Advertisement

ಸುವರ್ಣ ತ್ರಿಭುಜ ಬೋಟ್ ಮೇಲೆತ್ತಿ

01:32 PM May 22, 2019 | Team Udayavani |

ಕುಮಟಾ: ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಸಮುದ್ರದಾಳದಲ್ಲಿ ಕಾಣಿಸಿದೆ ಎಂದು ಭಾರತೀಯ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದು, ತಕ್ಷಣ ಬೋಟನ್ನು ಮೇಲಕ್ಕೆತ್ತುವ ಕಾರ್ಯ ನಡೆಸಬೇಕೆಂದು ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್‌ ಆಗ್ರಹಿಸಿದರು.

Advertisement

ಮೀನುಗಾರರ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಈ ಬೋಟ್ ಅವಘಡದಲ್ಲಿ ನಾಪತ್ತೆಯಾದ 7 ಮೀನುಗಾರರಲ್ಲಿ ಐವರು ಉತ್ತರ ಕನ್ನಡದವರಾಗಿದ್ದಾರೆ. ಘಟನೆ ನಡೆದು 5 ತಿಂಗಳಾದರೂ ಈ ಬಗ್ಗೆ ಸುಳಿವು ಸಿಕ್ಕಿಲ್ಲ. ಆದರೆ ಈಗ ನೌಕಾಪಡೆ ವಿಷಯ ಪ್ರಸ್ತಾಪಿಸಿದ್ದರೂ ಬೋಟ್ ಮೇಲಕ್ಕೆತ್ತಿಲ್ಲ. 7 ಮೀನುಗಾರರು ಏನಾದರು ಎಂಬ ಸುಳಿವು ದೊರೆತಿಲ್ಲ. ಹೀಗಾಗಿ ಬೋಟ್ ಹಾಗೂ ಮೀನುಗಾರರ ಪತ್ತೆಗೆ ನಾವೆಲ್ಲ ಸೇರಿ ಹೋರಾಟ ಮಾಡುವುದು ಅನಿವಾರ್ಯ ಎಂದರು.

ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, 7 ಮೀನುಗಾರರು ನಾಪತ್ತೆಯಾಗಿರುವುದು ಮೀನುಗಾರ ಸಮಾಜವನ್ನು ಆತಂಕಕ್ಕೆ ಈಡು ಮಾಡಿದೆ. ಕಳೆದ ಮೇ 1 ರಂದು ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಮಾಲ್ವಾಣ ಸಮುದ್ರದ 33 ನಾಟಿಕಲ್ ಮೈಲ್ ದೂರದಲ್ಲಿ ಸುಮಾರು 60 ಮೀ. ಆಳದಲ್ಲಿ ಸುವರ್ಣ ತ್ರಿಭುಜ ಬೋಟ್ ಮುಳುಗಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದು, ಅವರೇ ಮೀನುಗಾರಿಕೆ ಬೋಟ್‌ಗೆ ಡಿಕ್ಕಿ ಹೊಡೆದಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಬೋಟ್ ನಾಪತ್ತೆಯಾದ 4-5 ದಿನದಲ್ಲೇ ತನಿಖಾಧಿಕಾರಿಗಳು ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ನೌಕಾಪಡೆಯ ಐಎನ್‌ಎಸ್‌ ಕೊಚ್ಚಿ ಹಡಗಿನ ತಳಭಾಗಕ್ಕೆ ಹಾನಿಯಾಗಿರುವುದು ಅಂದೇ ಕಂಡು ಬಂದಿತ್ತು. ಆದರೆ ಅಂದು ಸಮುದ್ರದಾಳದಲ್ಲಿ ಮುಳುಗಿದ ಹಡಗು 15 ದಿನ ಹುಡುಕಿದರೂ ಸಿಕ್ಕಿರಲಿಲ್ಲ. ಆದರೆ ಈಗ ಹುಡುಕಿದ 4 ದಿನದಲ್ಲಿ ಬೋಟ್ ಸಿಕ್ಕಿದೆ ಎಂದು ಹೇಳಿಕೆ ನೀಡಿದ್ದಾರೆ. ಬೋಟ್ನ್ನು ಹುಡುಕಿದ ನೌಕಾಪಡೆಯವರು ಬೋಟ್ ಮೇಲಕ್ಕೆತ್ತುವ ಕಾರ್ಯ ಮಾಡದಿರುವುದು ಯಾಕೆ? ಅದರಲ್ಲಿದ್ದ ಮೀನುಗಾರರ ಪತ್ತೆಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದು ಪ್ರಶ್ನೆಯಾಗಿದೆ. ತಕ್ಷಣ ಬೋಟ್ ಮೇಲಕ್ಕೆತ್ತಬೇಕು ಹಾಗೂ ಮೀನುಗಾರರ ಸುಳಿವು ನೀಡುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.

