Advertisement

ಬದನೆಯಿಂದ ಲಕ್ಷಾಂತರ ಲಾಭ ಪಡೆದ ದೇವರಾಜ… ಒಂದು ದಿನಕ್ಕೆ ಒಂದು ಟನ್ ಇಳುವರಿ

06:56 PM Jul 07, 2023 | Team Udayavani |

ರಬಕವಿ-ಬನಹಟ್ಟಿ: ಕಡಿಮೆ ಜಾಗ, ಕಡಿಮೆ ಅವಧಿ, ಉತ್ತಮವಾದ ಬೆಳೆ ಎಲ್ಲವನ್ನೂ ಏಕ ಕಾಲಕ್ಕೆ ಸಾಧಿಸುವುದು ಅಪರೂಪ. ಆದರೆ ಇಂದಿನ ಆಧುನಿಕ ಸಂಶೋಧನೆ ಹಾಗೂ ಪ್ರಯೋಗಗಳಿಂದ ಯಾವ ಪ್ರದೇಶದಲ್ಲಾದರೂ ಉತ್ತಮವಾದ ಬೆಳೆ ಬೆಳೆದು ಉತ್ತಮ ಇಳುವರಿ ಪಡೆದು, ಮಾರುಕಟ್ಟೆಯ ಸದುಪಯೋಗದೊಂದಿಗೆ ಉತ್ತಮ ಲಾಭಗಳಿಸಹುದು ಎನ್ನುವುದಕ್ಕೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಪ್ರಗತಿಪರ ರೈತರಾದ ದೇವರಾಜ ರಾಠಿ ತಮ್ಮ ಜಗದಾಳದ ತೋಟದಲ್ಲಿ ನಾಲ್ಕುವರೆ ಎಕರೆ ಭೂ ಪ್ರದೇಶದಲ್ಲಿ ಜವಾರಿ ಮತ್ತು ಸೂಪರ್ ಟೆನ್ ಬದನೆಯನ್ನು ಬೆಳೆದು ಲಕ್ಷಾಂತರ ಲಾಭವನ್ನು ಮಾಡಿಕೊಂಡಿದ್ದಾರೆ.

Advertisement

ಈ ಹಿಂದೆ ಗ್ಯಾಲನ್ ತಳಿ ಬದನೆ, ಗುಲಾಬಿ ಹೂ, ಪಪ್ಪಾಯಿ ಬೆಳೆಗಳನ್ನು ಬೆಳೆದು ಮಾದರಿಯಾಗಿದ್ದ ದೇವರಾಜ ರಾಠಿ ಬದನೆಯಿಂದಲೂ ಸಾಕಷ್ಟು ಲಾಭ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ಧಾರೆ.

ದೇವರಾಜ ತಮ್ಮ ನಾಲ್ಕುವರೆ ಎಕರೆಯಲ್ಲಿ 20 ಗುಂಟೆಯಲ್ಲಿ ಜವಾರಿ ಬದನೆಯ ಬೆಳೆದಿದ್ದು, ದಿನನಿತ್ಯ 15 ಟ್ರೇ ಇಳುವರಿ ಬರುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಟ್ರೇ ಬದನೆಕಾಯಿ ಬೆಲೆ ರೂ. 600 ರಿಂ 700 ಕ್ಕೆ ಮಾರಾಟವಾಗುತ್ತದೆ.

ಇನ್ನೂ ಸೂಪರ್ 10 ತಳಿಯ ಬದನೆಯನ್ನು ನಾಲ್ಕು ಎಕರೆಯಲ್ಲಿ ಬೆಳೆದಿದ್ದು, ದಿನ ನಿತ್ಯ ಒಂದು ಟನ್ ಇಳುವರಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಬದನೆಯನ್ನು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಮಾರುಕಟ್ಟೆಗೆ ಕಳುಹಿಸುತ್ತಾರೆ. ಈ ಬದನೆಗೆ ಮಾರುಕಟ್ಟೆಯಲ್ಲಿ ಒಂದು ಟ್ರೇ ರೂ. 250 ರಿಂದ 300 ಕ್ಕೆ ಮಾರಾಟವಾಗುತ್ತಿದೆ. ಕೆಲವು ಬಾರಿ ಹೆಚ್ಚಿನ ಬೆಲೆಗೂ ಮಾರಾಟವಾಗುತ್ತದೆ.

