ಕೆಲವು ಸಿನಿಮಾಗಳ ಟೀಸರ್, ಟ್ರೇಲರ್ ನೋಡಿದ ಕೂಡಲೇ ಆ ಸಿನಿಮಾ ಮೇಲೊಂದು ಭರವಸೆ ಮೂಡುತ್ತದೆ. ಈ ಸಿನಿಮಾದೊಳಗೊಂದು ಕಂಟೆಂಟ್ ಇದೆ ಎಂಬ ಫೀಲ್ ಬರದೇ ಇರದು. ಸದ್ಯ ಆ ತರಹದ ಒಂದು ಭರವಸೆ ಮೂಡಿಸಿರುವ ಸಿನಿಮಾ “ಜೂಲಿಯೆಟ್-2′. ಇದು ಸಂಪೂರ್ಣ ಹೊಸಬರ ಚಿತ್ರ.
ಕರಾವಳಿ ಮೂಲದ ವಿರಾಟ್ ಈ ಚಿತ್ರದ ನಿರ್ದೇಶಕರು. ಲಿಖಿತ್.ಆರ್.ಕೋಟ್ಯಾನ್ ನಿರ್ಮಾಣದ ಈ ಚಿತ್ರದಲ್ಲಿ “ಪ್ರೇಮಂ ಪೂಜ್ಯಂ’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬೃಂದಾ ಆಚಾರ್ಯ “ಜ್ಯೂಲಿಯೆಟ್-2′ ಚಿತ್ರದಲ್ಲಿ ಜೂಲಿಯೆಟ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಫೆ.24ರಂದು ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡು, ಟ್ರೇಲರ್ ಹಿಟ್‌ಆಗಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿರಾಟ್, “ಇದು ನಾಯಕಿ ಪ್ರಧಾನ ಚಿತ್ರ. ಚಿಕ್ಕ ವಯಸ್ಸಿನಲ್ಲಿ ತನಗಾದ ಅನ್ಯಾಯಕ್ಕೆ ದೊಡ್ಡವಳಾದ ನಂತರ ಆಕೆ ಹೇಗೆ ಸೇಡುತೀರಿಸಿಕೊಳ್ಳುತ್ತಾಳೆ ಎಂಬ ಅಂಶದೊಂದಿಗ ಚಿತ್ರ ಸಾಗುತ್ತದೆ. ಇಡೀ ಸಿನಿಮಾ ಕಾಡಿನ ನಡುವಿನ ಒಂಟಿ ಮನೆಯಲ್ಲಿ ಹಾಗೂ ರಾತ್ರಿ ಹೊತ್ತಲ್ಲೇ ನಡೆಯುತ್ತದೆ. ಬೆಳ್ತಂಗಡಿ ಬಳಿಯ ಕಾಜೂರು ಎಂಬ ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ತಂದೆ-ಮಗಳ ಬಾಂಧವ್ಯ ಕೂಡಾ ಇದೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ.
ಅಂದಹಾಗೆ, ಇದು ಕ್ರೈಮ್ ಥ್ರಿಲ್ಲರ್ ಜಾನರ್‌ನ ಚಿತ್ರ. ನಾಯಕಿ ಬೃಂದಾ ಆಚಾರ್ಯ ಕೂಡಾ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ತಾನು ಆ್ಯಕ್ಷನ್ ಸಿನಿಮಾ ಮಾಡುತ್ತೇನೆ ಎಂದು ಕನಸಲ್ಲೂ ಭಾವಿಸಿರದ ಬೃಂದಾ ಈ ಚಿತ್ರದಲ್ಲಿ ಆ್ಯಕ್ಷನ್ ಲೇಡಿಯಾಗಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ಕೂಡಾ ಕಲಿತರಂತೆ. ಇಡೀ ತಂಡದ ಬಗ್ಗೆ ಬೃಂದಾ ಮೆಚ್ಚುಗೆಯ ಮಾತುಗಳನ್ನಾಡಿದರು. ಉಳಿದಂತೆ ಚಿತ್ರದಲ್ಲಿ ನಟಿಸಿದ ರಾಯ್, ಅನೂಪ್ ಸಾಗರ್ ಕೂಡಾ ಅನುಭವ ಹಂಚಿಕೊಂಡರು. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.