ಮೈಸೂರು: ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳನ್ನು ಬಾಲ್ಯ, ಶಾಲಾ ಹಂತ ಹಾಗೂ ಪ್ರೌಢಾವಸ್ಥೆಯ ಮೂರು ಹಂತಗಳಲ್ಲಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದು ಬೆಂಗಳೂರಿನ ಕಾಂಮಿಲ್ ಸಂಸ್ಥೆ ನಿರ್ದೇಶಕಿ ಡಾ. ಪ್ರತಿಭಾ ಕಾರಂತ್ ಹೇಳಿದರು.
ಮೈಸೂರಿನ ಅಖೀಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಷ್)ನಲ್ಲಿ ಗುರುವಾರ ನಡೆದ “ಆಟಿಸಂ ನ್ಯೂನ್ಯತೆಯಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವಾಗ ಹಾದು ಹೋಗಬೇಕಾದ ಮಿತಿಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮಕ್ಕಳಲ್ಲಿರುವ ಆಟಿಸಂ ಸಮಸ್ಯೆಯನ್ನು ಕಿರಿಯ ವಯಸ್ಸಿನಲ್ಲೇ ಗುರುತಿಸುವ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಅಲ್ಲದೇ, ಬಹುತೇಕ ಪೋಷಕರು ತಮ್ಮ ಮಕ್ಕಳು ಆಟಿಸಂ ಸಮಸ್ಯೆ ಹೊಂದಿದ್ದಾರೆ ಎಂಬುದನ್ನು ಒಪ್ಪುವುದಿಲ್ಲ ಹಾಗೂ ಇಂತಹ ಮಕ್ಕಳಿಗೆ ಆರಂಭಿಕ ಹಂತದಲ್ಲೇ ನೀಡಬೇಕಾದ ಅಗತ್ಯ ತರಬೇತಿಗಳನ್ನು ನೀಡುವುದಿಲ್ಲ. ಜತೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದರಿಂದ ಮಕ್ಕಳಲ್ಲಿರುವ ಆಟಿಸಂ ಸಮಸ್ಯೆಯನ್ನು ಕಡಿಮೆ ಅವಧಿಯಲ್ಲೇ ಗುಣಪಡಿಸಬಹುದು ಎಂಬುದು ಅನೇಕ ಪೋಷಕರ ಗ್ರಹಿಕೆ ಎಂದರು.
ತಪ್ಪು ಕಲ್ಪನೆ: ಆಟಿಸಂ ಬಗ್ಗೆ ಮಾಹಿತಿ ಕೊರತೆಯಿಂದ ಸಾಮಾನ್ಯ ಮಕ್ಕಳನ್ನು ಪೋಷಕರು ಕಲಿಕೆಯ ಸಂದರ್ಭದಲ್ಲಿ ಆಟಿಸಂ ಸಮಸ್ಯೆ ಇರುವ ಮಕ್ಕಳೊಂದಿಗೆ ಬೆರೆಯಲು ಬಿಡುವುದಿಲ್ಲ. ಆದರೆ ಈ ಕಲ್ಪನೆ ತಪ್ಪಾಗಿದ್ದು, ಹೀಗಾಗಿ ಆಟಿಸಂ ವಿಷಯದಲ್ಲಿ ಸಾಮಾನ್ಯ ಮಕ್ಕಳ ಪೋಷಕರು ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು.
ಬಹುತೇಕ ಶಾಲೆಗಳು ಆಟಿಸಂ ಸಮಸ್ಯೆಯ ಮಕ್ಕಳ ಅಗತ್ಯ ಪೂರೈಸಲು ಬೇಕಿರುವ ಸೌಲಭ್ಯ, ಪರಿಸರವನ್ನು ಹೊಂದಿರುವುದಿಲ್ಲ. ಇನ್ನೂ ಕೆಲವು ಶಾಲೆಗಳ ಆಡಳಿತ ಮಂಡಳಿ ತಮ್ಮ ಶಾಲೆಯ ಶಿಕ್ಷಕರಿಗೆ ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ಕಲಿಕೆಗೆ ಪ್ರೋತ್ಸಾಹವನ್ನೇ ನೀಡುವುದಿಲ್ಲ ಎಂದು ಹೇಳಿದರು.
ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಆಟಿಸಂ ಸಮಸ್ಯೆಯಿರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದರು. ಆಯುಷ್ ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ.ಎಂ.ಪುಷ್ಪಾವತಿ, ಪ್ರೊ. ಆಶಾ ಇದ್ದರು.