Advertisement
ಬ್ಯಾಂಕ್ ಜನಾರ್ದನ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವರು. ಅವರಿಗೆ ಓದು ಹೆಚ್ಚು ತಲೆಗೆ ಹೋಗಲಿಲ್ಲ. ಕಾರಣ, ನಾಟಕದ ಗೀಳು. 1961-62 ರ ಆಸುಪಾಸಿನಲ್ಲಿ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾದರು. ಮುಂದೆ ಓದುವ ಮನಸೂ ಮಾಡಲಿಲ್ಲ. ಅದಕ್ಕೆ ಇನ್ನೊಂದು ಕಾರಣ, ಅವರ ಮನೆಯಲ್ಲಿ ಕಿತ್ತು ತಿನ್ನೋ ಬಡತನ. ಅವರ ತಂದೆ ಒಂದು ನೌಕರಿಯಲ್ಲಿದ್ದು, ನಿವೃತ್ತಿಯಾಗಿದ್ದರು. ಅವರ ಪಿಂಚಣಿ ಹಣ ಆ ಕುಟುಂಬಕ್ಕೆ ಸಾಕಾಗುತ್ತಿರಲಿಲ್ಲ. ಜನಾರ್ದನ್ ಆ ವಯಸ್ಸಲೇ ಕೂಲಿ ಕೆಲಸಕ್ಕೆ ಹೋಗುವುದನ್ನು ರೂಢಿ ಮಾಡಿಕೊಂಡಿದ್ದರು. ತನ್ನ ತಾಯಿ ಕೂಡ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರ ಜತೆ ಕಡ್ಲೆಕಾಯಿ ಗಿಡ ಕೀಳಲು ಹೋಗುತ್ತಿದ್ದರು. ಆಗಲೇ ಅವರಿಗೆ ನಾಟಕದ ಮೇಲೆ ಇನ್ನಿಲ್ಲದ ಪ್ರೀತಿ. ತನ್ನ ಕೆಲ ಗೆಳೆಯರೊಂದಿಗೆ ಸೇರಿ ಹಬ್ಬ ಹರಿದಿನಗಳಲ್ಲಿ ನಾಟಕ ಮಾಡಿ ಖುಷಿಪಡುತ್ತಿದ್ದರು. ಆದರೆ, ಜನಾರ್ದನ್ ನಾಟಕ ಮಾಡುವುದು ಅವರ ತಂದೆಗೆ ಬಿಲ್‌ಕುಲ್ ಇಷ್ಟವಿರಲಿಲ್ಲ. ಆದರೂ ಜನಾರ್ದನ್, ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಲೇ, ನಾಟಕದತ್ತ ಒಲವಿಟ್ಟುಕೊಂಡಿದ್ದರು. ಆ ಊರಿನ ಡಾ.ಶಂಕರ್‌ಶೆಟ್ಟಿ ಎನ್ನುವವರ ಹೊಲ, ತೋಟಕ್ಕೆ ಕೂಲಿ ಹೋಗುತ್ತಿದ್ದ ಬ್ಯಾಂಕ್ ಜನಾರ್ದನ್, ವಾರಕ್ಕೊಮ್ಮೆ ಅವರ ಬಳಿ ಕೂಲಿ ಹಣ ಪಡೆದು, ಮನೆಗೆ ಬೇಕಾದ ಅಡುಗೆ ಸಾಮಾನುಗಳನ್ನು ತರುವುದು, ಸಂತೆಗೆ ಹೋಗಿ ದಿನಸಿಗಳನ್ನು ತಂದುಕೊಡುವ ಮೂಲಕ ನೆರವಾಗುತ್ತಿದ್ದರು. ಒಮ್ಮೆ ಬ್ಯಾಂಕ್ ಜನಾರ್ದನ್ ಅವರನ್ನು ನೋಡಿದ ಆ ತೋಟದ ಮಾಲೀಕರು, ಏನಪ್ಪಾ ಓದಿದ್ದೀಯ ಅಂತ ಕೇಳಿದಾಗ, ಎಸ್ಸೆಸ್ಸೆಲ್ಸಿ ಫೇಲು ಸಾರ್ ಎಂಬ ಉತ್ತರ ಜನಾರ್ದನ್ ಅವರಿಂದ ಬರುತ್ತೆ. ಸರಿ, ನೀನು, ನಾಳೆ ಬೆಳಗ್ಗೆ ಮನೆಗೆ ಬಾ ಅಂತ ಅವರು ಹೇಳಿಕಳುಹಿಸುತ್ತಾರೆ. ಮರುದಿನ ಬೆಳಗ್ಗೆ ಜನಾರ್ದನ್ ಅವರ ಮನೆಗೆ ಹೋದಾಗ, ಅವರನ್ನು ಕರೆದುಕೊಂಡು ಅದೇ ಊರಲ್ಲಿದ್ದ ಜಯಲಕ್ಷ್ಮೀ ಬ್ಯಾಂಕ್‌ನಲ್ಲಿ ಅಟೆಂಡರ್ ಕೆಲಸ ಕೊಡಿಸುತ್ತಾರೆ. ಆ ಕೆಲಸಕ್ಕೆ ತಿಂಗಳಿಗೆ 50 ರೂ. ಸಂಬಳವೂ ಫಿಕ್ಸ್ ಆಗುತ್ತೆ. ಆ ಹಣ ಅವರ ಬದುಕಿಗೊಂದಷ್ಟು ಸಹಾಯವಾಗುತ್ತೆ. ಇಷ್ಟಾದರೂ, ಜನಾರ್ದನ್‌ಗೆ ನಾಟಕದ ಮೇಲಿನ ಪ್ರೀತಿ ಹೋಗಲ್ಲ. ಹಬ್ಬದಲ್ಲಿ ಗೆಳೆಯರ ಜತೆ ನಾಟಕ ಮಾಡುತ್ತಲೇ ಕಲೆಯನ್ನು ಪ್ರೀತಿಸುತ್ತಾ ಹೋಗುತ್ತಾರೆ. ಹಾಗೆ ಶುರುವಾದ ಅವರ ಬಣ್ಣದ ಬದುಕು ಈಗ ನಾಲ್ಕು ದಶಕಗಳನ್ನು ಪೂರೈಸಿದೆ. ಈವರೆಗೆ ಸಾವಿರಾರು ನಾಟಕ ಪ್ರಯೋಗಗಳಾಗಿವೆ. ನೂರಾರು ಧಾರಾವಾಹಿಗಳಲ್ಲೂ ನಟಿಸಿದ್ದಾಗಿದೆ. ತರಹೇವಾರಿ ಪಾತ್ರಗಳಲ್ಲಿ 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಬ್ಯಾಂಕ್‌ಜನಾರ್ದನ್ ಊರಲ್ಲಿ ಆಗಾಗ “ಗೌಡ್ರ ಗದ್ಲ’ ನಾಟಕದಲ್ಲಿ ಗೌಡನ ಪಾತ್ರದಲ್ಲಿ ನಟಿಸುತ್ತಿದ್ದರು. ಆ ಊರಲ್ಲಿ ಆ ಪಾತ್ರದ ಮೂಲಕ ಜನಾರ್ದನ್ ತುಂಬಾ ಫೇಮಸ್ ಆಗಿದ್ದರು. ಒಮ್ಮೆ ಆ ಊರಿಗೆ ವೃತ್ತಿ ನಾಟಕ ಕಂಪೆನಿಯೊಂದು ಬಂದಿತ್ತು. “ಗೌಡ್ರ ಗದ್ಲ’ ನಾಟಕವನ್ನೇ ಆ ಕಂಪೆನಿಯವರು ಪ್ರದರ್ಶನ ಮಾಡುತ್ತಿದ್ದರು. ಹೀಗಿರುವಾಗ, ಆ ನಾಟಕ ಕಂಪೆನಿಗೆ ನಷ್ಟ ಉಂಟಾಯಿತು. ನಾಟಕ ಕಂಪೆನಿಯ ಕೆಲ ಕಲಾವಿದರು ಒಬ್ಬೊಬ್ಬರಾಗಿಯೇ ಹೊರಟು ಹೋಗಿದ್ದರು. ಆಗ ನಮ್ಮೂರಿನ ಹುಡುಗ “ಗೌಡ್ರ ಗದ್ಲ’ ನಾಟಕದಲ್ಲಿ ಗೌಡನ ಪಾತ್ರದಲ್ಲಿ ಚೆನ್ನಾಗಿ ನಟಿಸುತ್ತಾನೆ ಎಂಬ ಸುದ್ದಿ ಆ ನಾಟಕ ಕಂಪೆನಿ ಮಾಲೀಕರಿಗೆ ಹೋಯ್ತು. ತಡಮಾಡದೆಯೇ ಆ ಕಂಪೆನಿ ಮಾಲೀಕರು ಜನಾರ್ದನ್ ಅವರನ್ನು ಹುಡುಕಿ ಹೋಗಿ, ನಮ್ಮ ನಾಟಕದಲ್ಲಿ ನಟಿಸುವಂತೆ ಕೇಳಿದ್ದರು. ಆದರೆ, ಅದುವರೆಗೆ ಹಬ್ಬಗಳಲ್ಲಿ ಏರ್ಪಡಿಸುತ್ತಿದ್ದ ನಾಟಕದಲ್ಲಿ ಬಣ್ಣ ಹಚ್ಚುತ್ತಿದ್ದ ಜನಾರ್ದನ್‌ಗೆ ವೃತ್ತಿ ನಾಟಕ ಕಂಪೆನಿಯಲ್ಲಿ ನಟಿಸುವ ಬಗ್ಗೆ ಭಯವಿತ್ತು. ಹವ್ಯಾಸಿ ಕಲಾವಿನಾಗಿರುವ ನಾನು, ಕಂಪೆನಿಯಲ್ಲಿ ನಾಟಕ ಮಾಡಿ ಸೈ ಎನಿಸಿಕೊಳ್ಳುತ್ತೇನಾ ಎಂಬ ಪ್ರಶ್ನೆಯೂ ಅವರಲ್ಲಿತ್ತು. ಕೊನೆಗೆ ಮಾಲೀಕರ ಮನವಿಗೆ ಒಪ್ಪಿ, “ಗೌಡ್ರ ಗದ್ಲ’ ನಾಟಕ ಮಾಡಿದರು. ಎಲ್ಲರಿಂದಲೂ ಸೈ ಎನಿಸಿಕೊಂಡರು. ಕೇವಲ ಒಂದು ಪ್ರದರ್ಶನಕ್ಕೆ ಅಂತ ಹೋಗಿದ್ದ ಬ್ಯಾಂಕ್ ಜನಾರ್ದನ್, ಮೂರು ದಿನಗಳ ಕಾಲ ನಾಟಕದಲ್ಲಿ ಕೆಲಸ ಮಾಡಿದರು. ಕಂಪೆನಿ ಮಾಲೀಕರು ಜನಾರ್ದನಿಗೆ ಸಂಭಾವನೆ ಕೊಡುವುದರ ಜತೆಗೆ ಕಲಾವಿದ ಎಂಬ ಗೌರವವನ್ನೂ ಕೊಟ್ಟರು. ಜನಾರ್ದನ್ ಅವರಿಗೆ ನಾಟಕದ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಯ್ತು. ಹಾಗೇ, ನಾಟಕ ಕಂಪೆನಿಯಲ್ಲಿ ಕೆಲಸ ಮಾಡುತ್ತ ಬಿಜಿಯಾದರು. ಹೀಗಿರುವಾಗಲೇ, ಕೆಲ ಗೆಳೆಯರು, “ನೀನೇಕೆ ಸಿನಿಮಾಗೆ ಪಾರ್ಟ್ ಮಾಡಬಾರದು’ ಅಂದಾಗ, ಮೊದ ಮೊದಲು ಅವರಿಗೂ ಏನೂ ಅನಿಸಲಿಲ್ಲ. ಮನೆಯಲ್ಲಿ ತಂದೆಗೆ ಬೇರೆ ಇಷ್ಟವಿರಲಿಲ್ಲ. ಹೇಗೋ ಬ್ಯಾಂಕ್ ಕೆಲಸ ಮಾಡಿಕೊಂಡು, ಬದುಕು ನಡೆಸುತ್ತಿದ್ದೇನೆ. ಹೀಗೇ ಇದ್ದರೆ ಸಾಕು ಅಂದುಕೊಂಡಿದ್ದರು. ಜನಾರ್ದನ್ ಆ ದಿನಗಳಲ್ಲಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬೆಳಗ್ಗೆ ಬ್ಯಾಕ್ ಕೆಲಸ ಮಾಡಿ, ಸಂಜೆ ನಾಟಕ ಅಭ್ಯಾಸಕ್ಕೆ ಹೋಗಿ, ರಾತ್ರಿ ವೇಳೆ ಆ ಊರಿನಲ್ಲಿದ್ದ “ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್’ನಲ್ಲಿ ಕಾರ್ಬನ್ ಆಪರೇಟರ್ ಆಗಿಯೂ ಕೆಲಸ ಮಾಡಿದ್ದು ಇದೆ. ಅದೇ ವೇಲೆ ಅವರ ತಂದೆ ನಿಧನರಾದರು. ಜನಾರ್ದನ್ ಅಲ್ಲಿಂದ ಬೆಂಗಳೂರಿಗೆ ವರ್ಗಗೊಂಡರು. ಆಗಲೇ ನಟ ಧಿರೇಂದ್ರಗೋಪಾಲ್ ಅವರ ಪರಿಚಯವಾಗಿ, ಅವರ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಯಾದರು.
