ಜಿಯೋ ಫೈಬರ್‌ನ ಎಂಟ್ರಿಯಿಂದ ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಸಂಚಲನ ಉಂಟಾಗಿರುವುದಂತೂ ನಿಜ. ಇಷ್ಟು ದಿನ ಜಡವಾಗಿದ್ದ ಕ್ಷೇತ್ರದಲ್ಲಿ ಈಗ ಮಿಂಚು- ಗುಡುಗು ಶುರುವಾಗಿದೆ. ಬ್ರಾಡ್‌ಬ್ಯಾಂಡ್ ಕಂಪನಿಗಳ ನಡುವೆ ಪೈಪೋಟಿ ಶುರುವಾಗಿದೆ. ಇವೆಲ್ಲ ಬೆಳವಣಿಗೆಗಳ ಲಾಭ ಗ್ರಾಹಕರಿಗೆ ಸಿಗುತ್ತಿದೆ ಎನ್ನುವುದು ಸಂತಸದ ಸಂಗತಿ. ದುಬಾರಿ ಬೆಲೆಯ ಪ್ಲ್ರಾನ್‌ನಲ್ಲಿದ್ದ ಸವಲತ್ತುಗಳನ್ನು ಜಿಯೋ ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದೆ. ಅತ್ಯಂತ ಕಡಿಮೆ ಬೆಲೆಯ ಪ್ಲ್ರಾನ್ ಎಂದರೆ 699 ರೂ.ನದು. ಅದರಲ್ಲೇ 100Mbps ವೇಗದ ಇಂಟರ್ನೆಟ್ ನೀಡುತ್ತಿದೆ. ಇದೇ ವೇಗದ ಇಂಟರ್ನೆಟ್ ಸೇವೆಗೆ ಪ್ರತಿಸ್ಪರ್ಧಿ ಸಂಸ್ಥೆಗಳು 35- 45% ಹೆಚ್ಚಿನ ಬೆಲೆ ನಿಗದಿ ಪಡಿಸಿದ್ದವು. 699 ರೂ.ನಿಂದ 8,499 ರೂ.ವರೆಗಿನ ಪ್ಲ್ರಾನ್‌ಗಳು ಜಿಯೋ ಫೈಬರ್‌ನಲ್ಲಿವೆ.
ಅಲ್ಲದೆ 2,499- 8,499 ನಡುವಿನ ಪ್ಲ್ರಾನ್‌ಗಳನ್ನು ಆರಿಸಿಕೊಂಡ ಗ್ರಾಹಕರು ವಾರ್ಷಿಕ ಚಂದಾದಾರರಾಗಿದ್ದರೆ ಸಂಸ್ಥೆ 32 ಇಂಚಿನ ಎಚ್.ಡಿ ಟಿ.ವಿಯನ್ನು ಉಚಿತವಾಗಿ ನೀಡಲಿದೆ. 1,299 ರೂ. ನ ಪ್ಲ್ರಾನ್ ಆರಿಸಿಕೊಂಡ ಗ್ರಾಹಕರು ಎರಡು ವರ್ಷದ ಚಂದಾದಾರಿಕೆಯನ್ನು ಹೊಂದಿದರೆ ಅವರಿಗೂ ಎಚ್.ಡಿ ಟಿ.ವಿ ಸಿಗಲಿದೆ. ಅಮೆರಿಕದಲ್ಲಿ ಲಭ್ಯ ಇರುವ ಸರಾಸರಿ ಇಂಟರ್ನೆಟ್ ವೇಗ 90Mbps. Mbps ಎಂದರೆ ಮೆಗಾ ಬಿಟ್ಸ್ ಪರ್ ಸೆಕೆಂಡ್. ಒಂದು ಸೆಕೆಂಡಿನಲ್ಲಿ ಎಷ್ಟು ಡೇಟಾ ಡೌನ್‌ಲೋಡ್ ಮಾಡಬಹುದು ಎಂಬುದನ್ನು ಇದು ಸೂಚಿಸುತ್ತದೆ. Mbps ಸಂಖ್ಯೆ ಹೆಚ್ಚಿದಷ್ಟೂ ವೇಗ ಹೆಚ್ಚು. ಒಂದೊಂದು ಇಂಟರ್ನೆಟ್ ಪ್ಲ್ರಾನ್ ಒಂದೊಂದು ರೀತಿಯ ಸ್ಪೀಡ್ ಹೊಂದಿರುತ್ತದೆ. ಭಾರತದಲ್ಲಿ ಇದುವರೆಗೂ ಲಭ್ಯವಿದ್ದ ಸರಾಸರಿ ಇಂಟರ್ನೆಟ್ ವೇಗ 25Mbps. . ಇದೀಗ ಜಿಯೋ 100Mbps ನಿಂದ 1Gbps ತನಕದ ಇಂಟರ್ನೆಟ್ ವೇಗವನ್ನು ಒದಗಿಸುತ್ತಿದೆ. 1 Gbps ಎಂದರೆ 1000 Mbpsಗೆ ಸಮ. ಈ 1Gbps ವೇಗ 3,999 ರೂ.ಗೆ ಮೇಲ್ಪಟ್ಟ ಪ್ಲ್ರಾನ್‌ಗಳಲ್ಲಿ ಲಭ್ಯವಾಗಲಿದೆ. ಜಿಯೋ ಬಳಕೆದಾರರು ಶುರುವಿನಲ್ಲಿ 1,000 ರೂ. ಇನ್‌ಸ್ಟಾಲ್ಮೆಂಟ್ ಶುಲ್ಕ ಮತ್ತು 1,500 ರೂ ಅಡ್ವಾನ್ಸ್ ನೀಡಬೇಕು. 1,500 ರೀಫಂಡೆಬಲ್ ಮೊತ್ತವಾಗಿರುತ್ತದೆ.
