Advertisement

ಮಕ್ಕಳನ್ನು ಶಾಲೆಗೆ ಕರೆ ತನ್ನಿ

11:17 AM Sep 06, 2019 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹದಿಂದ ಅನೇಕ ಕುಟುಂಬಗಳು ಮನೆ ಕಳೆದುಕೊಳ್ಳುವುದರ ಜತೆಗೆ ವಿದ್ಯಾರ್ಥಿಗಳು ಕಲಿಕಾ ಸಾಮಗ್ರಿಗಳಿಲ್ಲದೇ ಶಾಲೆಗೆ ಬರಲಾರದಂಥ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಕ್ಕಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ಜತೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ವಿಶೇಷ ಆದ್ಯತೆ ನೀಡಬೇಕು ಎಂದು ಮಕ್ಕಳ ರಕ್ಷಣಾ ಆಯೋಗ ಅಧ್ಯಕ್ಷ ಡಾ| ಅಂತೋಣಿ ಸೆಬಾಸ್ಟಿಯನ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದಾಗಿ ಮಕ್ಕಳ ಆರೋಗ್ಯ, ಶೈಕ್ಷಣಿಕ ಸ್ಥಿತಿಗತಿ ಪರಿಶೀಲಿಸಿ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಎಸ್ಸೆಸ್ಸೆಲ್ಸಿ ಬಳಿಕ ಮಕ್ಕಳು ಏನು ಮಾಡುತ್ತಿದ್ದಾರೆ. ಶಿಕ್ಷಣ ಬಿಟ್ಟು ದುಡಿಮೆಗೆ ಹೋಗುತ್ತಿದ್ದಾರೆಯೇ ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಹಿತರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸಬೇಕು ಎಂದು ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಶಾಲಾ ಕಟ್ಟಡಗಳ ಹಾನಿ, ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ನಿರಂತರ ಪರಿಶೀಲನೆ ನಡೆಸಬೇಕು. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ಕೊರತೆ ಇರುವುದರಿಂದ ಶೀಘ್ರ ನೀಡುವ ವ್ಯವಸ್ಥೆ ಮಾಡಬೇಕು. ಕೆಲವರು ತಮ್ಮ ಜನ್ಮದಿನ ಆಚರಣೆ ವೇಳೆ ನಿರಾಶ್ರಿತರಿಗೆ ಪರಿಕರಗಳನ್ನು, ಮಕ್ಕಳಿಗೆ ಶಾಲಾ ಸಾಮಗ್ರಿಗಳ ಕಿಟ್‌ಗಳನ್ನು ಕೊಟ್ಟು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದರಿಂದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದ್ದು, ಇಂತಹ ಸನ್ನಿವೇಶಗಳಿಗೆ ಅವಕಾಶ ನೀಡಬಾರದು ಎಂದು ಡಾ| ಸೆಬಾಸ್ಟಿಯನ್‌ ತಿಳಿಸಿದರು.

ಪ್ರವಾಹದಿಂದ ಚಿಕ್ಕೋಡಿ ಮತ್ತು ಗೋಕಾಕ ತಾಲೂಕಿನ ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ತೊಂದರೆ ಆಗಿದ್ದು, ಈ ತಾಲೂಕಿನ ಮಕ್ಕಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮತ್ತು ಸ್ವಚ್ಛತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಭಾರತಿ ಶೆಟ್ಟರ ಮಾತನಾಡಿ, ಬಾಲ್ಯವಿವಾಹ ತಡೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ವಿವರಿಸಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್‌.ವಿ. ಮುನ್ಯಾಳ ಮಾತನಾಡಿ, ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಹೋಬಳಿವಾರು ಕಾರ್ಯಪಡೆಗಳನ್ನು ರಚಿಸಿಕೊಂಡು ವೈದ್ಯಕೀಯ ಸೇವೆ ಸಲ್ಲಿಸಲಾಗಿದೆ. ಪ್ರತಿ ಪರಿಹಾರ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯ ಮತ್ತು ಔಷಧ ಸಾಮಗ್ರಿಗಳನ್ನು ಒದಗಿಸಲಾಗಿತ್ತು. ಪ್ರವಾಹ ಪೀಡಿತ ಪ್ರತಿ ಗ್ರಾಮ ಹಾಗೂ ಪರಿಹಾರ ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶಾಲಾ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿರುವ ಕಡೆ ಖಾಸಗಿ ಕಟ್ಟಡ ಮತ್ತು ಸಮುದಾಯ ಭವನಗಳನ್ನು ಬಾಡಿಗೆ ಪಡೆದು ಶಾಲೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 900 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು, ನೆರೆ ಪೀಡಿತ ಜನರಿಗೆ ಸ್ಥಳೀಯ ಕಲ್ಯಾಣ ಮಂಟಪ ಮಂದಿರಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟದ ಊಟ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು.

205 ಅಂಗನವಾಡಿ ಕಟ್ಟಡಗಳು ಸಂಪೂರ್ಣ ನಾಶವಾಗಿವೆ. 705 ಅಂಗನವಾಡಿ ಕೇಂದ್ರಗಳು ಸಣ್ಣ ಮತ್ತು ದೊಡ್ಡ ಪ್ರಮಾಣದಲ್ಲಿ ದುರಸ್ತಿಗೊಂಡಿದ್ದು, ಎಲ್ಲ ಕಡೆ ತಾತ್ಕಾಲಿಕ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಚಿಕ್ಕೋಡಿ ಮತ್ತು ರಾಯಬಾಗ ತಾಲೂಕಿನಲ್ಲಿ ಪ್ರವಾಹದಿಂದ ಬಾಧಿತಗೊಂಡಿರುವ ಮಕ್ಕಳನ್ನು ಭೇಟಿ ಮಾಡಿದ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಅಹವಾಲು ಆಲಿಸಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಭಾರತಿ ವಾಳ್ವೇಕರ, ಅಶೋಕ ಯರಗಟ್ಟಿ, ಆನಂದ ಲೋಬೋ, ಭಾರತಿ ಶೆಟ್ಟರ್‌, ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ ಸದಸ್ಯರು, ಸರ್ಕಾರಿ, ಸರ್ಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next