ಹೊಸದಿಲ್ಲಿ : ಒಂಬತ್ತು ಸಾವಿರ ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೈದು ಲಂಡನ್‌ಗೆ ಪರಾರಿಯಾಗಿರುವ ಮದ್ಯ ದೊರೆ, ಅನಿವಾಸಿ ಭಾರತೀಯ, ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ವಿಷಯದಲ್ಲಿ ಬ್ರಿಟನ್ ನ್ಯಾಯಾಲಯ ‘ಭಾರತೀಯ ಜೈಲುಗಳ ಸ್ಥಿತಿಗತಿ’ ಬಗ್ಗೆ ಪ್ರಶ್ನಿಸಿರುವುದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರಿಗೆ ಖಡಕ್ ಉತ್ತರ ಕೊಟ್ಟಿರುವ ಸಂಗತಿ ಇದೀಗ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮೂಲಕ ಬಹಿರಂಗಕ್ಕೆ ಬಂದಿದೆ.
“ಭಾರತದ ಸ್ವಾತಂತ್ರ್ಯಕ್ಕೆ ಮುನ್ನ ಆಗಿನ ಬ್ರಿಟಿಷ್ ಸರಕಾರ ರಾಷ್ಟ್ರೀಯ ನಾಯಕರಾದ ಮಹಾತ್ಮ ಗಾಂಧೀಜಿ ಮತ್ತು ಜವಾಹರಲಾಲ್ ನೆಹರೂ ಅವರನ್ನು ಬಂಧನದಲ್ಲಿ ಇರಿಸಿದ್ದ ಜೈಲುಗಳು ಇವೇ ಆಗಿವೆ’ ಎಂದು ಪ್ರಧಾನಿ ಮೋದಿ ಅವರು ಬ್ರಿಟಿಷ್ ಪ್ರಧಾನಿ ತೆರೆಸಾ ಮೇ ಅವರಿಗೆ ನೆನಪಿಸಿಕೊಟ್ಟಿದ್ದಾರೆ ಎಂದು ಸಚಿವ ಸುಶ್ಮಾ ಸ್ವರಾಜ್ ಇಂದು ಸೋಮವಾರ ಬಹಿರಂಗಪಡಿಸಿದರು.
ಗಾಂಧಿ, ನೆಹರೂ ಅವರನ್ನು ಬಂಧನಲ್ಲಿ ಇರಿಸುವಾಗಿನ ಭಾರತೀಯ ಜೈಲುಗಳ ಸ್ಥಿತಿ ಗತಿ ಬಗ್ಗೆ ಇಲ್ಲದಿದ್ದ ಕಾಳಜಿ ಈಗ ವಿಜಯ್ ಮಲ್ಯ ಅವರನ್ನು ಬಂಧಿಸಿಡುವ ಜೈಲಿನ ಬಗ್ಗೆ ಬ್ರಿಟಿಷ್ ನ್ಯಾಯಾಲಯಗಳಿಗೆ ಬಂದುದಾದರೂ ಹೇಗೆ ಮತ್ತು ಏಕೆ ಎಂದು ಪ್ರಧಾನಿ ಮೋದಿ, ಬ್ರಿಟಿಷ್ ಪ್ರಧಾನಿಯನ್ನು ಪ್ರಶ್ನಿಸಿರುವುದಾಗಿ ಸ್ವರಾಜ್ ತಿಳಿಸಿದರು. ಮೋದಿ ಅವರ ಈ ಸಂದೇಶವನ್ನು ಈ ವರ್ಷ ಎಪ್ರಿಲ್ ನಲ್ಲಿ ಲಂಡನ್‌ನಲ್ಲಿ ಉಭಯ ನಾಯಕರು ಭೇಟಿಯಾದ ಸಂದರ್ಭದಲ್ಲಿ ತಿಳಿಸಲಾಗಿತ್ತು.
12 ಭಾರತೀಯ ಬ್ಯಾಂಕುಗಳನ್ನು ಒಳಗೊಂಡ ಎಸ್‌ಬಿಐ ನೇತೃತ್ವದ ಕನ್‌ಸಾರ್ಶಿಯಮ್, ವಿಜಯ್ ಮಲ್ಯ ವಿರುದ್ಧದ ಗಡೀಪಾರು ದಾವೆಯನ್ನು ಜಯಿಸಿದ್ದು ಈಗಿನ್ನು ಅವು ಮಲ್ಯ ಅವರಿಂದ ತಮಗಿರುವ ಬಾಕಿ ಸಾಲವನ್ನು ವಸೂಲಿ ಮಾಡಬಹುದಾಗಿದೆ ಎಂದು ಸ್ವರಾಜ್ ಹೇಳಿದರು.
ವಿಜಯ್ ಮಲ್ಯ ಅವರು ದೇಶದ ಹಣಕಾಸು ಸಂಸ್ಥೆಗಳಿಗೆ ವಂಚನೆಗೈದು ವಿದೇಶಕ್ಕೆ ಪಲಾಯನ ಮಾಡಿರುವ ಹಾಗೂ ಜಾರಿ ನಿರ್ದೇಶನಾಲಯದಿಂದ ಕ್ರಿಮಿನಲ್ ವಿಚಾರಣೆಗೆ ಗುರಿಯಾಗಿರುವ 53 ಮಂದಿಯಲ್ಲಿ ಒಬ್ಬರಾಗಿದ್ದಾರೆ.