Advertisement

“ಮಕ್ಕಳಿಗೆ ವಿದ್ಯೆ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ತನ್ನಿ’

12:13 PM Feb 02, 2017 | Team Udayavani |

ಮೈಸೂರು: ಶಿಕ್ಷಣವೇ ಪ್ರಗತಿಗೆ ಮೂಲ. ಹೀಗಾಗಿ ಆದಿವಾಸಿಗಳು ಸರ್ಕಾರದ ಸವಲತ್ತು ಬಳಸಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.  ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಆದಿವಾಸಿ ಫ‌ಲಾನುಭವಿಗಳಿಗೆ ಸೌಲಭ್ಯ ವಿತರಣಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 

Advertisement

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಶಕ್ತಿ ಬರದಿದ್ದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲಾಗುವುದಿಲ್ಲ. ಹೀಗಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲಿದೆ. ಶಿಕ್ಷಣವಿಲ್ಲದೆ ಸ್ವಾಭಿಮಾನಿಯಾಗಲು, ಆತ್ಮಸ್ಥೈರ್ಯ ಬರಲು ಸಾಧ್ಯವಿಲ್ಲ. ಅರಣ್ಯದ ಮೇಲೆ ಅವಲಂಬಿತರಾಗಿ ಬದುಕುತ್ತಿದ್ದರಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಆದಿವಾಸಿಗಳು ಹಿಂದುಳಿದಿದ್ದಾರೆ ಎಂದರು. 

ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಶತ ಶತಮಾನಗಳಿಂದ ಶಿಕ್ಷಣ ವಂಚಿತರಾದ ಈ ಜನರಲ್ಲಿ ಸ್ವಾತಂತ್ರಾ ನಂತರವು ಶಿಕ್ಷಣದ ಮಟ್ಟ ಕಡಿಮೆ ಇದೆ. ಹೀಗಾಗಿ ಆದಿವಾಸಿಗಳ ಶಿಕ್ಷಣಕ್ಕೆ ಒತ್ತು ನೀಡುವ ಸಂಬಂಧ ಗಿರಿಜನ ಆಶ್ರಮ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಆಶ್ರಮ ಶಾಲೆಗಳಲ್ಲಿ ಪಿಯುಸಿ ವರೆಗೆ ಶಿಕ್ಷಣ ದೊರಕಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.  

ಅರಣ್ಯ ಉತ್ಪನ್ನಗಳ ಮೇಲೆ ಆದಿವಾಸಿಗಳ ಜೀವನ ಅವಲಂಬಿಸಿರುವುದರಿಂದ ಟಿಎಸ್‌ಪಿ ಹಣದಲ್ಲಿ ಈ ವರ್ಗದ ಜನರಿಗೆ ಶಿಕ್ಷಣ, ಭೂಮಿ, ಅರಣ್ಯ ಹಕ್ಕು, ಉದ್ಯೋಗ ನೀಡುವ ಕಾರ್ಯಕ್ರಮಗಳನ್ನು ರೂಪಿಸಲು ಹೆಚ್ಚು  ಒತ್ತು ನೀಡುವಂತೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರಿಗೆ ಸೂಚಿಸಿರುವುದಾಗಿ ಹೇಳಿದರು.ೇನು ಕುರುಬ ಮತ್ತು ಕೊರಗರಿಗೆ ನಮ್ಮ ಸರ್ಕಾರ ನಿರುದ್ಯೋಗ ಜೀವನ ಭತ್ಯೆ ನೀಡುತ್ತಿದೆ ಎಂದ ಅವರು, ಆದಿವಾಸಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಹಾಗೂ ಆದಿವಾಸಿಗಳನ್ನು ವಿಧಾನಪರಿಷತ್‌ ಸದಸ್ಯರನ್ನಾಗಿಸುವ ಬೇಡಿಕೆಗೆ ಪರಿಶೀಲಿಸುವ ಭರವಸೆ ನೀಡಿದರು. 

ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಮಾತನಾಡಿ, ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಜೇನು ಕುರುಬ, ಕಾಡು ಕುರುಬ, ಸೋಲಿಗ, ಯರವ, ಕೊರಗ, ಮಲೆ ಕುಡಿಯ, ಸಿದ್ಧಿ, ಗೌಡಲು, ಹಸಲರು ಜನಾಂದವರಿಗೆ ಮಳೆಗಾಲದಲ್ಲಿ 6 ತಿಂಗಳ ಕಾಲ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮ ಜಾರಿಗೆ ತರಲಾಗಿದ್ದು, ಇದೀಗ ಈ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲೆಗೂ ವಿಸ್ತರಿಸಲಾಗಿದೆ. 

Advertisement

ಇದರಿಂದ ಯೋಜನೆಯಡಿ 41,071 ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ ಎಂದರು.ಅರಣ್ಯ ಹಕ್ಕು ಕಾಯ್ದೆಯಡಿ ಅನುಭವದಲ್ಲಿರುವವರಿಗೆ ಭೂಮಿಯ ಹಕ್ಕುಪತ್ರ ನೀಡಲಾಗುತ್ತಿದೆ ಎಂದ ಅವರು, ಕಾμ ಪ್ಲಾಂಟರ್‌ಗಳು ನೂರಾರು ಎಕರೆ ಅರಣ್ಯ ಒತ್ತುವರಿ ಮಾಡಿಕೊಂಡಿರುವಾಗ ಗಿರಿಜನರು ಅರಣ್ಯ ಒತ್ತುವರಿ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ತೊಂದರೆ ನೀಡುವುದು ಸರಿಯಲ್ಲ. 

ಆದಿವಾಸಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಯವರು ಗಿರಿಜನ ಹಾಡಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ  ನಡೆಸುವ ವಿಶ್ವಾಸವಿದೆ ಎಂದು ಹೇಳಿದರು. ಅರಣ್ಯ ಸಚಿವ ಬಿ.ರಮಾನಾಥ ರೈ ಮಾತನಾಡಿ, 2005ರ ಪೂರ್ವದಿಂದ ಅರಣ್ಯವಾಸಿಗಳಾಗಿರುವವರಿಗೆ ಹಂತ  ಹಂತವಾಗಿ ಅರಣ್ಯಭೂಮಿ ಹಕ್ಕುಪತ್ರನೀಡುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ಸಚಿವರಾದ ಎಚ್‌.ಸಿ.ಮಹದೇವಪ್ಪ, ತನ್ವೀರ್‌, ಶಾಸಕರಾದ ಎಚ್‌ .ಪಿ.ಮಂಜುನಾಥ್‌, ಎಸ್‌.ಚಿಕ್ಕಮಾದು, ವಿಧಾನಪರಿಷತ್‌ ಸದಸ್ಯ ಎಚ್‌. ಎಂ.ರೇವಣ್ಣ, ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌ ಮೊದಲಾದವರು ಹಾಜರಿದ್ದರು. ಶಾಸಕ ಎಂ.ಕೆ. ಸೋಮಶೇಖರ್‌ ಅಧ್ಯಕ್ಷತೆವಹಿಸಿದ್ದರು. ಇದೇ ವೇಳೆ ಆದಿವಾಸಿ ಫ‌ಲಾನುಭವಿಗಳಿಗೆ ಪೌಷ್ಟಿಕ ಆಹಾರ ಪದಾರ್ಥ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಇದಕ್ಕೂ ಮುನ್ನ ರಾಜ್ಯದ ಏಳು ಜಿಲ್ಲೆಗಳಿಂದ ಬಂದಿದ್ದ ಆದಿವಾಸಿಗಳು ತಮ್ಮ ಸಾಂಪ್ರದಾಯಿಕ ಕಲೆಯನ್ನು ಪ್ರದರ್ಶಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next