Related Articles
Advertisement
ಈಗಲೂ ಜನಾರ್ದನ್ ನಾಟಕ ಕಂಪೆನಿಗಳಿಗೆ ಹೋಗುತ್ತಾರೆ. ನಾಟಕ ಮಾಡುತ್ತಾರೆ. ಇಷ್ಟು ಸಿನಿಮಾ ಮಾಡಿರುವ, ಎಲ್ಲಾ ಹೀರೋಗಳ ಜತೆಯಲ್ಲೂ ಕೆಲಸ ಮಾಡಿರುವ ಜನಾರ್ದನ್‌ಗೆ ಸರ್ಕಾರದಿಂದ ಯಾವುದೇ ಪ್ರಶಸ್ತಿ ಸನ್ಮಾನಗಳು ಸಿಕ್ಕಿಲ್ಲ. ಕೆಂಪೇಗೌಡ ಪ್ರಶಸ್ತಿ ಹೊರತುಪಡಿಸಿದರೆ, ರಾಜ್ಯ ಪ್ರಶಸ್ತಿಯಾಗಲಿ, ಅಕಾಡೆಮಿ ಪ್ರಶಸ್ತಿಯಾಗಲಿ ಸಿಕ್ಕಿಲ್ಲ. ಹಾಗಂತ ಅವರು ಲಾಭಿ ಮಾಡೋಕೂ ಹೋದವರಲ್ಲ. ಜನರ ಪ್ರೀತಿ, ಚಪ್ಪಾಳೆಯೇ ದೊಡ್ಡ ಪ್ರಶಸ್ತಿ ಎಂದು ನಂಬಿರುವ ಅವರಿಗೆ ಈಗ ವಯಸ್ಸು 67. ಈಗಲೂ ಉತ್ಸಾಹದಲ್ಲೇ ಕ್ಯಾಮೆರಾ ಮುಂದೆ ನಿಂತು ಕೆಲಸ ಮಾಡುತ್ತಾರೆ. ಆದರೆ, ಯಾರೊಬ್ಬರೂ ಗುರುತಿಸಿ, ಕರೆಯಲ್ಲ ಎಂಬ ನೋವಿದೆ. ಆ ದಿನಗಳೇ ಚೆನ್ನಾಗಿದ್ದವು ಎನ್ನುವ ಜನಾರ್ದನ್, ಈ ದಿನಗಳನ್ನು ದೂರುತ್ತಾರೆ. ಅಣ್ಣಾವ್ರು ಸಣ್ಣ ಪಾತ್ರವಿದ್ದರೂ, ಕರೆದು ಅವರಿಗೆ ಕೆಲಸ ಕೊಡಿ ಅನ್ನುತ್ತಿದ್ದರು. ಆದರೆ, ಈಗಿನವರು ಹಾಗಿಲ್ಲ. ಬ್ಯಾಂಕ್ ಕೆಲಸಕ್ಕೆ 2000 ಇಸವಿಯಲ್ಲೇ ವಿಆರ್‌ಎಸ್ ಪಡೆದ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದೆ. ಕಲೆಯೇ ಬದುಕು ಅಂದುಕೊಂಡಿರೋ ಅವರಿಗೆ ಬಣ್ಣ ಬಿಟ್ಟರೆ ಬೇರೆ ಗೊತ್ತಿಲ್ಲ.