ವರದಿ: ಶಶಿಧರ್ ಬುದ್ನಿ
ಧಾರವಾಡ: 12ನೇ ಶತಮಾನದ ಕಲ್ಯಾಣ ಕ್ರಾಂತಿ ಬಳಿಕ ಬಸವಾದಿ ಶರಣರ ವಚನಗಳ ಸಂರಕ್ಷಣೆ ಮಾಡುತ್ತ ಉಳವಿಗೆ ಬಂದು ನೆಲೆಸಿದ ಶ್ರೀಚನ್ನಬಸವೇಶ್ವರು ಈ ಭಾಗದ ಜನರ ಆರಾಧ್ಯ ದೈವ. ಅವರ ಸ್ಮರಣೆಯ ಹಿನ್ನೆಲೆಯಲ್ಲಿ ಸಾಕಷ್ಟು ದೇವಸ್ಥಾನಗಳೂ ಇವೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಅವರ ಪುತ್ಥಳಿ ಅನಾವರಣ ಆಗಿರಲಿಲ್ಲ. ಈಗ ಅದು ಈಡೇರಿಕೆ ಆಗಿದ್ದು, ನಗರದಲ್ಲಿ ನೂತನ ಮಾದರಿಯಲ್ಲಿ ಅವರ ಹೆಸರಿನ ವೃತ್ತದ ನಿರ್ಮಾಣ ಕಾರ್ಯ ಸದ್ದಿಲ್ಲದೇ ಸಾಗಿದೆ.
ಇಲ್ಲಿಯ ಉಳವಿಯ ಶ್ರೀ ಚನ್ನಬಸವೇಶ್ವರ ದೇವಸ್ಥಾನ ವತಿಯಿಂದ ದೇವಸ್ಥಾನ ಸನಿಹದಲ್ಲಿರುವ ಶ್ರೀ ಚನ್ನಬಸವೇಶ್ವರ ವೃತ್ತದಲ್ಲಿ ಅಂದಾಜು 20 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ಮಾದರಿ ವೃತ್ತ ನಿರ್ಮಾಣ ಆಗುತ್ತಿದ್ದು, ಇದೀಗ ಈ ಕಾರ್ಯ ಅಂತಿಮ ಘಟಕ್ಕೆ ಬಂದು ನಿಂತಿದೆ. ಧಾರವಾಡದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದ ಪ್ರಧಾನ ಅಂಚೆ ಕಚೇರಿ ಎದುರಿನ ವೃತ್ತದಲ್ಲಿ ಉಳವಿ ಚನ್ನಬಸವೇಶ್ವರ ಧರ್ಮಫಂಡ್ ಸಂಸ್ಥೆ ತನ್ನ ಸ್ವಂತ ಖರ್ಚಿನಲ್ಲಿ ವೃತ್ತ ನಿರ್ಮಿಸುತ್ತಿದೆ. ಈ ವೃತ್ತದ ಸನ್ನಿಹಿತದಲ್ಲಿ ಉಳವಿ ಚನ್ನಬಸವೇಶ್ವರ ದೇವಸ್ಥಾನವೂ ಇದೆ. ಲಿಂಗಾಯತ ತತ್ವಾಧಾರಿತ ಕಟ್ಟೆ ಈ ವೃತ್ತ ಹೆಸರಿಗೆ ಮಾತ್ರ ಇರದೇ ಜನರಿಗೆ ಶರಣ ಸಂಸ್ಕೃತಿಯ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ.
