ಎಚ್.ಡಿ.ಕೋಟೆ: ಬಹುವರ್ಷಗಳ ಹಿಂದೆ ಇಡೀ ತಾಲೂಕಿನ ನಿಯಂತ್ರಣದ ಹೊಣೆ ಹೊತ್ತ ತಾಲೂಕು ಕಚೇರಿ ಅನಿಸಿಕೊಂಡಿದ್ದ ಪಟ್ಟಣದ ಆಂಗ್ಲರ ಕಾಲದ ನಿರ್ಮಿತ ಹಳೆಯ ತಾಲೂಕು ಕಚೇರಿ ಕಟ್ಟಡ ನಿರ್ವಹಣೆ ಕಾಣದೆ ಅವಸಾನದ ಅಂಚು ತಲುಪುತ್ತಿದೆ. ಹೌದು, ಎಚ್.ಡಿ.ಕೋಟೆ ತಾಲೂಕಿನ ಹಳೆಯ ತಾಲೂಕು ಕಚೇರಿ ಬಹುವರ್ಷಗಳ ಹಿಂದೆ ಇಡೀ ತಾಲೂಕಿನ ಆಡಳಿತವನ್ನು ನಿಯಂತ್ರಿಸುವ ಕೇಂದ್ರ ಸ್ಥಾನವಾಗಿತ್ತು.
ತಹಶೀಲ್ದಾರ್ ಕಚೇರಿ, ಪೊಲೀಸ್ ಕಚೇರಿ, ಉಪಖಜಾನೆ ಸೇರಿದಂತೆ ಇನ್ನಿತರ ಹಲವಾರು ತಾಲೂಕು ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು.
ಕಟ್ಟಡ ಗಟ್ಟಿಮುಟ್ಟಾಗಿದೆ: ಆಂಗ್ಲರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡ ಇಡೀ ತಾಲೂಕು ಕಚೇರಿ ಕಟ್ಟಡದ ಗೋಡೆಗಳು ಇಟ್ಟಿಗೆ ಮತ್ತು ಸುಣ್ಣದ ತಿಳಿಯಿಂದ ನಿರ್ಮಾಣವಾಗಿದ್ದು, ಮೇಲ್ಚಾವಣಿ ತೀರು ಮತ್ತು ರೀಪರ್‌ಗಳಿಂದ (ಮರಗಳು) ನಿರ್ಮಾಣವಾಗಿದ್ದರೂ ಇಂದಿಗೂ ಸುಸಜ್ಜಿತವಾಗಿ ಗಟ್ಟಿಮುಟ್ಟಾಗಿವೆ. ಕಟ್ಟಡದ ಮೇಲ್ಚಾವಣಿಯ ನಿರ್ಮಾಣವೂ ಆಕರ್ಷಣೀಯ ವಾಗಿದ್ದು, ನೋಡುಗರ ಮನ ಸೆಳೆಯುವಂತಿದೆ.
ಜನಸಂಖ್ಯೆ ಏರಿಕೆಯಾದಂತೆ ಪಟ್ಟಣದಲ್ಲಿ ನೂತನವಾಗಿ ಮಿನಿ ವಿಧಾನಸೌಧದ ಕಟ್ಟಡವೊಂದನ್ನು ನಿರ್ಮಿಸಿ ಹಳೆಯ ತಾಲೂಕು ಕಚೇರಿ ಸಂಪೂರ್ಣ ಆಡಳಿತವನ್ನು ಮಿನಿ ವಿಧಾನಸೌಧದ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಹಳೆಯ ತಾಲೂಕು ಕಚೇರಿ ಕಟ್ಟಡ ಖಾಲಿ ಇದ್ದರಿಂದ ಸ್ಥಳೀಯ ಪಟ್ಟಣ ಪಂಚಾಯಿತಿ, ಗೃಹರಕ್ಷಕ ದಳ, ರಾಜಸ್ವ ನಿರೀಕ್ಷಕರ ಕೊಠಡಿ, ಹಾಗೂ ಗ್ರಾಮ ಲೆಕ್ಕಿಗರ ಕಚೇರಿಗಳಾಗಿ ಮಾರ್ಪಟ್ಟು ಕಾರ್ಯ ನಿರ್ವಹಿಸುತ್ತಿದೆ.
