ಸಂತೆಮರಹಳ್ಳಿ: ಯಳಂದೂರು ಪಟ್ಟಣದ ಸಂತೆಮಾಳದಲ್ಲಿ ಭಾರೀ ಗಾತ್ರದ ಒಣಗಿದ ಅರಳಿ ಮರದ ಕೊಂಬೆಯೊಂದು ಮುರಿದು ಬಿದ್ದಿರುವ ಘಟನೆ ಭಾನುವಾರ ಜರುಗಿದೆ. ಇದರಿಂದ ವ್ಯಾಪಾರಿಯೊಬ್ಬರ ಬೈಕ್ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಯಾವುದೇ ಸಾವು, ನೋವು ಸಂಭವಿಸಿಲ್ಲ.
ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ: ಪಟ್ಟಣದಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ. ಸುವರ್ಣಾವತಿ ನದಿದಡದಲ್ಲಿ ಇದಕ್ಕಾಗಿ ಸ್ಥಳವನ್ನು ನಿಗದಿ ಮಾಡಲಾಗಿದೆ. ಇದು ತರಕಾರಿ, ಕಾಯಿಪಲ್ಯಗಳ ಪ್ರಮುಖ ಮಾರುಕಟ್ಟೆಯಾಗಿದೆ. ಪ್ರತಿ ವಾರ ನೂರಾರು ವರ್ತಕರು ಹಾಗೂ ಸಾವಿರಾರು ಗ್ರಾಹಕರು ಇಲ್ಲಿ ವಹಿವಾಟು ನಡೆಸುತ್ತಾರೆ.
ಸಂತೆ ಮೈದಾನದ ಸುತ್ತುಗೋಡೆಗೆ ಹೊಂದಿಕೊಂಡಂತೆ ಬೃಹತ್ ಗಾತ್ರದ ಅರಳಿಮರವೂ ಇದೆ. ಆದರೆ ಇದರ ಬಹುತೇಕ ದೊಡ್ಡದೊಡ್ಡ ಕೊಂಬೆಗಳು ಒಣಗಿ ನಿಂತಿವೆ. ಈ ಹಿಂದೆಯೂ ಒಂದು ಕೊಂಬೆ ಬಿದ್ದು ಸುತ್ತುಗೋಡೆಯೇ ಜಖಂಗೊಂಡಿತ್ತು. ಆದರೆ ಆಗ ಸಂತೆ ಇಲ್ಲದ್ದರಿಂದ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಆಗಲೇ ಮರ ತೆರವುಗೊಳಿಸಿಕೊಡಬೇಕು ಎಂದು ಇಲ್ಲಿನ ವರ್ತಕರು ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು ಆದರೂ ಇದರ ತೆರವಿಗೆ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು.
ಭಾನುವಾರ ಸಂತೆಯ ಸಮಯದಲ್ಲೇ ನೀರಿನ ತೊಂಬೆಯ ಬಳಿ ಕೊಂಬೆ ಬಿದ್ದಿದೆ. ಪಕ್ಕದಲ್ಲೇ ಬೈಕ್ ಮೇಲೆ ಕುಳಿತಿದ್ದ ವ್ಯಾಪಾರಿ ನಿಂಗರಾಜು ಮೇಲೆ ಬಿದ್ದು ಸಣ್ಣ ಗಾಯಗಳಾಗಿದ್ದು, ಬೈಕ್ ಜಖಂಗೊಂಡಿದೆ. ಅಲ್ಲದೆ ಇದರ ಪಕ್ಕದಲ್ಲೇ ವಿದ್ಯುತ್ ತಂತಿಯೂ ಹಾದುಹೋಗಿದೆ. ಅದೃಷ್ಟವಶಾತ್ ತಂತಿಯ ಮೇಲೆ ಇದು ಬಿದ್ದಿದ್ದರೆ ಭಾರಿ ಪ್ರಮಾಣದ ದುರಂತವೊಂದು ಸಂಭವಿಸುವ ಅಪಾಯವೂ ಇತ್ತು ಎಂದು ವರ್ತಕರಾದ ನಾಗರಾಜು ತಿಳಿಸಿದರು.
ಮೂಲ ಸೌಲಭ್ಯಗಳೇ ಇಲ್ಲ: ಪಟ್ಟಣ ಪಂಚಾಯಿತಿ ವತಿಯಿಂದ ನಡೆಯುವ ಈ ಸಂತೆಯಲ್ಲಿ ಪ್ರತಿ ವಾರವೂ ಸುಂಕವನ್ನು ವಸೂಲಿ ಮಾಡಲಾಗುತ್ತದೆ. ಆದರೆ ಇಲ್ಲಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ಸೋತಿದೆ. ಸಂತೆಯ ಮಧ್ಯೆ ಹಾದು ಹೋಗಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸಬೇಕು. ಇದರ ಹಿಂಭಾಗ ಸಾಮೂಹಿಕ ಮಲಮೂತ್ರ ವಿಸರ್ಜನಾ ಸ್ಥಳವಾಗಿ ಮಾರ್ಪಟ್ಟಿದ್ದು ಅನೈರ್ಮಲ್ಯ ತಾಂಡವವಾಡುತ್ತಿದೆ. ಇಲ್ಲಿ ಸ್ವಚ್ಛತೆಗೆ ಆದ್ಯತೆ ನಿಡಬೇಕು. ಕುಡಿಯುವ ನೀರಿನ ತೊಂಬೆ ಇದ್ದರು ಕೆಲವು ಸಂದರ್ಭದಲ್ಲಿ ನೀರೆ ಇರುವುದಿಲ್ಲ.
ಇಲ್ಲಿಗೆ ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕು. ಶನಿವಾರ ರಾತ್ರಿ ವೇಳೆಗೆ ವ್ಯಾಪಾರಿಗಳು ಸಾಮಾನು ಸರಂಜಾಮುಗಳನ್ನು ಇಲ್ಲಿ ಇಳಿಸಿಕೊಳ್ಳುತ್ತಾರೆ. ಆದರೆ ಇರುವ ಹೈಮಾಸ್ಟ್ ದೀಪ ಸರಿಯಾಗಿ ಉರಿಯುವುದೇ ಇಲ್ಲ ಹಾಗಾಗಿ ಇದನ್ನು ದುರಸ್ತಿಪಡಿಸಬೇಕು. ವ್ಯಾಪಾರಿಗಳು ಮಳೆ, ಗಾಳಿ, ಬಿಸಿಲಿನಲ್ಲೇ ಪ್ಲಾಸ್ಟಿಕ್ ಪರದೆ ಕಟ್ಟಿಕೊಂಡು ವ್ಯಾಪಾರ ಮಾಡುವ ಸ್ಥಿತಿ ಇದ್ದು ಇದಕ್ಕೆ ಸೂಕ್ತ ಛಾವಣಿಯ ವ್ಯವಸ್ಥೆ ಮಾಡಬೇಕು ಎಂಬುದು ಇಲ್ಲಿನ ವ್ಯಾಪಾರಿಗಳಾದ ಮಹಾದೇವಸ್ವಾಮಿ, ನಿಂಗರಾಜು ಸೇರಿದಂತೆ ಹಲವರ ಆಗ್ರಹವಾಗಿದೆ.