Advertisement

ಕಂಠೀರವದಲ್ಲಿ ಮುರಿದ ಕುರ್ಚಿಗಳು; ಮಹತ್ವದ ಕೂಟದ ವೇಳೆ ಇಂತಹ ಪರಿಸ್ಥಿತಿಯೇಕೆ?

04:26 PM Jun 23, 2023 | Team Udayavani |

ಬೆಂಗಳೂರು: ಅಖೀಲ ಭಾರತ ಫುಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸ್ಯಾಫ್ ಕೂಟ ನಗರದ ಕಂಠೀರವ ಮೈದಾನದಲ್ಲಿ ನಡೆಯುತ್ತಿದೆ. ಈ ಹೊತ್ತಿನಲ್ಲಿ ಫುಟ್‌ಬಾಲ್‌ ಮೈದಾನದಲ್ಲಿ ಪ್ರೇಕ್ಷಕರಿಗಾಗಿ ಹಾಕಿರುವ ಕೆಲವು ಕುರ್ಚಿಗಳು ಮುರಿದು ಬಿದ್ದಿರುವ, ಕೂರುವ ಸ್ಥಳವೂ ಗಲೀಜಾಗಿರುವ ಚಿತ್ರಗಳು ಕಂಡುಬಂದಿವೆ.

Advertisement

ಈ ಚಿತ್ರಗಳು ಏಕಕಾಲದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಈ ಮೈದಾನದ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ಕ್ರೀಡಾ ಮತ್ತು ಯುವಜನ ಇಲಾಖೆ ಮೈದಾನವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವೇ? ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಕಚೇರಿ ಇಲ್ಲಿಯೇ ಇದ್ದರೂ ಈ ಸಂಸ್ಥೆ ಯಾಕೆ ಅದರ ಬಗ್ಗೆ ಗಮನ ಹರಿಸಿಲ್ಲ? ಬೆಂಗಳೂರಿನ ಅತ್ಯಂತ ಪ್ರಮುಖ ಕ್ರೀಡಾ ಕೇಂದ್ರದಲ್ಲಿ ಯಾಕೆ ಪರಿಸ್ಥಿತಿ? ಕಡೆಯ ಪಕ್ಷ ಮಹತ್ವದ ಕೂಟವನ್ನು ಆಯೋಜಿಸುತ್ತಿರುವಾಗ ಎಐಎಫ್ಎಫ್ ಇದನ್ನೆಲ್ಲ ಯಾಕೆ ಗಮನಿಸಿಲ್ಲ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಕಂಠೀರವ ಮೈದಾನಕ್ಕೆ ಗೇಟ್‌ ನಂ.10ರಿಂದ ಪ್ರವೇಶಿಸಿದರೆ ಅಲ್ಲೇ ಎಡಭಾಗದಲ್ಲಿ ಈ ರೀತಿಯ ಮುರಿದ ಕುರ್ಚಿಗಳು, ಗಲೀಜಾದ ನೆಲ, ಅಸ್ತವ್ಯಸ್ತ ಪರಿಸ್ಥಿತಿ ಕಾಣಿಸುತ್ತದೆ. ಇಂತಹ ಜಾಗಕ್ಕೆ ಅಭಿಮಾನಿಗಳು ಬಂದು ಕುಳಿತುಕೊಳ್ಳಲು ಹೇಗೆ ಸಾಧ್ಯ? ಕ್ರೀಡೆಗಳು ಬೆಳೆಯಲು ಇಂತಹ ಸಣ್ಣಪುಟ್ಟ ಸಂಗತಿಗಳನ್ನು ಗಮನಿಸುವುದು ಅನಿವಾರ್ಯವಲ್ಲವೇ ಎಂಬುದು ಈಗ ಕೇಳಲೇಬೇಕಾಗಿರುವ ಪ್ರಶ್ನೆ.

