Advertisement

ಜೀವ ಕೈಯಲ್ಲಿ ಹಿಡಿದು ಪ್ರಯಾಣ: ಭರವಸೆಯೆಲ್ಲ ನೀರುಪಾಲು

08:00 AM May 14, 2018 | Team Udayavani |

ಸುಳ್ಯ: ಕುಸಿದು ಬೀಳುವ ಹಂತದಲ್ಲಿರುವ ಅಂತಾರಾಜ್ಯ ಸಂಪರ್ಕದ ಕಾಂತಮಂಗಲ ಸೇತುವೆ ತಾತ್ಕಾಲಿಕ ದುರಸ್ತಿಗೂ ಅನುದಾನಕ್ಕಾಗಿ ಕಾಯುವ ದುಃಸ್ಥಿತಿ ಉಂಟಾಗಿದೆ..! ಸುಳ್ಯ-ಅಜ್ಜಾವರ-ಮಂಡೆಕೋಲು ರಸ್ತೆಯಲ್ಲಿನ ಕಾಂತಮಂಗಲದಲ್ಲಿ ಪಯಸ್ವಿನಿ ನದಿಗೆ ನಿರ್ಮಿಸಿರುವ ಹಳೆ ಸೇತುವೆ ದಿನೇದಿನೆ ಶಿಥಿಲಾವಸ್ಥೆಗೆ ತಲುಪಿದೆ. ಅನುದಾನ ಇಲ್ಲದೆ ಇಲಾಖೆಗಳು ಅಸಹಾಯಕತೆ ವ್ಯಕ್ತಪಡಿಸಿದರೆ, ನಿತ್ಯ ಸಂಚರಿಸುವವರ ಪಾಲಿಗೆ ಆತಂಕ ತಪ್ಪಿಲ್ಲ.

Advertisement

5 ಲಕ್ಷ ರೂ. ಪ್ರಸ್ತಾವನೆ
ನಗರದಿಂದ ಅನತಿ ದೂರದಲ್ಲಿರುವ ಈ ಸೇತುವೆ ದುಃಸ್ಥಿತಿ ಬಗ್ಗೆ ಲೋಕಾಯುಕ್ತರಿಗೆ 2017 ನ.11ರಂದು ದೂರು ದಾಖಲಿಸಲಾಗಿತ್ತು. ಮಂಗಳೂರು ಪುರಭವನದಲ್ಲಿ ಅಹವಾಲು ಸ್ವೀಕರಿಸಿದ ಲೋಕಾಯುಕ್ತರು ಸಾರ್ವಜನಿಕರ ಸಂಚಾರದ ದೃಷ್ಟಿಯಿಂದ ತುರ್ತು ಸ್ಪಂದಿಸುವಂತೆ ಇಲಾಖೆಗೆ ಸೂಚಿಸಿದರು. ಹೀಗಾಗಿ ಪಂಚಾಯತ್‌ರಾಜ್‌ ಎಂಜಿನಿಯರ್‌ ಇಲಾಖೆ 5 ಲಕ್ಷ ರೂ. ವೆಚ್ಚ ಅಂದಾಜು ಪಟ್ಟಿ ತಯಾರಿಸಿ, ಜಿಲ್ಲಾಧಿಕಾರಿ ಅವರಿಗೆ ಅನುದಾನ ಬಿಡುಗಡೆ ಕೋರಿ ಪತ್ರ ಬರೆದಿತ್ತು. ಆದರೆ ಅನುದಾನ ಕೋರಿ ಬರೆದ ಪತ್ರಕ್ಕೆ ಸ್ಪಂದನೆ ಸಿಕ್ಕಿಲ್ಲ  ಎನ್ನುವ ಅಂಶ ಮಾಹಿತಿ ಹಕ್ಕಿನಲ್ಲಿ ಬಹಿರಂಗವಾಗಿದೆ.

