Advertisement

ಕಾಡಬೆಟ್ಟು: ಸಂಪರ್ಕ ಸೇತುವೆಗೆ ಆಗ್ರಹ

02:25 AM Jul 09, 2018 | Team Udayavani |

ಪುಂಜಾಲಕಟ್ಟೆ: ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ಕಾಡಬೆಟ್ಟು ಗ್ರಾಮದ ಮಾರಿಬೆಟ್ಟು- ಜಾರಬೆಟ್ಟು ತೋಡಿನ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸೇತುವೆಯು ಕಾಡಬೆಟ್ಟು ಗ್ರಾಮದ ಪಾದಚಾರಿಗಳಿಗೆ ತನ್ನ ದೈನಂದಿನ ವ್ಯವಹಾರಕ್ಕಾಗಿ ವಗ್ಗ ಪೇಟೆಗೆ ಹೋಗಲು ಮತ್ತು ಮಕ್ಕಳಿಗೆ ಶಾಲೆಗೆ ಹೋಗಲು ಅತೀ ಹತ್ತಿರದ ಸಂಪರ್ಕ ಸೇತುವೆಯಾಗಿದೆ. ಇಲ್ಲಿ ಈ ಹಿಂದೆ ಸ್ಥಳೀಯರಾದ ಜಾರಬೆಟ್ಟು ನಾರಾಯಣ ಮೂಲ್ಯಅವರು ವೈಯಕ್ತಿಕ ನೆಲೆಯಲ್ಲಿ ಗ್ರಾಮಸ್ಥರ ಆವಶ್ಯಕತೆ ಮನಗಂಡು ಮರದ ಸೇತುವೆ ನಿರ್ಮಿಸಿ ಅದರ ನಿರ್ವಹಣೆಯನ್ನೂ ನಡೆಸುತ್ತಿದ್ದರು. ಆದರೆ ಈ ಬಾರಿಯ ಪ್ರಥಮ ಮಳೆಗೆ ಈ ಮರದ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಜನರು ಸುತ್ತು ಬಳಸಿ ಹೋಗುವಂತಾಗಿತ್ತು.ಸ್ಥಳೀಯ ನಾಗರಿಕರು ಪಡುವ ಕಷ್ಟವನ್ನರಿತ ಸ್ಥಳೀಯ ಮನೆಯವರು ಹೊಸತಾಗಿ ಬಿದಿರಿನ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದ್ದರು. ಆದರೆ ಈ ಸೇತುವೆಯೂ ನೀರಿನ ರಭಸಕ್ಕೆ ಪುನಃ ಕೊಚ್ಚಿಕೊಂಡು ಹೋಗುವ ಭೀತಿಯಲ್ಲಿದೆ.

Advertisement

ಈ ಹಿಂದೆ ಇಲ್ಲಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ ವ್ಯವಸ್ಥೆಯಾಗಿತ್ತು. ಆದರೆ ರಾಜಕೀಯ ಮೇಲಾಟದಿಂದ ಅದು ಬೇರೆಡೆ ಸ್ಥಳಾಂತರಗೊಂಡಿದ್ದು, ಇಲ್ಲಿನ ಪರಿಸರದವರ ಬೇಡಿಕೆಯು ಕನಸಾಗಿ ಉಳಿದಿದೆ. ಆದುದರಿಂದ ಶೀಘ್ರ ಇಲ್ಲಿ ಕಾಂಕ್ರೀಟ್‌ ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next