ಶಹಾಬಾದ: ಹಾಳಾದ ರಸ್ತೆ, ಮುರಿದು ಬಿದ್ದ ತಡೆಗೋಡೆ, ಕಿರಿದಾದ ರಸ್ತೆ ಮೇಲೆ ನೀರಿನ ಪೈಪ್, ಈ ರಸ್ತೆ ಮಧ್ಯೆ ದೊಡ್ಡ ಗುಂಡಿ, ಇದರ ಮಧ್ಯೆ ತೆರಳಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿಯಿದೆ.
ಇದು ತಾಲೂಕಿನ ಶಹಾಬಾದ-ವಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ-150ಕ್ಕೆ ಸಂಬಂ ಧಿಸಿದಂತೆ ಶಂಕರವಾಡಿ ಸಮೀಪದಲ್ಲಿ ನಿರ್ಮಿಸಲಾಗಿರುವ ಸೇತುವೆ ಕಥೆ. ಇಲ್ಲಿನ ಕಾಗಿಣಾ ಸೇತುವೆಗೆ 1968ರಲ್ಲಿ ಅಂದಿನ ಲೋಕೋಪಯೋಗಿ ಸಚಿವ ವಿರೇಂದ್ರ ಪಾಟೀಲ ಅವಧಿ ಯಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ.
ಐವತ್ತು ಅಡಿ ಅಗಲದ ರಾಷ್ಟ್ರೀಯ ಹೆದ್ದಾರಿಗೆ ಹತ್ತಡಿ ಅಗಲದ ಸೇತುವೆ ಇದ್ದು, ಮಧ್ಯದಲ್ಲಿ ಕಂದಕ, ನೀರಿನ ಪೈಪ್‌ಗ್ಳು, ತಡೆ ಗೋಡೆ ಇಲ್ಲದೆ ಅಪಾಯಕ್ಕೆ ಆಹ್ವಾನಿಸುವಂತಿದೆ. ಈಗಾಗಲೇ ಈ ಸೇತುವೆಯಿಂದ ಹಲವಾರು ವಾಹನಗಳು ನದಿಗೆ ಬಿದ್ದಿವೆ. ಹಲವಾರು ಸಾವು-ನೋವುಗಳು ಸಂಭವಿಸಿವೆ. ಈಗ ರಾಷ್ಟ್ರೀಯ ಹೆದ್ದಾರಿ ಸುರ್ಪದಿಗೆ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ರಸ್ತೆ ಮೂಲಕ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರೈತರು ಇದೇ ರಸ್ತೆ ಮಾರ್ಗವಾಗಿ ನಿತ್ಯ ತಮ್ಮ ತಮ್ಮ ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗಾಗಿ ಜಾನುವಾರು, ಎತ್ತಿನ ಬಂಡಿ, ಬೈಕ್, ಟ್ರ್ಯಾಕ್ಟರ್ ಸಮೇತ ಸಂಚಾರ ಮಾಡುತ್ತಾರೆ. ಅಲ್ಲದೇ ಚಿತ್ತಾಪುರ, ವಾಡಿ, ಯಾದಗಿರಿ, ಮಂತ್ರಾಲಯಕ್ಕೆ ತೆರಳಲು ಇದೇ ರಸ್ತೆ ಮಾರ್ಗ ಅನುಕೂಲವಾಗಿದೆ. ಇದೇ ರಸ್ತೆಯಿಂದ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಈ ರಸ್ತೆ ಮಧ್ಯೆ ದೊಡ್ಡ ಗುಂಡಿಗಳು ಬಿದ್ದಿವೆ. ತಡೆ ಗೋಡೆ ಇಲ್ಲದೆ ಸೇತುವೆ ದಾಟಲು ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ವರ್ಷದ ಮಳೆಗಾಲದಲ್ಲಿ ಭೀಮಾ ಹಾಗೂ ಕಾಗಿಣಾ ನದಿ ಪ್ರವಾಹಕ್ಕೆ ಸೇತುವೆ ಮೇಲಿನ ರಸ್ತೆ ಹಾಳಾಗಿ ಹೋಗಿತ್ತು. ತಡೆಗೋಡೆಗಳು ಮಾಯವಾಗಿದ್ದವು. ಸೇತುವೆ ಮೇಲಿನ ಕುಡಿಯುವ ನೀರಿನ ಪೈಪ್ ಹಾಳಾಗಿ ರಸ್ತೆ ಮಧ್ಯದಲ್ಲಿ ಬಿದಿದ್ದವು. ಅಂದು ಈ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಅಂದು ವಾಹನ ಸಂಚಾರಕ್ಕೆ ಬೇಕಾದ ಅನುಕೂಲ ಮಾಡಿಕೊಟ್ಟಿದ್ದು ಬಿಟ್ಟರೆ ಹೆದ್ದಾರಿ ಪ್ರಾಧಿಕಾರದವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಹಲವಾರು ಅಪಘಾತಗಳಾಗಿರುವ ಉದಾಹರಣೆಗಳಿವೆ.