Advertisement

ಕಿತ್ತುಹೋದ ಹಂಪ್ಸ್‌; ಹೊರಬಂದ ಬೋಲ್ಟ್

01:25 PM Oct 15, 2018 | |

ಕಲಬುರಗಿ: ರಸ್ತೆ ಸಂಚಾರ ಸುರಕ್ಷತೆಗಾಗಿ ಹಾಕಲಾಗಿರುವ ಫೈಬರ್‌ ಹಂಪ್ಸ್‌ ಹಾಗೂ ಅದರ ಮೊಳೆಗಳೇ ಸಾರ್ವಜನಿಕರ ಸಂಚಾರಕ್ಕೆ ಮಾರಕವಾಗಿ ಪರಿಣಮಿಸಿರುವುದು ಮಹಾನಗರದಾದ್ಯಂತ ಕಾಣುತ್ತಿದೆ.

Advertisement

ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಡಾಂಬರು ಕಿತ್ತಿದ್ದರಿಂದ ಜಲ್ಲಿ ಕಲ್ಲುಗಳ ಮೇಲೆ ಓಡಾಡಿ ಜನರು ಹೈರಾಣಾಗುತ್ತಿದ್ದಾರೆ. ಒಟ್ಟಿನಲ್ಲಿ ವಾಹನ ಸವಾರರ ಗೋಳು ಕೇಳ್ಳೋರೆ ಇಲ್ಲ. ಹೀಗೆ ರಸ್ತೆಗಳ ಅವ್ಯವಸ್ಥೆ ಬಗ್ಗೆ ನಾಗರಿಕರು ಪ್ರತಿನಿತ್ಯ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.

ನಗರದಲ್ಲಿ ಸುರಕ್ಷತೆ ಹೆಸರಲ್ಲಿ ರಸ್ತೆಗಳಿಗೆ ಹೊಕ್ಕಿರುವ ಸೀಲ್‌ ಬೋಲ್ಟ್‌ಗಳು ಮತ್ತು ರಾಡ್‌ಗಳು ಕೂಡ ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತಾಗಿದೆ.

ನಗರದ ಪ್ರಮುಖ ರಸ್ತೆಗಳು ಡಾಂಬರೀಕರಣ, ಕಾಂಕ್ರಿಟೀಕರಣದಿಂದ ಕೂಡಿದ್ದು, ನಿಯಮಾನುಸಾರ ಸಾರ್ವಜನಿಕರ ಸುರಕ್ಷತೆ-ಸುಗಮ ಸಂಚಾರಕ್ಕಾಗಿ ರಸ್ತೆಗಳ ಮಧ್ಯೆ ಹಂಪ್ಸ್‌ಗಳು ಹಾಗೂ ವಿಭಜಕ ಸೂಚನಾ ಫಲಕ ಹಾಕಲಾಗಿದೆ. ಹೆಚ್ಚಾಗಿ ರಬ್ಬರ್‌ -ಫೈಬರ್‌ ಮಿಶ್ರಿತ ಸ್ಪೀಡ್‌ ಹಂಪ್ಸ್‌, ವಿಭಜಕ ಸೂಚನಾ ಫಲಕಗಳನ್ನು ಬಳಸಲಾಗಿದ್ದು, ಅವುಗಳಿಗೆ ಕಬ್ಬಿಣದ ಬೋಲ್ಟ್ ಹಾಗೂ ರಾಡ್‌ಗಳನ್ನು ಜಡಿಯಲಾಗಿದೆ. 

ಇದೀಗ ನಿತ್ಯ ವಾಹನಗಳ ಓಡಾಟದಿಂದ ಸ್ಪೀಡ್‌ ಹಂಪ್ಸ್‌, ವಿಭಜಕ ಸೂಚನಾ ಫಲಕಗಳು ಕಿತ್ತು ಹೋಗಿವೆ. ಈ ಹಂಪ್ಸ್‌ಗಳು ಗಟ್ಟಿಯಾಗಿರಲೆಂದು ರಸ್ತೆಗಳಿಗೆ ಜಡಿದಿರುವ ಬೋಲ್ಟ್ ಹಾಗೂ ರಾಡ್‌ ಗಳು ಹೊರಬಂದು ತಲೆ ಎತ್ತಿ ನಿಂತಿವೆ. 

Advertisement

ಮೊಳೆ ಬೇಲಿಯಂತೆ ಗೋಚರ: ದೂರದ ಬೆಟ್ಟ ನುಣ್ಣಗೆ ಎಂಬಂತೆ ರಸ್ತೆ ಚೆನ್ನಾಗಿದೆ ಎಂದು ಬರುವ ವಾಹನ ಸವಾರರಿಗೆ ದಿಢೀರ್‌ ಆಗಿ ಚೂಪಾದ ಬೋಲ್ಟ್‌ಗಳ ದರ್ಶನವಾಗುತ್ತದೆ. ಹಂಪ್ಸ್‌, ಸೂಚನಾ ಫಲಕಗಳು ಕಿತ್ತು ಹೋಗಿ ರಸ್ತೆಗಳ ಮೇಲೆ ಹಾಗೆ ಉಳಿದು ಹೊರಬಂದಿರುವ ಬೋಲ್ಟ್‌ಗಳ ಸಾಲು “ಮೊಳೆ ಬೇಲಿ’ಯಂತೆ ಗೋಚರಿಸುತ್ತದೆ.
 
