಡ್ 19 ಮಹಾಮಾರಿಯಿಂದ ತತ್ತರಿಸಿರುವ ಜನತೆಗೆ ಇದೀಗ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಉದ್ಯೋಗ ದೊರಕದೆ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಟೆಂಡರ್ ನಿಯಮ ಉಲ್ಲಂಘಿಸಿ ಅಕ್ರಮ: ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ನಿಯಮಾನುಸಾರ ಪೊರಕೆ ಹುಲ್ಲು ಖರೀದಿಗೆ ಹೆಚ್ಚಿನ ದರ ಬಿಡ್ ಮಾಡಿರುವವರಿಗೆ ಆದೇಶ ಪತ್ರ ನೀಡಬೇಕು.
ಒಂದೊಮ್ಮೆ 1ನೇ ಬಿಡ್‍ದಾರ ನಿಗದಿತ ಅವಧಿಯಲ್ಲಿ ನಿಗದಿತ ಮೊತ್ತ ಪಾವತಿಸಿ ಕೆಲಸ ಪ್ರಾರಂಭಿಸದಿದ್ದಲ್ಲಿ 2ನೇ ಬಿಡ್‍ದಾರನಿಗೆ ಆದೇಶ ಪತ್ರ ನೀಡಬೇಕು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದ್ದು ಹುಚ್ಚಯ್ಯ ಎಂಬಾತ 39ರೂ ನೀಡುವುದಾಗಿಯೂ, ದೇವರಾಜು ಎಂಬುವವರು 28.75ರೂಗೂ ಖರೀದಿ ಮಾಡುವುದಾಗಿ ಬಿಡ್ ಸಲ್ಲಿಸಿದ್ದರು.
ಬಳಿಕ ನಿಯಮಾನುಸಾರ ಹುಚ್ಚಯ್ಯ ಎಂಬಾತನಿಗೆ ಆದೇಶ ಪತ್ರ ನೀಡಲಾಗಿತ್ತು. ಆದರೆ ಟೆಂಡರ್ ಪ್ರಕ್ರಿಯೆ ವೇಳೆ 2ಲಕ್ಷ ಇಎಂಡಿ ಮೊತ್ತ ಪಾವತಿಸಿದ್ದ ಹುಚ್ಚಯ್ಯ ಬಾಕಿ ಹಣ ಪಾವತಿಸಿ ಕೆಲಸ ಪ್ರಾರಂಭಿಸಲು ವಿಫಲನಾಗಿದ್ದಾನೆ.
ಆದುದರಿಂದ 1ನೇ ಬಿಡ್‍ದಾರನಾದ ಹುಚ್ಚಯ್ಯನ 2 ಲಕ್ಷ ಇಎಂಡಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು 2ನೇ ಬಿಡ್‍ದಾರರಾದ ದೇವರಾಜು ಎಂಬುವವರಿಗೆ ಆದೇಶ ಪತ್ರ ನೀಡಿ ಕೆಲಸ ನೀಡಬೇಕಿದ್ದ ಸಂಘದ ಕೆಲವರು ಹುಚ್ಚಯ್ಯ ಎಂಬಾತನಿಗೆ 29ರೂಗೆ ಖರೀದಿ ಮಾಡುವಂತೆ ಸೂಚಿಸಿ ಸಂಘದಲ್ಲಿ ನಿರ್ಣಯ ಕೈಗೊಳ್ಳಲು ತಯಾರಾಗಿದ್ದಾರೆ.
ಇದರಿಂದ 2ನೇ ಬಿಡ್‍ದಾರನಾದ ನನಗೆ ಅನ್ಯಾಯವಾಗುವುದರ ಜೊತೆಗೆ ಸಂಘಕ್ಕೂ ನಷ್ಟ ಉಂಟಾಗಲಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು 2ನೇ ಬಿಡ್‍ದಾರರಾದ ದೇವರಾಜು ಆಗ್ರಹಿಸಿದ್ದಾರೆ.
ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ನಡೆದಿದ್ದು ಟೆಂಡರುದಾರರು ಕೆಲಸವನ್ನೂ ಪ್ರಾರಂಭಿಸಿದ್ದಾರೆ. ಆದರೆ ಕೋವಿಡ್ 19 ಹಿನ್ನೆಲೆ ತಮಗೆ ಸ್ವಲ್ಪ ರಿಯಾಯಿತಿ ನೀಡುವಂತೆ ಟೆಂಡರುದಾರರು ಮನವಿ ಮಾಡಿದ್ದು, ಈ ಸಂಬಂಧ ಚರ್ಚೆ ನಡೆಸಲು ಸಂಘದ ನಿರ್ದೇಶಕರ ಸಭೆಯನ್ನು ಶುಕ್ರವಾರ ಸಭೆ ಕರೆಯಲಾಗಿದ್ದು ಸಭೆಯಲ್ಲಿ ಚರ್ಚಿಸಲಾಗುವುದು.
– ವನಿತಾ, ಎಸಿಎಫ್ ಮತ್ತು ಸೊಸೈಟಿ ಅಧ್ಯಕ್ಷೆ