ಕೆಸರುಮಯ: ಆದರೆ, ಹಳೆಯದಾದ ಕಟ್ಟಡ ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ಇರುವುದರಿಂದ ಕಟ್ಟಡ ಒಂದು ಕಡೆ ಶಿಥಲಾವಸ್ಥೆ ತಲುಪುತ್ತಿದ್ದರೆ ಇನ್ನೊಂದು ಕಡೆ ಇಡೀ ಕಚೇರಿಯ ವಿಶಾಲವಾದ ಆವರಣ ಕಲುಷಿತಗೊಂಡು ಗಿಡಗಂಟಿಗಳಿಂದ ಆವೃತ್ತವಾಗಿ ಕೊಳೆತು ಗಬ್ಬೆದ್ದು ನಾರುತ್ತಿದೆ.
ಇದನ್ನೂ ಓದಿ:- ಮತ್ತೆ ಲಾಕ್ ಡೌನ್ ಮಾಡುವ ಯಾವುದೇ ಚಿಂತೆನೆ ಇಲ್ಲ: ಸಚಿವ ಕೆ.ಸುಧಾಕರ್
ಕೊಂಚ ಮಳೆಯಾದರೂ ಹಳೆಯ ತಾಲೂಕು ಕಚೇರಿ ಆಚರಣದ ತುಂಬೆಲ್ಲಾ ಮಳೆಯ ನೀರು ಶೇಖರಣೆಯಾಗಿ ಕೊಳೆತು ನಾರುತ್ತಾ ಕಚೇರಿ ಆವರಣ ಕೆಸರುಮಯವಾಗುತ್ತಿದೆ. ಕಲುಷಿತ ನೀರು ನಿಂತಲ್ಲೇ ನಿಂತು ಕೊಳೆತುನಾರುವುದರಿಂದ ಸೊಳ್ಳೆಗಳ ವಂಶಾಭಿವೃದ್ಧಿಯ ಕೇಂದ್ರ ಸ್ಥಾನವಾಗಿ ಮಾರ್ಪಾಟುಗೊಂಡು, ಸಾಂಕ್ರಾಮಿಕ ರೋಗಗಳಾದ ಚಿಕೂನ್ ಗುನ್ಯಾ, ಮಲೇರಿಯಾ ಸೇರಿದಂತೆ ಇನ್ನಿತರ ಮಾರಕ ರೋಗಗಳ ಆಶ್ರಯ ತಾಣವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.
ಅಭಿವೃದ್ಧಿಗೊಳಿಸಿ ಯತಾಸ್ಥಿತಿ ಕಾಪಾಡಿ
ಸ್ವಾತಂತ್ರ್ಯ ಪೂರ್ವದ ಕಟ್ಟಡವೊಂದು ತಾಲೂಕು ಕೇಂದ್ರ ಸ್ಥಾನದಲ್ಲಿ ಉಳಿದಿರುವುದು ಸಂತಸದ ಸಂಗತಿ. ಹಾಗೆಂದು ಕಟ್ಟಡ ನಿರ್ವಹಣೆ ಜತೆಗೆ ಮೇಲ್ವಿಚಾರಣೆ ಇಲ್ಲದೆ ಶಿಥಿಲಗೊಂಡಿರುವುದು ಬೇಸರದ ಸಂಗತಿಯೇ ಸರಿ. ಇನ್ನಾದರೂ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಮತ್ತು ತಾಲೂಕಿನ ಚುನಾಯಿತ ಪ್ರತಿನಿಧಿಗಳು ತಾಲೂಕು ಕೇಂದ್ರ ಸ್ಥಾನದಲ್ಲಿ ಇತಿಹಾಸ ಹೊಂದಿರುವ ಹಳೆಯ ತಾಲೂಕು ಕಚೇರಿ ಕಟ್ಟಡದ ಶುಚಿತ್ವದ ಜತೆಗೆ ಕಟ್ಟಡದ ಯಥಾಸ್ಥಿತಿ ಕಾಪಾಡುವಂತೆ ಪಟ್ಟಣದ ಹಿರಿಯ ನಾಗರೀಕರು ಒತ್ತಾಯಿಸಿದ್ದಾರೆ.