ಮಹಾನಗರದ ಮುಖ್ಯ ರಸ್ತೆ, ಹಳೆ ಎಸ್‌ಪಿ ಕಚೇರಿ ರಸ್ತೆ, ರೈಲ್ವೆ ನಿಲ್ದಾಣದಿಂದ ಪಿಡಿಎ ಕಾಲೇಜು ಕಡೆಗೆ ಹೋಗುವ ರಸ್ತೆ, ಕೋರ್ಟ್‌ ರಸ್ತೆ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ಸೂಪರ್‌ ಮಾರ್ಕೇಟ್‌ ಸೇರಿದಂತೆ ಮುಖ್ಯ ರಸ್ತೆಗಳಿಗೆ ಅಳವಡಿಸಿರುವ ರಬ್ಬರ್‌ ಮತ್ತು ಫೈಬರ್‌ ಮಿಶ್ರಿತ ಸ್ಪೀಡ್‌ ಹಂಪ್ಸ್‌, ವಿಭಜಕ ಸೂಚನಾ ಫಲಕಗಳು ತೀರ ಹದಗೆಟ್ಟಿವೆ.
 
ವಾಹನ ಸವಾರರು ಅಪ್ಪಿತಪ್ಪಿಯೂ ತಮ್ಮ ದೃಷ್ಟಿ ಬೇರೆಡೆ ಹಾಯಿಸಿದರೆ, ಚೂಪಾದ ಮೊಳೆಗಳು ಟೈರ್‌ಗಳಿಗೆ ಚುಚ್ಚಿ ಪಂಕ್ಚರ್‌ ಆಗುವ ಆತಂಕ ಒಂದೆಡೆಯಾದರೆ, ರಸ್ತೆಯಲ್ಲಿ “ಮೊಳೆ ಬೇಲಿ’ ಕಂಡು ಹಠಾತ್‌ ಬ್ರೇಕ್‌ ಹಾಕಿ ಕೆಳಗೆ ಬಿದ್ದು ಕೈ-ಕಾಲು ಮುರಿದುಕೊಂಡ ಘಟನೆಗಳು ನಡೆದಿವೆ. ಈ ಕುರಿತು ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಂಪ್ಸ್‌ ಮೇಲೆಯೇ ಡಾಂಬರೀಕರಣ: ಮತ್ತೂಂದು ಅಪಾಯಕಾರಿ ಸಂಗತಿ ಎಂದರೆ ರಬ್ಬರ್‌ ಮತ್ತು ಫೈಬರ್‌ ಮಿಶ್ರಿತ ಸ್ಪೀಡ್‌ ಹಂಪ್ಸ್‌ ಕಿತ್ತು ಹೋದ ಸ್ಥಳಗಳಲ್ಲಿ ಡಾಂಬರೀಕರಣ ಮಾಡಲಾಗಿದೆ. ಆದರೆ, ಅಲ್ಲಿರುವ ಚೂಪಾದ ಮೊಳೆಗಳನ್ನು ಹೊರಕ್ಕೆ ತೆಗೆಯದೇ ಡಾಂಬರ್‌ ಹಾಕಲಾಗಿದೆ. ಈಗ ಆ ಡಾಂಬರ್‌ ಕೂಡ ಕಿತ್ತು ಹೋಗಿ ಮತ್ತೆ ಚೂಪಾದ ಮೊಳೆಗಳು ಕಾಣುತ್ತಿವೆ. ಈ ರೀತಿಯ ಅವೈಜ್ಞಾನಿಕ ಹಾಗೂ ಬೇಜವಾಬ್ದಾರಿತನ ಕಾಮಗಾರಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯೇ ಸಾಕ್ಷಿಯಾಗಿದೆ. ಸೂಪರ್‌ ಮಾರ್ಕೆಟ್‌ ರಸ್ತೆಯಲ್ಲಿ ಹಂಪ್ಸ್‌ಗಳ ಮೇಲೆಯೇ ಡಾಂಬರೀಕರಣ
ಮಾಡಲಾಗಿದೆ. ಇದೇ ತೆರನಾದ ಪರಿಸ್ಥಿತಿ ಇತರೆಡೆಯೂ ಕಾಣಬಹುದಾಗಿದೆ.

ಪಾದಚಾರಿಗಳ ಜೀವಕ್ಕೂ ಕುತ್ತು: ರಸ್ತೆಯಲ್ಲಿನ ಈ “ಮೊಳೆ ಬೇಲಿ’ ಕೇವಲ ವಾಹನ ಸವಾರರಿಗೆ ಮಾತ್ರ ಕಂಟಕವಾಗಿಲ್ಲ. ಬದಲಿಗೆ ರಾತ್ರಿ ವೇಳೆ ರಸ್ತೆ ದಾಟುವ ಪಾದಚಾರಿಗಳು ತಮ್ಮ ಜೀವಕ್ಕೆ ಸಂಚಕಾರ ತರುವಂತಾಗಿದೆ. ಒಂದು ಇಂಚಿನಷ್ಟು ಮೇಲ್ಮುಖೀಯಾಗಿರುವ ಮೊಳೆಗಳು ಕತ್ತಲಲ್ಲಿ ಓಡಾಡುವಾಗ ಕಾಲಿಗೆ ಚುಚ್ಚಿ ಇಲ್ಲವೇ, ತಾಗಿ ಎಡವಿ ಬೀಳುವ ಸಾಧ್ಯತೆ ಎಂದು ಹಿರಿಯ ಪಾದಚಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು. 

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಮೊಳೆಗಳನ್ನು ಕಟ್‌ ಮಾಡಿಸಬೇಕು. ಇಲ್ಲವೇ ಹೊಸ ಹಂಪ್ಸ್‌, ಸೂಚನಾ ಫಲಕಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

„ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next