ಬಿಎಸ್ಸೆನ್ನೆಲ್, ಜಿಯೋಗೆ ಪೈಪೋಟಿ ನೀಡುವ ಸಲುವಾಗಿ 777 ರೂ. ಮತ್ತು 849 ರೂ. ಮೊತ್ತದ ಎರಡು ಇಂಟರ್ನೆಟ್ ಪ್ಲ್ರಾನ್‌ಗಳನ್ನು ಪರಿಚಯಿಸಿದೆ. ಇವೆರಡೂ ಪ್ಲ್ರಾನ್‌ಗಳು 50Mbps ವೇಗವನ್ನು ಹೊಂದಿದೆ. ಆದರೆ 500ಜಿಬಿ- 600ಜಿಬಿ ಡೇಟಾ ಖಾಲಿಯಾದ ಮೇಲೆ ಈ ವೇಗ 2Mbps ಗೆ ಕುಸಿಯಲಿದೆ. ಇನ್ನು ಜಿಯೋ 699ರೂಗೆ ಒದಗಿಸುತ್ತಿರುವ 100Mbps ವೇಗವನ್ನು ಬಿಎಸ್ಸೆನ್ನೆಲ್ ತನ್ನ 1277ರೂ ಹಾಗೂ 1,999 ರೂ.ನ ಪ್ಲ್ರಾನ್‌ನಲ್ಲಿ ಹೊಸದಾಗಿ ಪರಿಚಯಿಸಿದೆ. 1,999 ರೂ ಪ್ಲ್ರಾನ್‌ನಲ್ಲಿ ದಿನನಿತ್ಯ ಗ್ರಾಹಕರಿಗೆ 33 ಜಿ.ಬಿ ಡೇಟಾ ಹಾಗೂ 1277 ಪ್ಲ್ರಾನ್‌ನಲ್ಲಿ ತಿಂಗಳಿಗೆ 750ಜಿಬಿ ಡೇಟಾ ದೊರೆಯಲಿದೆ. ಅಚ್ಚರಿಯೆಂದರೆ, ಈ ಪ್ಲ್ರಾನ್‌ನ ಮೊತ್ತಕ್ಕೆ ಜಿಯೋ 250Mbps ವೇಗವನ್ನು ನೀಡುತ್ತಿದೆ.
1Gbps ನಷ್ಟು ಇಂಟರ್ನೆಟ್ ವೇಗವನ್ನು ನೀಡಿದ್ದು ಜಿಯೋನೇ ಮೊದಲು. ಈಗ ಮಿಕ್ಕ ಕಂಪನಿಗಳೂ ಆ ವೇಗವನ್ನು ನೀಡಲು ಮುಂದಾಗುತ್ತಿದೆ. ಅವುಗಳಲ್ಲಿ ಏರ್‌ಟೆಲ್ ಕೂಡಾ ಒಂದು. ಅದು 3,999 ರೂ. ತಿಂಗಳ ಪ್ಲ್ರಾನ್‌ನಲ್ಲಿ 1Gbps ವೇಗದ ಇಂಟರ್ನೆಟ್ ನೀಡುತ್ತಿದೆ.
ಆ್ಯಕ್ಟ್ ಬ್ರಾಡ್‌ಬ್ಯಾಂಡ್, ಜಿಯೋನ ಉತ್ಕೃಷ್ಟ ಪ್ಲ್ರಾನ್‌ನಲ್ಲಿ ಇರುವ 1Gbps ವೇಗವನ್ನು ತಾನೂ ಒದಗಿಸುತ್ತಿದೆ. ಆದರೆ ಅದು ಆಯ್ದ ನಗರಗಳಲ್ಲಿ ಮಾತ್ರವೇ ಕಾರ್ಯಾಚರಿಸುತ್ತಿದೆ. ಆ್ಯಕ್ಟ್ ಪ್ಲ್ರಾನ್‌ಗಳು 1159ರಿಂದ ಶುರುವಾಗಿ 5,999ರೂ. ತನಕವೂ ಇವೆ. ಇನ್ನೊಂದು ವಿಷಯವೆಂದರೆ, ಆ್ಯಕ್ಟ್ ಪ್ಲ್ರಾನುಗಳ ಬೆಲೆ ನಗರದಿಂದ ನಗರಕ್ಕೆ ವ್ಯತ್ಯಯವಾಗುತ್ತದೆ. ಅಲ್ಲದೆ ತಿಂಗಳಿಗೆ 400ಜಿಬಿಯಿಂದ 1500 ಜಿಬಿ ತನಕ ಡೇಟಾವನ್ನು ಈ ಪ್ಲ್ರಾನುಗಳು ಗ್ರಾಹಕರಿಗೆ ನೀಡುತ್ತಿದೆ.