Advertisement
ಅನಾದಿ ಕಾಲದಿಂದಲೂ ಕಂಚು ಹಾಗು ಹಿತ್ತಾಳೆಯಲ್ಲಿ ಕರಕುಶಲತೆ ನಿರ್ವಹಿಸುತ್ತಿರುವ ಹಣಗಂಡಿ ಗ್ರಾಮದ ಲಾಳಕೆ ಕುಟುಂಬ ಎಡಬಿಡದೆ ಕಾಯಕದಲ್ಲಿ ತೊಡಗಿ ಇದೀಗ ಇವರು ತಯಾರಿಸಿದ ಅದೇಷ್ಟೋ ಮೂರ್ತಿಗಳು ದೇಶ ವಿದೇಶಗಳಿಗೆ ರವಾನೆಯಾಗಿರುವುದು ವಿಶೇಷ.
Related Articles
Advertisement
ಶಿವನ ಮೂರ್ತಿ ಸೇರಿದಂತೆ ವಿವಿಧ ಮೂರ್ತಿಗಳು ಅಮೆರಿಕಾ ಹಾಗು ಆಸ್ಟ್ರೇಲಿಯಾ ದೇಶಗಳಿಗೆ ವಾಸ ಮಾಡುವ ಸ್ವದೇಶಿಗರು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಎಷ್ಟೋ ಮೂರ್ತಿಗಳು ರವಾನೆಯಾಗಿದ್ದು, ಗಮನಕ್ಕಿಲ್ಲ ಎನ್ನುತ್ತಾರೆ ಎಪ್ಪತ್ತೆರಡರ ಹಿರಿಯರಾದ ಈಶ್ವರ ಲಾಳಕಿ.
12.5 ಅಡಿ ಕಂಚಿನ ಮೂರ್ತಿ :
ಮೂರ್ತಿ ತಯಾರಿಯಲ್ಲಿ ಅತಿ ಹೆಚ್ಚಿನ ಎತ್ತರವೆಂದರೆ 12.5 ಅಡಿಯಷ್ಟು ಎತ್ತರದ ಸಂಗೋಳ್ಳಿ ರಾಯಣ್ಣನ ಮೂರ್ತಿ ತಯಾರಿಸಿದ್ದು, ಬಾಗಲಕೋಟೆ ಮುಧೋಳ ತಾಲೂಕಿನ ರೂಗಿ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರೂಗೊಪ್ಪ ಗ್ರಾಮದಲ್ಲಿ ಪ್ರತಿಷ್ಠಾನಗೊಂಡಿವೆ. ಅಲ್ಲದೆ 6 ಅಡಿ ಎತ್ತರದ ಕನಕದಾಸ, ಮಹರ್ಷಿ ಭಗೀರಥ ಸೇರಿದಂತೆ ಅನೇಕ ಮೂರ್ತಿಗಳನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ಕಲಾ ಕೌಶಲ್ಯದ ಸಿರಿವಂತಿಕೆಯನ್ನು ತೋರಿಸುವಲ್ಲಿ ಸೈ ಎನ್ನಿಸಿಕೊಂಡಿದ್ದು, ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಂದ ಜನರು ಹಣಗಂಡಿ ಗ್ರಾಮಕ್ಕೆ ಬಂದು ತಮಗೆ ಬೇಕಾದ ಮಾದರಿಯ ಮೂರ್ತಿಗಳನ್ನು ಮಾಡುವಂತೆ ಬೇಡಿಕೆ ಇಡುತ್ತಾರೆ. ಯಾವುದೇ ಮೂರ್ತಿ ಮಾಡಲು ಕಠಿಣವಾಗುವುದಿಲ್ಲವೆಂಬ ಮಾತು ಲಾಳಕೆ ಕುಟುಂಬದ್ದು. ಪೂರ್ತಿಯಾದ ಬಳಿಕ ಹಣ ಕೊಟ್ಟು ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ.
