Advertisement
ಬೆಳ್ತಂಗಡಿ ಕಡೆಯಿಂದ ಬರುವ ಬಜಿರೆ ಕಿರುಹೊಳೆ ಪುಚ್ಚೆಮೊಗರು ಬಳಿ ಫಲ್ಗುಣಿ ನದಿಯನ್ನು ಸೇರುತ್ತದೆ. ಕಿರುಹೊಳೆ ಬೆಳ್ತಂಗಡಿ ತಾ|ನ ಗುಂಡೂರಿ, ಬಂಟ್ವಾಳ ತಾ|ನ ಅಜ್ಜಿಬೆಟ್ಟು ಗ್ರಾಮದ ಸಜಂಕಬೆಟ್ಟು ಬಳಿ 2 ತಾ|ಗಳನ್ನು ಪ್ರತ್ಯೇಕಿಸುತ್ತದೆ. ವೇಣೂರು ಪರಿಸರದ ಜನರಿಗೂ ವಾಮದಪದವಿಗೆ ಇದು ಸನಿಹದ ದಾರಿ. ಹೊಳೆ ಬದಿಯಿಂದ ನೇರಳ್‌ಪಲ್ಕೆ, ತುಂಬೆಲಕ್ಕಿವರೆಗೆ 2 ಕಿ.ಮೀ. ಕಚ್ಛಾ ರಸ್ತೆ ಇದ್ದು, ಬಳಿಕ ಡಾಮರು ರಸ್ತೆಯಿದೆ.
ವಾಮದಪದವು ಪರಿಸರದ ಹೆಚ್ಚಿನ ಜನರು ಕೃಷಿ ಅವಲಂಬಿತರು. ಭತ್ತ, ಅಡಿಕೆ, ತೆಂಗು ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಸುತ್ತಾರೆ. ಅಗತ್ಯ ಕಾರ್ಯಗಳಿಗೆ ವೇಣೂರನ್ನು ಬಳಸುತ್ತಿ ರುವ ಈ ಜನರು ತಮ್ಮ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಕೃಷಿ ಸಂಬಂಧಿತ ವಸ್ತುಗಳನ್ನು ಸಾಗಿಸಲು ವೇಣೂರಿಗೆ ತೆರಳಬೇಕಾದರೆ ಪ್ರಯಾಸಪಡುತ್ತಾರೆ. ವೇಣೂರು ಸಂತೆ ಪ್ರಸಿದ್ಧವಾಗಿದ್ದು, ಗೋಮಟೇಶ್ವರ ಮೂರ್ತಿಯಿಂದಾಗಿ ಪ್ರೇಕ್ಷಣೀಯ ಸ್ಥಳವಾಗಿದೆ. ಆದರೆ ವಾಮದಪದವಿನಿಂದ ವೇಣೂರಿಗೆ ಕೆಲವೇ ಕೆಲವು ಖಾಸಗಿ ಬಸ್ ಸರ್ವೀಸ್ ಇದೆ. ಸಾಮಾನು ಸರಂಜಾಮು ಸಾಗಿಸಲು ವಾಹನಗಳಿಗೆ ದುಪ್ಪಟ್ಟು ಬೆಲೆ ತೆರಬೇಕಾಗುತ್ತದೆ. ವಾಮದಪದವಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ, ಸರಕಾರಿ ಪ್ರಥಮದರ್ಜೆ ಕಾಲೇಜು ಮುಂತಾದ ಸವಲತ್ತುಗಳಿಗಾಗಿ ವೇಣೂರಿನಿಂದ ವಾಮದ ಪದವಿಗೆ ಬರುತ್ತಾರೆ. ಇವರಿಗೆ ವಾಮದ ಪದವು ಹೊರತುಪಡಿಸಿ ಈ ಸೌಲಭ್ಯಗಳಿಗೆ ಮೂಡುಬಿದಿರೆಗೆ ಹೋಗಬೇಕಾಗುತ್ತದೆ. ಬೇಸಗೆಯಲ್ಲಿ ತಾತ್ಕಾಲಿಕ ಸೇತುವೆ ಬೇಸಗೆ ಕಾಲದಲ್ಲಿ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಗುಂಡೂರಿಯಲ್ಲಿ ನೀರಿಗೆ ತಾತ್ಕಾಲಿಕ ಅಣೆಕಟ್ಟು ಕಟ್ಟುತ್ತಾರೆ. ಆದರೂ ಸಜಂಕಬೆಟ್ಟುವಿನ ಗ್ರಾಮಸ್ಥರು ಮರಳು, ಮಣ್ಣು ಹಾಕಿ ತಾತ್ಕಾಲಿಕ ಸೇತುವೆ ನಿರ್ಮಿಸಿ ವೇಣೂರು ಸಂಪರ್ಕಕ್ಕೆ ದಾರಿ ನಿರ್ಮಿಸುತ್ತಾರೆ. ಕಿರುಹೊಳೆಯ ಎರಡೂ ಬದಿಯ ರಸ್ತೆಗಳನ್ನು ಎರಡೂ ತಾಲೂಕಿನ ಸ್ಥಳೀಯರು ಸೇರಿ ಶ್ರಮದಾನದ ಮೂಲಕ ಸರಿಪಡಿಸುತ್ತಾರೆ. ಸ್ಥಳೀಯ ಸಜಂಕಬೆಟ್ಟುವಿನ ಕೃಷಿಕ ಮಹಾಲಿಂಗ ಶರ್ಮ ಅವರು ಸೇತುವೆಗೆ ನಿರ್ಮಾಣ ಕಾರ್ಯಕ್ಕೆ ತನ್ನ ನೂರರಷ್ಟು ಅಡಿಕೆ ಮರಗಳನ್ನು ತೆಗೆಯುವ ಭರವಸೆ ನೀಡಿದ್ದಾರೆ. ಇಲ್ಲಿ ಸೇತುವೆ ನಿರ್ಮಾಣವಾದಲ್ಲಿ ಹೆಚ್ಚಿನ ಸೌಲಭ್ಯಗಳು ದೊರೆತು ಜನರ ಪ್ರಯಾಣ ಹಾಗೂ ಸರಕು ಸಾಗಾಟ ಸುಗಮವಾಗಲಿದೆ.
