ಲಂಡನ್: ಇಂಗ್ಲೆಂಡ್ ಕ್ರಮೇಣ ಕೋವಿಡ್ ಆಘಾತದಿಂದ ಚೇತರಿಸಿಕೊಳ್ಳುತ್ತಿದೆ. ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕಾರಣ ಸೋಮವಾರದ ಬಳಿಕ ಲಾಕ್‌ಡೌನ್ ಸಡಿಲವಾಗುವ ಸಾಧ್ಯತೆ ಇದೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರದಿಂದ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧರಿಸಿದ್ದಾರೆ. ಸಡಿಲಿಕೆಯಲ್ಲಿ ಹೆಚ್ಚಿನ ಕ್ಷೇತ್ರಗಳಿಗೆ ವಿನಾಯಿತಿ ದೊರೆಯಲಿದ್ದು, ಜನರು ನಿಯಮ ಪಾಲನೆಯ ಷರತ್ತಿನೊಂದಿಗೆ ವಾಣಿಜ್ಯ ವ್ಯವಹಾರ ಆರಂಭಿಸಬಹುದು. ಜೂನ್ ಬಳಿಕ ಶಾಲೆಗಳು ತೆರೆಯುವ ಸಾಧ್ಯತೆಗಳಿವೆ. ಲಾಕ್‌ಡೌನ್ ಸಡಿಲಗೊಂಡಾಗ ಅನುಮತಿ ದೊರೆಯುವ ಸಾಲಿನಲ್ಲಿ ಪ್ರಮುಖವಾಗಿ ಪಿಕ್ನಿಕ್, ಸನ್‌ಬಾತಿಂಗ್ ಮತ್ತ ರಾಂಬಲ್‌ಗಳು ಸೇರಿವೆ ಎನ್ನಲಾಗಿದೆ.
ಆದರೆ ಕೆಲವು ಹೆಚ್ಚುವರಿ ಸುರಕ್ಷಾ ಕ್ರಮಗಳು ಮತ್ತು ಷರತ್ತುಗಳು ಶೀಘ್ರವೇ ಘೋಷಣೆಯಾಗಲಿವೆ. ಲಂಡನ್ ಜನರು ಸತತ 2 ತಿಂಗಳಿಂದ ಲಾಕ್‌ಡೌನ್‌ನಲ್ಲಿದ್ದಾರೆ. ಪ್ರತಿವರ್ಷ ಈ ಸಮಯದಲ್ಲಿ ಜನರು ಹೆಚ್ಚಿನ ಸಮಯವನ್ನು ಪ್ರಕೃತಿಯೊಂದಿಗೆ ಕಳೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿಯಮಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಜನರು ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಿ ಮನೆಯಿಂದ ಹೊರಹೋಗಲು ಅವಕಾಶ ದೊರೆಯುವ ಸಾಧ್ಯತೆ ಇದೆ.
ಮುಖ್ಯವಾಗಿ ಸರಕಾರದ ಈ ನಡೆ ಜನರಿಗೆ ಅನುಕೂಲವಾಗಿದ್ದರೂ ಸಾಮಾಜಿಕ ಅಂತರಗಳನ್ನು ಪಾಲಿಸಬೇಕಿದೆ. ಸ್ವಲ್ಪ ಎಡವಿದರೂ ಕೊರೊನಾ ಆಘಾತ ಇನ್ನಷ್ಟು ಹೆಚ್ಚಬಹುದು. ಆದರೆ ಪಬ್, ಬಿಯರ್‌ಗಾರ್ಡನ್, ಕಾಫಿ ಬಾರ್ ಸೇರಿದಂತೆ ಮೊದಲಾದ ಮನರಂಜನೆಯ ಕ್ಷೇತ್ರಗಳನ್ನು ತೆರೆಯಲು ನಿರ್ಧರಿಸಿಲ್ಲ. ಲಾಕ್‌ಡೌನ್ ಜಾರಿಯಲ್ಲಿದ್ದ ಸಂದರ್ಭ ಕೆಲವರು ಸರಕಾರದ ಆದೇಶವನ್ನು ಧಿಕ್ಕರಿಸಿ ಪಾರ್ಕ್‌ಗಳಲ್ಲಿ ಸಮಯ ಕಳೆಯುತ್ತಿದ್ದರು. ಹೆಚ್ಚಾಗಿ ವ್ಯಾಯಾಮಗಳನ್ನು ಮಾಡಲು ಜನರು ಪಾರ್ಕ್‌ಗಳತ್ತ ಹೋಗುತ್ತಿದ್ದು, ಸನ್ ಬಾತ್‌ಗಳನ್ನು ಪೂರೈಸುತ್ತಿದ್ದರು. ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಕೊರೊನಾ ಪ್ರಕರಣಗಳು ಕಡಿಮೆ ಇದ್ದ ಸ್ಥಳಗಳಲ್ಲಿ ಪಾರ್ಕ್ ಮತ್ತು ಸನ್‌ಬಾತ್‌ಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಉಳಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲು ಸ್ಥಳೀಯ ಆಡಳಿತದ ವಿವೇಚನೆಗೆ ಬಿಡಲಾಗಿದೆ.