Advertisement

ಎಪ್ರಿಲ್ ಮೊದಲ ವಾರದಲ್ಲಿ ನಾಟಿ ಮಾಡಿದ್ದು, ಎರಡು ತಿಂಗಳ ನಂತರ ಕಾಯಿ ಬರಲು ಆರಂಭಿಸುತ್ತದೆ. ಈಗ ಒಂದು ತಿಂಗಳಿನಿಂದ ಬದನೆಯನ್ನು ಮಾರುಕಟ್ಟೆಗೆ ಕಳುಹಿಸುತ್ತಿದ್ದೇವೆ. ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಮುಂದಿನ ಐದು ತಿಂಗಳುಗಳ ಕಾಲ ಬದನೆಯನ್ನು ಪಡೆದುಕೊಳ್ಳಬಹುದಾಗಿದೆ.

ನಾಲ್ಕುವರೆ ಎಕರೆ ಪ್ರದೇಶದಲ್ಲಿಯ ಬದನೆಗೆ ರೂ. 1.50 ಲಕ್ಷದಷ್ಟು ಖರ್ಚಾಗಿದೆ. ಸೂಪರ್ 10 ತಳಿಯ ಬದನೆಯ ಸಸಿಯನ್ನು ಜಗದಾಳದ ಪ್ರವಿರಾಮ ಹೈಟೆಕ್ ನರ್ಸರಿಯಿಂದ ರೂ. 1 ಕ್ಕೆ ಒಂದು ಸಸಿಯನ್ನು ಪಡೆದುಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ತೇವಾಂಶದ ವಾತಾವರಣ ನಿರ್ಮಾಣಗೊಂಡರೆ ಇನ್ನಷ್ಟು ಉತ್ತಮ ರೀತಿಯ ಬದನೆಯನ್ನು ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ದೇವರಾಜ ರಾಠಿ.

ಮೂರು ದಶಕಗಳಿಂದ ಕೃಷಿಯಲ್ಲಿ ಹೊಸ ಪ್ರಯೋಗಳನ್ನು ಮಾಡುತ್ತ ವಿಶೇಷ ಸಾಧನೆಯನ್ನು ಮಾಡುತ್ತಿರುವ ದೇವರಾಜ ರಾಠಿ ರಾಜ್ಯದ ಮತ್ತು ಬೇರೆ ರಾಜ್ಯದ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಯೋಜನಾ ಬದ್ಧ, ಶಿಸ್ತು ಬದ್ಧ, ಮಾರುಕಟ್ಟೆಯ ಅಧ್ಯಯನ ಮತ್ತು ಒಂದೇ ಬೆಳೆಗೆ ಅಂಟಿಕೊಳ್ಳದೆ ವೈವಿಧ್ಯಮಯವಾದ ಬೆಳೆಗಳನ್ನು ತಾವು ಬೆಳೆಯುವುದರ ಜೊತೆಗೆ ಸುತ್ತ ಮುತ್ತಲಿನ ರೈತರಿಗೂ ಮಾರ್ಗದರ್ಶನ ಮಾಡುತ್ತ ಬಂದಿರುವ ಇವರ ಸಾಧನೆ ಇತರರಿಗೆ ಮಾದರಿಯಾಗಿದೆ.

ಮಳೆಯ ಕೊರತೆ, ನೀರಿನ ಅಭಾವಾದ ಮಧ್ಯದಲ್ಲಿಯೂ ಮತ್ತು ಬಿಸಿಲಿನ ವಾತಾವರಣದ ಕಾರಣದಿಂದ ನಿರೀಕ್ಷೆ ಮಾಡಿದಷ್ಟು ಬದನೆ ಬೆಳೆಯಲು ಸಾಧ್ಯವಾಗಿಲ್ಲ. ಉತ್ತಮ ರೀತಿಯಲ್ಲಿ ಮಳೆಯಾದರೆ ಮುಂದಿನ ದಿನಗಳಲ್ಲಿ ಪ್ರತಿದಿನ ಎರಡು ಕ್ವಿಂಟಲ್ ಬದನೆಯನ್ನು ಬೆಳೆಯಬಹುದಾಗಿದೆ.
– ದೇವರಾಜ ರಾಠಿ, ಪ್ರಗತಿಪರ ರೈತರು, ಬನಹಟ್ಟಿ

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next