Advertisement

ಮಳೆ ನಿಂತ್ರೂ ಸೇತುವೆ ನೀರು ನಿಲ್ಲಲ್ಲ!

12:52 AM Aug 16, 2019 | Lakshmi GovindaRaj |

ಬೆಂಗಳೂರು: ಸಂಚಾರ ದಟ್ಟಣೆ ನಿವಾರಣೆಗೆ ಬಿಡಿಎ, ಬಿಬಿಎಂಪಿ, ರೈಲ್ವೆ ಇಲಾಖೆ ಜತೆಗೂಡಿ ನಗರದ ಹಲವೆಡೆ ಮೇಲ್ಸೇತುವೆಗಳನ್ನು ನಿರ್ಮಿಸಿದ್ದು, ಸೂಕ್ತ ನಿರ್ವಹಣೆ ಇಲ್ಲದೇ ಈಗ ನೀರು ಸೋರುತ್ತಿದೆ! ಮೇಲ್ಸೇತುವೆಯಲ್ಲಿ ಸಂಗ್ರಹವಾಗುವ ನೀರು ಸರಾಗವಾಗಿ ಹರಿಯಲು ಅಳವಡಿಸಲಾಗಿದ್ದ ಪೈಪ್‌ಗ್ಳು ಒಡೆದಿದ್ದು, ಸಿಮೆಂಟ್‌ ಬಿರುಕು ಬಿಟ್ಟಿದೆ. ಮಳೆನೀರು ಹೋಗಬೇಕಾದ ಮಾರ್ಗದಲ್ಲಿ ಹೂಳು ತುಂಬಿದ್ದು, ಸೇತುವೆಯಿಂದ ನೀರು ಸೋರುತ್ತಿದೆ.

Advertisement

ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಕಿರಿ ಕಿರಿ ಉಂಟಾಗುತ್ತಿದ್ದು, ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. 2003ರಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ರಿಚ್ಮಂಡ್‌ ವೃತ್ತದ ಬಳಿ ಮೇಲ್ಸೇತುವೆ ನಿರ್ಮಾಣವಾಗಿದ್ದು, 2016ರಲ್ಲಿ ಪಾಲಿಕೆ 1.53 ಕೋಟಿ ರೂ. ವೆಚ್ಚದಲ್ಲಿ ಅದರ ರಿಪೇರಿ ಮಾಡಿದೆ. ಆದರೆ, ಪ್ರಸ್ತುತ ನೀರು ಹರಿಯುವ ಪೈಪ್‌ಗ್ಳು ಒಡೆದಿದ್ದು, ಸಿಮೆಂಟ್‌ ಬಿರುಕು ಬಿಟ್ಟಿದೆ. ಸೇತುವೆ ಕೆಳ ಭಾಗದಲ್ಲಿ ಸಂಚರಿಸುವ ಬೈಕ್‌ ಸವಾರರು ಮಳೆ ನಿಂತರೂ ನೆನೆಯಬೇಕಿದೆ.

ನಾಯಂಡಹಳ್ಳಿ ಮೇಲ್ಸೇತುವೆಯನ್ನು ಬಿಡಿಎ 2010ರಲ್ಲಿ ನಿರ್ಮಿಸಿದ್ದು, 900 ಮೀ. ಉದ್ದವಿದೆ. ಒಟ್ಟು 86.75 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಪ್ರಸ್ತುತ ಈ ಸೇತುವೆ ನಿರ್ವಹಣೆ ಹೊಣೆ ಬಿಬಿಎಂಪಿ ಮೇಲಿದೆ. ನೀರು ಹೋಗುವ ಪೈಪ್‌ಗ್ಳಲ್ಲಿ ಹೂಳು ತುಂಬಿರುವ ಪರಿಣಾಮ, ಮಳೆ ನೀರು ಸೇತುವೆ ಮೇಲೆಯೇ ಸಂಗ್ರಹವಾಗಿ, ನಾಯಂಡಹಳ್ಳಿ ಜಂಕ್ಷನ್‌ ಬಳಿ ಭಾರೀ ಪ್ರಮಾಣದ ನೀರು ಸೇತುವೆ ಮೇಲಿಂದ ಸುರಿಯುತ್ತಿದೆ.

ನೀರು ಬೀಳುವ ಸ್ಥಳದಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ಅಪಘಾತ ಸಂಭವಿಸುವ ಆತಂಕದಲ್ಲಿ ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ನಾಯಂಡಹಳ್ಳಿ ಮೇಲ್ಸೇತುವೆ ಡಿವೈಡರ್‌ನಲ್ಲಿ ಬೆಳೆದಿರುವ ಗಿಡಗಳನ್ನು ಸ್ವತ್ಛಗೊಳಿಸಿಲ್ಲ. ನೀರು ಹೋಗುವ ಪೈಪ್‌ಗ್ಳನ್ನು ರಿಪೇರಿ ಮಾಡದೆ ಮೇಲ್ಸೇತುವೆಗೆ ನಾಮಕೆವಾಸ್ತೆ ಬಣ್ಣ ಹಚ್ಚಲಾಗಿದೆ. ಇತ್ತೀಚೆಗೆ ಮೇಲ್ಸೇತುವೆ ಕೆಳಗೆ ಸಂಚರಿಸುವಾಗ ನನ್ನ ಮೇಲೂ ನೀರು ಬಿದ್ದಿತು ಎನ್ನುವವರು ಹಲವರು.