ವೃತ್ತದಲ್ಲಿ 9 ಅಡಿ ಎತ್ತರದ ಚನ್ನಬಸವಣ್ಣವರ ಕಂಚಿನ ಮೂರ್ತಿ ಜತೆಗೆ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಲಗಳ ಮಾಹಿತಿ ಇರುವುದು ವಿಶೇಷ. ಸುಮಾರು 50 ಚದರ ಅಡಿ ಜಾಗದಲ್ಲಿ ಈ ವೃತ್ತ ನಿರ್ಮಾಣವಾಗುತ್ತಿದೆ. ಬೇಸ್‌ಮೆಂಟ್ ಮೇಲೆ ಅಷ್ಟ ಕೋನಾಕಾರದ ಕಟ್ಟೆ ನಿರ್ಮಿಸಿ ಪ್ರತಿ ಕಟ್ಟೆ ಮೇಲೆ ಅಷ್ಟಾವರಣ ನಮೂದಿಸಲಾಗುತ್ತದೆ. ಇದರ ಮೇಲಿನ 5 ಕೋನಾಕಾರದ ಕಟ್ಟೆ ಮೇಲೆ ಪಂಚಾಚಾರ ಹಾಗೂ 6 ಮೆಟ್ಟಿಲುಗಳನ್ನು ನಿರ್ಮಿಸಿ ಮೇಲೆ ಷಟ್‌ಸ್ಥಲಗಳನ್ನು ನಮೂದಿಸಲಾಗುತ್ತದೆ. ಇವುಗಳ ಮೇಲೆ ಶ್ರೀ ಚೆನ್ನಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಇದರ ಸುತ್ತ ಗಿಡಗಳನ್ನು ಸಹ ನೆಡುವ ಮೂಲಕ ಪರಿಸರ ಸೌಂದರ್ಯಕ್ಕೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಕೇವಲ ವೃತ್ತ ನಿರ್ಮಿಸಿದರೆ ಸಾಲದು. ಅವುಗಳಿಂದ ಜನರಿಗೂ ಮಾಹಿತಿ ಸಿಗಬೇಕಲ್ಲದೆ, ಕುತೂಹಲದಿಂದ ವೀಕ್ಷಿಸುವಂತಾಗಲಿ ಎಂಬ ಉ¨ªೇಶ ದೇವಸ್ಥಾನ ಸಮಿತಿಯದ್ದಾಗಿದೆ.
9 ಅಡಿಯ ಕಂಚಿನ ಪುತ್ಥಳಿ: ಕೊಲ್ಲಾಪೂರದ ಶೈಲೇಂದ್ರ ಸಾಣಿ ಅವರ ಕೈಯಲ್ಲಿ 9 ಅಡಿ ಎತ್ತರ ಕಂಚಿನ ಪುತ್ಥಳಿ ರೂಪ ಪಡೆದಿದ್ದು, ಇದಕ್ಕಾಗಿ 9 ಲಕ್ಷ ರೂ.ವ್ಯಯಿಸಲಾಗಿದೆ. 4 ತಿಂಗಳಲ್ಲಿ ಈ ಪುತ್ಥಳಿ ನಿರ್ಮಿಸಲಾಗಿದೆ. ಈಗಾಗಲೇ ಧಾರವಾಡಕ್ಕೆ ಈ ಪುತ್ಥಳಿ ತರಲಾಗಿದೆ. ಇದಲ್ಲದೇ ವೃತ್ತದಲ್ಲಿ ಈಗಾಗಲೇ ಇರಿಸಲಾಗಿದ್ದು, ಅದರ ಅಡಿಯಲ್ಲಿ ವೃತ್ತ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕೇವಲ ಶೇ.20 ಕಾಮಗಾರಿ ಬಾಕಿ ಉಳಿದಿದ್ದು, ಇದಾದ ಬಳಿಕ ಉದ್ಯಾನವನ ರೂಪಿಸಿ ವೃತ್ತ ಅನಾವರಣಗೊಳಿಸಲು ಉದ್ದೇಶಿಸಲಾಗಿದೆ. ಮಹಾನಗರ ಪಾಲಿಕೆ ಜಾಗ ನೀಡಲು ಒಪ್ಪಿದರೆ ವೃತ್ತ ನಿರ್ಮಿಸುವುದಾಗಿ ಪಾಲಿಕೆಗೆ ದೇವಸ್ಥಾನ ಸಮಿತಿ ಮನವಿ ಮಾಡಿತ್ತು. ಈ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪಾಲಿಕೆ 2004ರಲ್ಲಿ ಅನುಮತಿ ನೀಡಿತ್ತು. ಆದರೆ ಕೆಲ ತಾಂತ್ರಿಕ ಹಿನ್ನೆಲೆ ಹಾಗೂ ಅನುದಾನ ಕೊರತೆಯಿಂದ ಈ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಆದರೆ ಆ ಬಳಿಕ ಕಳೆದ 5-6 ತಿಂಗಳ ಹಿಂದೆ ಚಾಲನೆ ಲಭಿಸಿತ್ತು. ಇದೀಗ ಈ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಶೇ.80 ಕಾಮಗಾರಿ ಮುಗಿದಿದೆ. ಹೀಗಾಗಿ ಒಂದು ತಿಂಗಳೊಳಗೆ ಈ ನೂತನ ವೃತ್ತ ಅನಾವರಣಗೊಳ್ಳುವ ನಿರೀಕ್ಷೆ ಇದೆ.