ಮುರಿದುಬಿದ್ದಿರುವ ಕುರ್ಚಿಗಳು, ಗಲೀಜಾಗಿರುವ ನೆಲವನ್ನು ನೋಡಿದರೆ ಅದು ಹೊಸತಾಗಿ ಆಗಿರುವಂತೆ ಕಾಣುತ್ತಿಲ್ಲ. ಬಹಳ ಹಿಂದೆಯೇ ಇಂತಹದ್ದೊಂದು ಪರಿಸ್ಥಿತಿ ಉಂಟಾಗಿದೆ. ಅರ್ಥಾತ್‌ ನಿರ್ವಹಣೆ ಮಾಡದೆಯೇ ಬಹಳ ಸಮಯ ಕಳೆದುಹೋಗಿದೆ. ಕಂಠೀರವ ಮೈದಾನದಲ್ಲೇ 2022ರಲ್ಲಿ ಖೇಲೋ ಇಂಡಿಯಾ ವಿವಿ ಗೇಮ್ಸ್‌ ನಡೆದಿತ್ತು. ಕೇಂದ್ರ ಗೃಹಸಚಿವ ಅಮಿತ್‌ ಶಾ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕರ್ನಾಟಕ ಅಥ್ಲೆಟಿಕ್ಸ್‌ನ ಹೆಮ್ಮೆಯಾಗಿರುವ ಈ ಮೈದಾನದಲ್ಲಿ ಸತತವಾಗಿ ಕೂಟಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ನಿರ್ವಹಣೆ ಏಕೆ ಕಳಪೆಯಾಗಿದೆ ಎಂಬ ಪ್ರಶ್ನೆಗೆ ಕರ್ನಾಟಕ ಕ್ರೀಡಾ ಇಲಾಖೆ ಉತ್ತರಿಸಬೇಕಾಗುತ್ತದೆ.

ಇದನ್ನೂ ಓದಿ:ವಿಮಾನ ಹೈಜಾಕ್ ಕುರಿತು ಮೊಬೈಲ್ ಸಂಭಾಷಣೆ… ವಿಮಾನ ಪ್ರಯಾಣಿಕ ಮುಂಬೈ ಪೊಲೀಸರ ವಶಕ್ಕೆ

Advertisement

ಕರ್ನಾಟಕ ಒಲಿಂಪಿಕ್‌ ಸಂಸ್ಥೆಯೂ ಇದಕ್ಕೆ ಉತ್ತರದಾಯಿಯಾಗಿದೆ. ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಗಮನಿಸುವ ಪ್ರಮುಖ ಹೊಣೆಗಾರಿಕೆ ಕೆಒಎಯದ್ದೇ. ಇಂತಹ ವಿಚಾರಗಳನ್ನು ಅದು ಗಮನ ಕೊಟ್ಟು ಸರಿಪಡಿಸಬೇಕು. ಅದನ್ನು ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರವೇನು ಎಂದು ಕ್ರೀಡಾಭಿಮಾನಿಗಳು ಕೇಳುತ್ತಿದ್ದಾರೆ.

ಸದ್ಯ ಎಐಎಫ್ಎಫ್ ಈ ಮೈದಾನದಲ್ಲಿ ಫುಟ್‌ಬಾಲ್‌ ಪಂದ್ಯಗಳನ್ನು ನಡೆಸುತ್ತಿದೆ. ಅದು ವಿಷಯವನ್ನು ಗಮನಿಸ ಬೇಕಾಗಿತ್ತಾದರೂ, ಈ ಮೈದಾನದ ನಿರ್ವಹಣೆಯಲ್ಲಿ ಅದು ಯಾವುದೇ ಪಾತ್ರವನ್ನು ವಹಿಸಲು ಸಾಧ್ಯವಿಲ್ಲ. ಇದರ ನೇರ ಉಸ್ತುವಾರಿ ರಾಜ್ಯ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್‌ ಸಂಸ್ಥೆಗೆ ಬರುತ್ತದೆ ಎಂದು ಮೂಲಗಳು ಹೇಳಿವೆ. ಈ ಸಮಸ್ಯೆಯನ್ನು ಸಂಬಂಧಪಟ್ಟ ಸಂಸ್ಥೆಗಳು ಬೇಗ ಹರಿಸಬೇಕೆನ್ನುವುದೇ ಕ್ರೀಡಾಭಿಮಾನಿಗಳ ಕಾಳಜಿ.

Advertisement

Udayavani is now on Telegram. Click here to join our channel and stay updated with the latest news.

Next