ಲಂಡನ್: ಖ್ಯಾತ ಬ್ರಿಟಿಷ್ ಕಾದಂಬರಿಕಾರ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ವಿಎಸ್ ನೈಪಾಲ್ (85ವರ್ಷ) ಅವರು ಭಾನುವಾರ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸರ್ ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ ಅವರು ಟ್ರಿನಿಡಾಡ್ ಮತ್ತು ಟೊಬ್ಯಾಗೋ ದೇಶದಲ್ಲಿ 1932ರ ಆಗಸ್ಟ್ 17ರಂದು ಜನಿಸಿದ್ದರು. ನೈಪಾಲ್ ಭಾರತ-ಟ್ರೆನಿಡಾಡ್ ಮೂಲದ ಬ್ರಿಟಿಷ್ ಲೇಖಕ. ನೈಪಾಲ್ ಅವರು ಆಕ್ಸ್ ಫರ್ಡ್ ಯೂನಿರ್ವಸಿಟಿಯಲ್ಲಿ ಪದವಿ ಶಿಕ್ಷಣ ಪಡೆದಿದ್ದರು.
ವಿಎಸ್ ನೈಪಾಲ್ ವಿಶ್ವದ ಖ್ಯಾತ ಹಾಗೂ ವಿವಾದಾತ್ಮಕ ಬರಹಗಾರರಾಗಿದ್ದರು. 20ನೇ ಶತಮಾನದ ಮಹಾನ್ ಬರಹಗಾರರಲ್ಲಿ ನೈಪಾಲ್ ಒಬ್ಬರಾಗಿದ್ದಾರೆ. ಹೌಸ್ ಆಫ್ ಮಿಸ್ಟರ್ ಬಿಸ್ವಾಸ್ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ನೈಪಾಲ್ ರಚಿಸಿದ್ದಾರೆ.
1971ರಲ್ಲಿ ಇನ್ ಎ ಫ್ರೀ ಸ್ಟೇಟ್ ಕೃತಿಗಾಗಿ ನೈಪಾಲ್ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮೂಲದ ಲೇಖಕರಾಗಿದ್ದರು. ಇವರ ಕಾದಂಬರಿಗಳು ಅದರಲ್ಲೂ ಮುಖ್ಯವಾಗಿ ಪ್ರವಾಸ ಕಥನಗಳಲ್ಲಿ ತೃತೀಯ ಜಗತ್ತನ್ನು ಕೆಟ್ಟದಾಗಿ ಚಿತ್ರಿಸಿರುವುದಕ್ಕೆ ಕಟುವಾಗಿ ಟೀಕೆಗೆ ಒಳಗಾಗಿದ್ದರು.
ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿಎಸ್ ನೈಪಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾಹಿತಿಗಳು, ಲೇಖಕರು ಸಂತಾಪ ವ್ಯಕ್ತಪಡಿಸಿದ್ದಾರೆ.