ಮೀನುಗಾರರ ಸಂಘದ ಮುಖಂಡ ಟಿ.ಬಿ. ಹರಿಕಾಂತ ಪ್ರಾಸ್ತಾವಿಕ ಮಾತನಾಡಿ, ಎಲ್ಲಾ ಮೀನುಗಾರ ಮುಖಂಡರೂ ಸಹಿತ ಪಕ್ಷಬೇಧ ಮರೆತು ಒಗ್ಗಟ್ಟಾಗಬೇಕಿದೆ. ಸಮಾಜದ ವಿಷಯ ಬಂದಾಗ ತಮ್ಮ ತಮ್ಮ ಪಕ್ಷವನ್ನು ಬದಿಗಿಟ್ಟು ಮೀನುಗಾರರಿಗೆ ನ್ಯಾಯ ಕೊಡಿಸುವುದು ತಮ್ಮೆಲ್ಲರ ಕರ್ತವ್ಯ. ಮೀನುಗಾರರ ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ಈ ಚಿಂತನಾ ಸಭೆ ಹಮ್ಮಿಕೊಂಡಿದ್ದು, ಇದರ ನಿರ್ಣಯದಂತೆ ಮುನ್ನೆಡೆಯಲಾಗುವುದು ಎಂದರು.

ಮುಖಂಡರಾದ ಸದಾನಂದ ಹರಿಕಂತ್ರ, ಗಣೇಶ ಅಂಬಿಗ, ಬಾಬು ಕುಬಾಲ, ಉಮೇಶ ಖಾರ್ವಿ, ಜಗದೀಶ ಹರಿಕಂತ್ರ, ನಾಗರಾಜ ಹರಿಕಂತ್ರ, ಅಶೋಕ ಕಾಸರಕೋಡ, ಸುಧಾಕರ ತಾರಿ, ಶಾಂತಾರಾಮ ಹರಿಕಂತ್ರ ಹಾಗೂ ಇತರರು ಮಾತನಾಡಿದರು. ಅನಿತಾ ಮಾಪಾರಿ, ಶಿವರಾಮ ಹರಿಕಾಂತ ಸೇರಿದಂತೆ ಹಲವಾರು ಮೀನುಗಾರರು ಹಾಜರಿದ್ದರು.

ಸಭೆ ನಿರ್ಣಯಗಳು:

ನಾಪತ್ತೆಯಾಗಿರುವ ಜಿಲ್ಲೆಯ ಐವರು ಮೀನುಗಾರರು ಹಾಗೂ ಉಡುಪಿಯ ಇಬ್ಬರು ಮೀನುಗಾರರನ್ನು ಹುಡುಕಿಕೊಡಬೇಕು.
ಸುವರ್ಣ ತ್ರಿಭುಜ ಬೋಟ್ ಮುಳುಗಲು ಕಾರಣ ತಿಳಿಸಬೇಕು.
ಸುವರ್ಣ ತ್ರಿಭುಜ ಹಡಗಿಗೆ ನೌಕಾಪಡೆಯ ಬೋಟ್ ಡಿಕ್ಕಿ ಹೊಡೆಯಿತೇ ಅಥವಾ ವಾಣಿಜ್ಯ ಹಡಗು ಡಿಕ್ಕಿ ಹೊಡೆಯಿತೇ ಎಂಬುದನ್ನು ತಿಳಿಸಬೇಕು. ಮೀನುಗಾರರು ಕಾಣಯಾಗಿದ್ದು ಹೇಗೆಂದು ತಿಳಿಯಬೇಕು.
ರಾಜ್ಯ ಸರಕಾರ ಈಗಾಗಲೇ ಪರಿಹಾರ ಘೋಷಿಸಿದ್ದು, ಕೇಂದ್ರ ಸರಕಾರವೂ ಪರಿಹಾರ ಘೊಷಿಸಬೇಕು.
ಮುಳುಗಿರುವ ಬೋಟ್ನ್ನು ಶೀಘ್ರ ಮೇಲಕ್ಕೆತ್ತಬೇಕು. ಇಲ್ಲವೇ ಬೋಟ್ ಮೇಲಕ್ಕೆತ್ತಲು ಮೀನುಗಾರರಿಗೆ ಅವಕಾಶ ನೀಡಿಬೇಕು. ಮಳೆಗಾಲ ಪೂರ್ವದಲ್ಲಿ ಬೋಟ್ ಮೇಲಕ್ಕೆತ್ತುವ ಕಾರ್ಯ ನಡೆಯಬೇಕು. ಬೋಟ್ ದುರಂತಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಮೀನುಗಾರರು ಮೃತರಾದರೆಂದು ಘೋಷಣೆ ಮಾಡಿದ್ದಲ್ಲಿ ಅಲ್ಲದೇ ಬೋಟ್ ಮುಳುಗಲು ನೌಕಾಪಡೆಯೇ ಕಾರಣವೆಂದು ಖಾತ್ರಿಯಾದರೆ ಆ ಕುಟುಂಬದವರಿಗೆ ನೌಕಾನೆಲೆಯಲ್ಲಿ ಅನುಕಂಪದ ಉದ್ಯೋಗ ನೀಡಬೇಕು.
ಮೃತ ಭಟ್ಕಳದ ಚಂದ್ರಶೇಖರ ಮೊಗೇರ ಕುಟುಂಬಕ್ಕೂ ಸರಕಾರ ಪರಿಹಾರ ಒದಗಿಸಬೇಕು. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಎಲ್ಲಾ ವಿಷಯವನ್ನು ಪ್ರಸ್ತಾಪಿಸಿ ನ್ಯಾಯಕ್ಕಾಗಿ ಬೇಡಿಕೆ ಇಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
Advertisement
Advertisement

Udayavani is now on Telegram. Click here to join our channel and stay updated with the latest news.

Next