ಸಂಚಾರ ನಿಷೇಧಿಸಿ ಫಲಕ
ಸೇತುವೆಯ ವಾಸ್ತವ ಸ್ಥಿತಿ ಪರಿಶೀಲಿಸಿದ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ ಇಲ್ಲಿ ಘನ ವಾಹನ ಓಡಾಟ ನಿಷೇಧಿಸಿ ಫಲಕ ಅಳವಡಿಸುವಂತೆ ಅಜ್ಜಾವರ ಪಂಚಾಯತ್‌ಗೆ ಸೂಚಿಸಿತ್ತು. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ದಿನಂಪ್ರತಿ ನೂರಾರು ವಾಹನಗಳು ಓಡಾಡುತ್ತಿವೆ. ಹತ್ತಿಪ್ಪತ್ತು ಕಿ.ಮೀ. ಸುತ್ತು ಬಳಸಿ ಓಡಾಟ ನಡೆಸಬೇಕಾದ ಕಾರಣ, ಫಲಕದ ಕಣ್ತಪ್ತಿಸಿ ಘನ ವಾಹನಗಳು ಸಂಚರಿಸುವ ಅನಿವಾರ್ಯತೆ ಉಂಟಾಗಿದೆ. ದಿನವಿಡಿ ವಿವಿಧ ಕಾರಣಗಳಿಗೆ ನಗರಕ್ಕೆ ಬರುವ ಮಂಡೆಕೋಲು, ಅಜ್ಜಾವರ, ಕಾಂತಮಂಗಲ ನಿವಾಸಿಗಳಿಗೆ ಜೀವ ಕೈಯಲ್ಲಿ ಹಿಡಿದು ಸೇತುವೆ ದಾಟಬೇಕಾದ ಸ್ಥಿತಿಯಿದೆ.

ದುರಸ್ತಿಗೆ ಗಡುವು
ಈ ಹಿಂದೆ ಸೇತುವೆಯನ್ನು ಎರಡು ತಿಂಗಳೊಳಗೆ ದುರಸ್ತಿಪಡಿಸುವುದಾಗಿ ಅಂದಿನ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಅಧಿಕಾರಿ ಭರವಸೆ ನೀಡಿದ್ದರು. 2 ತಿಂಗಳು ಕಳೆದು ಅವರ ವರ್ಗಾವಣೆಯಾಗಿದ್ದು ಬಿಟ್ಟರೆ, ಸೇತುವೆ ಇದ್ದ ಸ್ಥಿತಿಯಲ್ಲಿಯೇ ಇದೆ. ಅಜ್ಜಾವರ ಗ್ರಾ.ಪಂ. ಗ್ರಾಮ ಸಭೆಗಳಲ್ಲಿಯೂ ಚರ್ಚೆ ನಡೆದಿದೆ. ದುರಸ್ತಿ ಕೋರಿ ಪಂಚಾಯತ್‌ ಎಂಜಿನಿಯರ್‌ ಇಲಾಖೆಗೆ ಪತ್ರ ಬರೆದಿತ್ತು. ಅಲ್ಲಿಂದಲೂ ಅನುದಾನ ಬಂದ ತತ್‌ಕ್ಷಣ ದುರಸ್ತಿ ಎಂಬ ಉತ್ತರ ಬಂದದ್ದು ಬಿಟ್ಟರೆ ಬೇರೇನೂ ಪ್ರಗತಿ ಆಗಿಲ್ಲ.