Related Articles
ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಪ್ರದೇಶಗಳಾದ ಅಜ್ಜಿಬೆಟ್ಟು, ಪಿಲಿಮೊಗರು, ದಂಡೆಗೋಳಿ, ಕೊಡಂಬೆಟ್ಟು, ಚೆನ್ನೈತ್ತೋಡಿ, ಸಮೀಪದ ವಗ್ಗ, ಪಂಜಿಕಲ್ಲು ಮೊದಲಾದ ಊರವರಿಗೆ ವೇಣೂರಿಗೆ ತೆರಳಲು ಪಾಂಗಲ್ಪಾಡಿಯಿಂದ ಅಜ್ಜಿಬೆಟ್ಟು, ಕೊರಗಟ್ಟೆ ರಸ್ತೆಯಾಗಿ ಸಜಂಕಬೆಟ್ಟುವಿನಿಂದ ಕೇವಲ 5 ಕಿ.ಮೀ. ಮಾತ್ರ ದೂರವಿದೆ. ಆದರೆ ಸಜೆಂಕಬೆಟ್ಟು ಬಳಿ ಕಿರುಹೊಳೆಗೆ ಸೇತುವೆಯಿಲ್ಲದೆ ಹೊಳೆಯ ಇನ್ನೊಂದು ಬದಿಗೆ ಹೋಗಲು ಅಸಾಧ್ಯವಾಗಿದೆ. ಆದುದರಿಂದ ಈ ಎಲ್ಲ ಪ್ರದೇಶದ ಜನರು ವೇಣೂರಿಗೆ ಹೋಗಲು ನೇರಳಕಟ್ಟೆ-ನಯನಾಡು ರಸ್ತೆಯಾಗಿ ಸುಮಾರು 15 ಕಿ.ಮೀ. ದೂರ ಕ್ರಮಿಸಬೇಕಾಗಿರುವುದು ಅನಿವಾರ್ಯವಾಗಿದೆ.
Advertisement
1.5 ಕೋ. ರೂ. ಅನುಮೋದನೆಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಈ ಬಗ್ಗೆ ಹಲವು ವರ್ಷಗಳಿಂದ ಸಂಬಂಧಿತ ಇಲಾಖೆಗೆ ಮನವಿ ಮಾಡುತ್ತಲೇ ಬಂದಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಅಧಿಕಾರಾವಧಿ ಯಲ್ಲಿ ಅವರ ಮುತುವರ್ಜಿಯಿಂದ ಸೇತುವೆ ನಿರ್ಮಾಣಕ್ಕೆ 1.5 ಕೋ. ರೂ. ಅನುಮೋದನೆ ದೊರಕಿದೆ. ಸೇತುವೆ ನಿರ್ಮಾಣಕ್ಕೆ ಸುಮಾರು 3 ಕೋ.ರೂ. ಅಂದಾಜು ವೆಚ್ಚವಾಗಲಿದ್ದು, ಹೆಚ್ಚಿನ ಅನುದಾನ ಮಂಜೂರಾತಿಗೆ ಬಿ. ರಮಾನಾಥ ರೈ ಅವರು ಲೋಕೋಪಯೋಗಿ ಸಚಿವ ರೇವಣ್ಣ ಅವರಲ್ಲಿ ಮನವಿ ಮಾಡಿದ್ದಾರೆ.
– ಯತೀಶ್ ಶೆಟ್ಟಿ,
ಅಧ್ಯಕ್ಷರು, ಚೆನ್ನೈತ್ತೋಡಿ ಗ್ರಾ.ಪಂ. ರತ್ನದೇವ್ ಪುಂಜಾಲಕಟ್ಟೆ