Advertisement
ಪಕ್ಷದಲ್ಲಿ ಗೊಂದಲಗಳಿದ್ದರೆ ಅವುಗಳನ್ನು ಬಗೆಹರಿಸುವ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯುತ್ತದೆ. ಆದರೆ, ಕಾರ್ಯಕಾರಿಣಿಯಲ್ಲಿ ಈ ಕುರಿತು ಚರ್ಚಿಸುವ ಬದಲು ಬ್ರಿಗೇಡ್‌ನಲ್ಲಿ ಭಾಗವಹಿಸುವವರ ವಿರುದ್ಧ ಕ್ರಮಕ್ಕೆ ಯಡಿಯೂರಪ್ಪ ಬಣದವರು ಆಗ್ರಹಿಸಿದ್ದು, ಅದರಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆದಿಯಾಗಿ ಅವರ ಬೆಂಬಲಿಗರು ಮತ್ತು ಬ್ರಿಗೇಡ್‌ನಲ್ಲಿರುವ ಬಿಜೆಪಿಯವರನ್ನು ಕೆರಳಿಸಿದೆ.
Related Articles
ರಾಜ್ಯ ಕಾರ್ಯಕಾರಿಣಿಯಲ್ಲಿ ಹಾಜರಿದ್ದ ಬಹುತೇಕ ಮಂದಿ ಈಶ್ವರಪ್ಪ ಮತ್ತು ಬ್ರಿಗೇಡ್ ವಿರುದ್ಧವಿದ್ದರೂ ಪಕ್ಷ ಸಂಘಟನೆ, ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಯಡಿಯೂರಪ್ಪ ಅವರ ಏಕಪಕ್ಷೀಯ ನಿರ್ಧಾರಗಳಿಂದ ಅಸಮಾಧಾನಗೊಂಡಿದ್ದು, ಈಶ್ವರಪ್ಪ ಅವರಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ. ಬ್ರಿಗೇಡ್ ವಿಚಾರದಲ್ಲಿ ನೀವು ಮುಂದುವರಿಯಿರಿ. ನಿಮ್ಮ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದು, ಕಾರ್ಯಕಾರಣಿ ಬಳಿಕವೂ ಈ ಮಾತನ್ನು ಪುನರುತ್ಛರಿಸಿದ್ದಾರೆ ಎನ್ನಲಾಗಿದೆ. ಇದು ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿರುವ ಈಶ್ವರಪ್ಪ ಅವರಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ.
Advertisement
ಈ ಇಬ್ಬರೂ ಮುಖಂಡರ ಮಾತುಗಳು ಮತ್ತು ಕಾರ್ಯಕಾರಿಣಿಯಲ್ಲಿ ನಡೆದ ಬೆಳವಣಿಗೆಗಳು ಪಕ್ಷದಲ್ಲಿ ಈಗಾಗಲೇ ಉದ್ಭವವಾಗಿರುವ ಎರಡು ಗುಂಪುಗಳನ್ನು ಮತ್ತಷ್ಟು ದೂರವಾಗುವಂತೆ ಮಾಡುವುದು ಖಂಡಿತ ಎಂದು ಮೂಲ ಬಿಜೆಪಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕಾರಿಣಿಯಲ್ಲಿ ಗೊಂದಲದ ಬಗ್ಗೆ ಚರ್ಚಿಸಿ ಅದನ್ನು ತಿಳಿಗೊಳಿಸುವ ಪ್ರಯತ್ನ ಮಾಡಬೇಕಿತ್ತು. ಆದರೆ, ನೇರವಾಗಿ ಬ್ರಿಗೇಡ್‌ನಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರಿಂದ ಗುಂಪುಗಾರಿಕೆ ಹೆಚ್ಚಾಗುವಂತಾಗಿದೆ ಎಂಬುದು ಅವರ ಅಭಿಮತ.
ವರಿಷ್ಠರಿಗೆ ವರದಿ ನೀಡಲು ಮುರಳೀಧರ ರಾವ್ ನಿರ್ಧಾರ:ಬ್ರಿಗೇಡ್ ವಿಚಾರದಲ್ಲಿ ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಈ ಕುರಿತು ಆದ ಬೆಳವಣಿಗೆಗಳ ಕುರಿತು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರು ಪಕ್ಷದ ಹೈಕಮಾಂಡ್‌ಗೆ ವರದಿ ನೀಡಲು ತೀರ್ಮಾನಿಸಿದ್ದಾರೆ. ಬ್ರಿಗೇಡ್ ಗೊಂದಲ ಕುರಿತಂತೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಎರಡೂ ಕಡೆಯವರ ಬೆಂಬಲಿಗರಿಂದಲೂ ವಿವರ ಸಂಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ವಿವಾದ ರಾಜ್ಯಮಟ್ಟದ ನಾಯಕರ ನಡುವೆ ಇತ್ಯರ್ಥವಾಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ಈ ಬೆಳವಣಿಗೆಗಳ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಆದರೆ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೊಡಗಿಕೊಂಡಿರುವ ಪಕ್ಷದ ವರಿಷ್ಠರು ಸದ್ಯಕ್ಕೆ ರಾಜ್ಯದ ಭಿನ್ನಾಭಿಪ್ರಾಯದ ಬಗ್ಗೆ ಗಮನ ಹರಿಸುವ ಸ್ಥಿತಿಯಲ್ಲಿಲ್ಲ. ಆ ಚುನಾವಣೆ ಮುಗಿದ ಬಳಿಕವೇ ಭಿನ್ನಮತ ಶಮನಕ್ಕೆ ಪ್ರಯತ್ನಿಸಲಿದ್ದು, ಅದುವರೆಗೆ ಗೊಂದಲ ಇದೇ ರೀತಿ ಮುಂದುವರಿಯಲಿದೆ ಎಂದು ಹೇಳಲಾಗಿದೆ. – ಪ್ರದೀಪ್ ಕುಮಾರ್ ಎಂ.