ಹೊಸ ಸೇತುವೆ ಅನಿವಾರ್ಯ
ತಾತ್ಕಾಲಿಕವಾಗಿ ಸೇತುವೆ ದುರಸ್ತಿ ನಡೆಸಿ ದರೂ, ಅದರಿಂದ ದೀರ್ಘ‌ ಪ್ರಯೋಜನ ಸಿಗದು. ಇಲ್ಲಿನ ವಾಹನ ಓಡಾಟ ಹಾಗೂ ಗಡಿ ರಾಜ್ಯದ ಸಂಪರ್ಕ ರಸ್ತೆಯ ಕಾರಣದಿಂದ ವಿಸ್ತರಿತ ಹೊಸ ಸೇತುವೆ ನಿರ್ಮಾಣದ ಅಗತ್ಯವಿದೆ. ಈ ಬೇಡಿಕೆ ಹಲವು ವರ್ಷಗಳಿಂದ ವ್ಯಕ್ತವಾಗುತ್ತಿದೆ. ಆದರೆ ದುರಸ್ತಿಗೆ ಹಣ ಬರುತ್ತಿಲ್ಲ ಎಂದಾದರೆ, ಹೊಸ ಸೇತುವೆಗೆ ಹಣ ಬರಲು ಸಾಧ್ಯವೇ ಎಂಬ ಪ್ರಶ್ನೆ ಜನರದ್ದು.

Advertisement

ಮೇಲ್ಪದರ ಶಿಥಿಲ
ಸೇತುವೆಯ ಮೇಲ್ಪದರ ಶಿಥಿಲಗೊಂಡಿದೆ. ದೊಡ್ಡದಾದ ಬಿರುಕು ಸೃಷ್ಟಿಯಾಗಿದ್ದು, ಅದರಿಂದ ನದಿಯ ಕೆಳಭಾಗ ಕಾಣುತ್ತಿದೆ. ಕಬ್ಬಿಣದ ಪ್ಲೇಟುಗಳು ತುಕ್ಕು ಹಿಡಿದು, ಮರು ಅಳವಡಿಕೆ ಅನಿವಾರ್ಯವಾಗಿದೆ. ಸೇತುವೆ ಆರಂಭದ ಸ್ಥಳದಲ್ಲಿ ಹೊಂಡ ನಿರ್ಮಾಣವಾಗಿದ್ದು, ಕೆಳ ಭಾಗದ ತಡೆಗೋಡೆ ಕುಸಿಯುವ ಆತಂಕ ಮೂಡಿದೆ. ಹೀಗಿದ್ದರೂ  ಜನಪ್ರತಿನಿಧಿಗಳು ಅನುದಾನ ತರಿಸುವ ಯತ್ನ ಮಾಡಿಲ್ಲ ಎನ್ನುತ್ತಾರೆ ವಾಹನ ಸವಾರ ಶಿವಣ್ಣ.

ಅನುದಾನ ಇಲ್ಲ
ಸೇತುವೆ ದುರಸ್ತಿ ಅನಿವಾರ್ಯ. ಅದಕ್ಕಾಗಿ ಅನುದಾನ ಕೋರಲಾಗಿದೆ. ಈ ತನಕ ಬಂದಿಲ್ಲ. ಅನುದಾನ ಬಂದ ಬಳಿಕವೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕಷ್ಟೆ. ಈಗಾಗಲೇ ಘನ ವಾಹನಗಳ ಓಡಾಟಕ್ಕೆ ಇಲ್ಲಿ ನಿರ್ಬಂಧ ಹೇರಲಾಗಿದೆ.
– ಚೆನ್ನಪ್ಪ ಮೊಯಿಲಿ, ಪ್ರಭಾರ, ಸಹಾಯಕ ಎಂಜಿನಿಯರ್‌, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆ, ಸುಳ್ಯ

ಪತ್ರ ಬರೆಯಲಾಗಿದೆ
ಗ್ರಾಮ ಸಭೆಗಳಲ್ಲಿಯೂ ಸೇತುವೆ ಬಗ್ಗೆ ಪ್ರಸ್ತಾವಿಸಲಾಗಿದೆ. ದುರಸ್ತಿಗೆ ಸಂಬಂಧಿಸಿ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಅನುದಾನ ಇಲ್ಲ ಎಂಬ ಉತ್ತರ ಸಿಕ್ಕಿದೆ.
– ಸಂದೇಶ್‌ ಕೆ.ಎನ್‌. ಪಿಡಿಒ, ಅಜ್ಜಾವರ ಗ್ರಾ.ಪಂ.

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next