ಬೆಳಗಾವಿ: ಬ್ರಿಟನ್ ನಿಂದ ಬೆಳಗಾವಿ ನಗರಕ್ಕೆ ಆಗಮಿಸಿದ್ದ ಮಹಿಳೆಯ ಕೋವಿಡ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಹೇಳಿಕೆಯಿಂದ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಇಂಗ್ಲೆಂಡ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿತ ಕೋವಿಡ್ ಸೋಂಕು ಆತಂಕ ಉಂಟು ಮಾಡಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಲಂಡನ್ ದಿಂದ ಬೆಂಗಳೂರು ಮೂಲಕ ಬೆಳಗಾವಿಗೆ ಮಹಿಳೆಯೊಬ್ಬರು ಜಿಲ್ಲೆಗೆ ಆಗಮಿಸಿದ್ದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಬೆಳಗಾವಿಯ ಖಡೇಬಜಾರ್ ಪ್ರದೇಶದ ನಿವಾಸಿಯಾಗಿರುವ 35 ವರ್ಷದ ಈ ಮಹಿಳೆಯನ್ನು ಮಂಗಳವಾರ (ಡಿ.22) ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮಹಿಳೆಯ ಮನೆಗೆ ಭೇಟಿ ನೀಡಿದ ಆರೋಗ್ಯ ಸಿಬ್ಬಂದಿ, ಆರೋಗ್ಯ ತಪಾಸಣೆ ನಡೆಸಿದ್ದು ಮನೆಯಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ.
ಮಹಿಳೆ ಸೇರಿದಂತೆ ಆಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮೇಲೆ ಅಧಿಕಾರಿಗಳು ತೀವ್ರ ನಿಗಾ ಇಡಲಾಗಿದ್ದು ಮಹಿಳೆಯ ಕುಟುಂಬಸ್ಥರನ್ನು ಸಹ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ಮಹಿಳೆಯ ಕೋವಿಡ್ ವರದಿ ನೆಗೆಟಿವ್ ಬಂದಿದ್ದು ಜಿಲ್ಲೆಯ ಜನರು ನಿಟ್ಟುಸಿರುವ ಬಿಡುವಂತಾಗಿದೆ.
ಇದನ್ನೂ ಓದಿ: ಆದಾಯ ಮೀರಿ ಖರ್ಚುವೆಚ್ಚ; ಸಣ್ಣ ತಪ್ಪಿಗಾಗಿ ದೊಡ್ಡ ಬೆಲೆ ತೆರಬೇಕಾದೀತು: ಇಂದಿನ ಗ್ರಹಬಲ !