ಜೈಪುರ : ”ಬ್ರಿಟಿಷರು ಭಾರತವನ್ನು ಇನ್ನೂ ನೂರು ವರ್ಷ ಆಳಬೇಕಿತ್ತು. ಹಾಗೆ ಆಗಿದ್ದರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದವರು ಇಷ್ಟೊಂದು ದಮನಕ್ಕೆ ಒಳಗಾಗುತ್ತಿರಲಿಲ್ಲ ಮತ್ತು ಅವರನ್ನು ಮೇಲೆತ್ತುವುದು ಸಾಧ್ಯವಿತ್ತು” ಎಂದು ಬಿಎಸ್‌ಪಿ ರಾಜ್ಯ ಘಟಕದ ಅದ್ಯಕ್ಷರಾಗಿರುವ ಧರಮ್‌ವೀರ್ ಸಿಂಗ್ ಹೇಳಿದ್ದಾರೆ. ಸಿಂಗ್ ಅವರ ಈ ಮಾತುಗಳು ವ್ಯಾಪಕ ಟೀಕೆ, ಖಂಡನೆಗೆ ದೆಯಲ್ಲದೆ ವಿವಾದಕ್ಕೆ ಕಾರಣವಾಗಿದೆ.
ಡಾ. ಅಂಬೇಡ್ಕರ್ ಗೆ ಬ್ರಿಟಿಷರು ವಿದೇಶದಲ್ಲಿ ಕಲಿಯುವ ಅವಕಾಶವನ್ನು ನೀಡದಿರುತ್ತಿದ್ದರೆ ಅವರಿಗೆ ಹಿಂದುಳಿದ ವರ್ಗಗಳಿಗೆ ನೆರವಾಗುವುದು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಬ್ರಿಟಿಷರ ಆಳ್ವಿಕೆಯ ಫಲವಾಗಿ ಅಂಬೇಡ್ಕರ್‌ಗೆ ವಿದೇಶ ಕಲಿಕೆ ಸಾಧ್ಯವಾಯಿತು. ಬ್ರಿಟಿಷರು ಭಾರತಕ್ಕೆ ಬಾರದಿರುತ್ತಿದ್ದರೆ ದೇಶದಲ್ಲಿ ಬಾಬಾ ಸಾಹೇಬರನ್ನು ಯಾವುದೇ ಶಾಲೆ ಸೇರಿಸಿಕೊಳ್ಳುತ್ತಿರಲಿಲ್ಲ ಎಂದು ಧರಮ್‌ವೀರ್ ಸಿಂಗ್ ಹೇಳಿದರು. ಅವರು ಇಲ್ಲಿ ನಡೆದ ರಾಲಿಯೊಂದರಲ್ಲಿ ಮಾತನಾಡುತ್ತಿದ್ದರು.
ಬ್ರಿಟಿಷರ ಆಳ್ವಿಕೆಯನ್ನು ಇಷ್ಟೊಂದು ಮೆಚ್ಚಿಕೊಳ್ಳುವ ಧರಂವೀರ್ ಸಿಂಗ್ ಅವರು ಬ್ರಿಟಿಷರ ಋಣ ತೀರಿಸಲು ಬ್ರಿಟನ್‌ಗೆ ಹೋಗಿ ವಾಸಿಸುವುದು ಉತ್ತಮ ಎಂದು ಹಲವರು ಟೀಕಿಸಿದ್ದಾರೆ. ಧರಂ ವೀರ್ ಸಿಂಗ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿರುವ ಸಹಸ್ರಾರು ಭಾರತೀಯರನ್ನು ಅವಮಾನಿಸಿದ್ದಾರೆ ಎಂದು ಇನ್ನಷ್ಟು ಹಲವು ಮಂದಿ ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆಗಳು ಡಿ.17ರಂದು ನಡೆಯಲಿದ್ದು ಹಿಂದುಳಿದ ವರ್ಗದವರ ಓಟುಗಳನ್ನು ಶತಾಯಗತಾಯ ಪಡೆಯುವ ಯತ್ನದಲ್ಲಿ ಬಿಎಸ್‌ಪಿ ಇದೆ. ಅಂತೆಯೇ ಅದು ರಾಜ್ಯದಲ್ಲಿನ ಎಲ್ಲ 200 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.