ಮೇಲ್ಸೇತುವೆಯಲ್ಲೂ ಗುಂಡಿ!: ಮಳೆಗಾಲದ ಆರಂಭಕ್ಕೂ ಮೊದಲು ಬಿಬಿಎಂಪಿ ವ್ಯಾಪ್ತಿಯ ರಸ್ತೆ ಮತ್ತು ಮೇಲ್ಸೇತುವೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ಆದರೆ, ಕೆ.ಆರ್‌. ಮಾರುಕಟ್ಟೆ, ನಾಯಂಡಹಳ್ಳಿ ಸೇರಿದಂತೆ ಹಲವು ಮೇಲ್ಸೇತುವೆ ಮೇಲೆ ಬಿದ್ದಿರುವ ಗುಂಡಿಗಳನ್ನು ಮುಚ್ಚಿಲ್ಲ. ನಾಯಂಡಹಳ್ಳಿಯ ಮೇಲ್ಸೇತುವೆ ಮೇಲೆ ಗಿಡಗಳು ಬೆಳೆದಿದ್ದು, ಡಿವೈಡರ್‌ಗಳಲ್ಲಿ ನೀರು ಹೋಗದಂತೆ ಹೂಳು ತುಂಬಿದೆ.ಬಾಲಗಂಗಾಧರನಾಥ ಮೇಲ್ಸೇತುವೆ ಮೇಲೆ ನೀರು ನಿಲ್ಲಲಿದ್ದು, ವಾಹನ ಸವಾರರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಮೇಲ್ಸೇತುವೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಪಾಲಿಕೆಯ ವ್ಯಾಪ್ತಿಯ ಮೇಲ್ಸೇತುವೆಗಳ ನಿರ್ವಹಣೆಗೆ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ 50 ಕೋಟಿ ರೂ. ಮೀಸಲಿಟ್ಟಿದ್ದರೂ, ಮೇಲ್ಸೇತುವೆ ನಿರ್ವಹಣೆ ಮರೀಚಿಕೆಯಾಗಿದೆ. ಮಳೆ ಬಂದರೆ ಸಾಕು ಸೇತುವೆ ಮೇಲಿನ ನೀರು ಕೆಳಗೆ ಸುರಿಯುತ್ತಿದ್ದು, ಕೆಳ ಭಾಗದಲ್ಲಿ ಸಂಚರಿಸುವ ವಾಹನ ಸವಾರರ ಮೇಲೆ ಬೀಳುತ್ತಿದೆ. ಇದರಿಂದ ವಾಹನ ಸವಾರರು ಗೊಂದಲಕ್ಕೀಡಾಗಿ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ.

ಪಾಲಿಕೆ ಅಧಿಕಾರಿಗಳು ಪ್ರತಿವರ್ಷವೂ ಮೇಲ್ಸೇತುವೆಗಳಿಗೆ ಬಣ್ಣ ಬಳಿಯುವುದು, ನೀರಿನ ಪೈಪ್‌ ದುರಸ್ತಿ, ಡಿವೈಡರ್‌ ಮೇಲೆ ಬೆಳೆದ ಕಸ ಸ್ವತ್ಛಗೊಳಿಸುವುದು ಸೇರಿದಂತೆ ವಿವಿಧ ಕಾರ್ಯ ನಿರ್ವಹಿಸಬೇಕು. ಆದರೆ, ನಾಯಂಡಹಳ್ಳಿ, ರಿಚ್‌ಮಂಡ್‌ ಸರ್ಕಲ್‌ ಮೇಲ್ಸೇತುವೆಯಲ್ಲಿ ಯಾವುದೇ ದುರಸ್ತಿ ಕಾರ್ಯ ನಡೆಸಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವ ಮೇಲ್ಸೇತುವೆ ದುರಸ್ತಿ ಮಾಡಬೇಕೆಂಬುದನ್ನು ಪಟ್ಟಿ ಮಾಡಲಾಗಿದೆ. ಪ್ರಸ್ತುತ ಟೆಂಡರ್‌ ಕರೆಯುವುದು ಮಾತ್ರ ಬಾಕಿ ಇದ್ದು, ಬಜೆಟ್‌ ತಡೆಯಿಂದ ವಿಳಂಬವಾಗಿದೆ ಎಂದು ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.

ನಗರದ ಮೇಲ್ಸೇತುವೆಗಳ ದುರಸ್ತಿ ಕಾರ್ಯಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ಸೇತುವೆಗಳನ್ನು ಪರಿಶೀಲನೆ ಮಾಡಲಾಗುವುದು. ಆದ್ಯತೆ ಮೇರೆಗೆ ದುರಸ್ತಿ ಕಾರ್ಯ ನಡೆಸಲಾಗುವುದು.
-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮೇಯರ್‌

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next