ತಯಾರಿಸುವ ವಿಧಾನ:
ಮೊದಲು ಮಣ್ಣಿನಿಂದ ಸುಂದರವಾದ ಮೂರ್ತಿ ಮಾಡಿಕೊಳ್ಳುವ ಇವರು, ಅದಕ್ಕೆ ಬೇಕಾಗುವಷ್ಟು ಮಣ್ಣಿನ ಮೇಲೆ ಮೇಣವನ್ನು ಹಚ್ಚುತ್ತಾರೆ, ಮೂರು- ನಾಲ್ಕು ದಿನ ಬಿಟ್ಟು ಪಂಚಲೋಹವನ್ನು ದ್ರವರೂಪಕ್ಕೆ ಪರಿವರ್ತಿಸಿ ಅದಕ್ಕೆ ಸರಿ ಹೊಂದುವಂತೆ ಸರಿಯಾದ ಪ್ರಮಾಣದಲ್ಲಿ ಮೇಣಕ್ಕೆ ಅಂಟಿಕೊಳ್ಳುವ ಹಾಗೆ ಹಾಕುತ್ತಾರೆ. ಇದರಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾಗದಂತೆ ಇದನ್ನು ಬಹಳ ಜಾಗರೂಕತೆಯಿಂದ ಮಾಡುತ್ತಾರೆ.
ತೊಂದರೆಯಾಗಲು ಕಾರಣ :
ನಾವು ಹಳೆಯ ಪದ್ದತಿಯನ್ನೇ ಅನುಸರಿಸಿ ಮೂರ್ತಿ ಮಾಡುವುದರಲ್ಲಿ ಸಂಪೂರ್ಣ ಶ್ರಮವಹಿಸುವುದರಿಂದ ತೊಂದರೆಯಾಗುತ್ತಿದ್ದು, ಈಗಿನ ನೂತನ ತಂತ್ರಜ್ಞಾನ ಅಳವಡಿಸಿಕೊಂಡರೆ ಕೇವಲ ಒಂದೇ ಒಂದು ದಿನದಲ್ಲಿ ಮೂರ್ತಿ ತಯಾರಿಸಬಹುದು. ಹೆಚ್ಚು ಬಂಡವಾಳ ಹೂಡಿ ಹೊಸ ತಂತ್ರಜ್ಞಾನ ಅಳವಡಿಸುವ ಸಾಮರ್ಥ್ಯ ನಮ್ಮಲ್ಲಿಲ್ಲದ ಕಾರಣ ನಾವು ಹಳೆ ಪದ್ದತಿಯನ್ನೇ ಅನುಸರಿಸಿಕೊಂಡು ಹೊರಟಿದ್ದೇವೆ. ಇದರಿಂದ ನಾವು ಶ್ರಮವಹಿಸಬೇಕಾಗಿದೆ ಜೊತೆಗೆ ಸರ್ಕಾರಗಳು ನಮ್ಮಂತಹ ಕಲಾವಿದರಿಗೆ ಸೂಕ್ತ ಆರ್ಥಿಕ ನೆರವೂ ನೀಡಬೇಕಿದೆ ಎನ್ನುತ್ತಾರೆ ಲಾಳಕೆ ಕುಟುಂಬದವರು.
ಕಳೆದ ನಾಲ್ಕು ತಲೆಮಾರಿನಿಂದಲೂ ಇದೇ ಕಾಯಕವನ್ನು ಮಾಡುತ್ತಾ ಬಂದಿರುವ ಇವರು ತಮ್ಮ ಪೂರ್ವಜರು ಹಾಕಿಕೊಟ್ಟ ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನ ಹರಿಸಿದ್ದು ಆ ನಿಟ್ಟಿನಲ್ಲಿ ಸರ್ಕಾರ ಇಂತಹ ಅಪರೂಪದ ವಿಶೇಷ ಕಲಾಕಾರರನ್ನು ಗುರುತಿಸಿಸುವುದರ ಜೊತೆಗೆ ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸರ್ಕಾರ ಅಗತ್ಯ ಪ್ರೋತ್ಸಾಹವನ್ನು ನೀಡುವುದು ಅವಶ್ಯವಾಗಿದೆ.
-ಕಿರಣ ಶ್ರೀಶೈಲ ಆಳಗಿ