Advertisement

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಬ್ರಿಡ್ಜ್ ಕೋರ್ಸ್‌

06:00 AM Jun 17, 2018 | |

ಉಡುಪಿ: ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಹೆಚ್ಚಳಕ್ಕಾಗಿ ಬ್ರಿಡ್ಜ್ ಕೋರ್ಸ್‌ ಅನ್ನು ಈ ಬಾರಿ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಹಮ್ಮಿ ಕೊಳ್ಳಲಾಗಿದೆ.
 
ಜೂನ್‌ ತಿಂಗಳಲ್ಲಿ 20-22 ಅವಧಿಯಲ್ಲಿ ಹಿಂದಿನ ತರಗತಿಯಲ್ಲಿ ಕಲಿತ ಅಂಶಗಳ ಸ್ಮರಣೆ, ಮುಂದಿನ ತರಗತಿಯ ಪಠ್ಯಕ್ಕೆ ಸಿದ್ಧತೆಯನ್ನು ಈ “ಸೇತುಬಂಧ’ ಕಾರ್ಯಕ್ರಮ ದಲ್ಲಿ ಮಾಡಲಾಗುತ್ತಿದೆ.
 
ಸೇತುಬಂಧ ಎಂದರೇನು?
ವಿದ್ಯಾರ್ಥಿಗಳ ಪೂರ್ವಜ್ಞಾನವನ್ನು ತಿಳಿದುಕೊಂಡು ಪ್ರಸ್ತುತ ಕಲಿಯುತ್ತಿರುವ ತರಗತಿಯಲ್ಲಿ ಮುಂದಿನ ಕಲಿಕೆಗೆ ಸಿದ್ಧ ಪಡಿಸುವ ವಿಶಿಷ್ಟ ಕಾರ್ಯಕ್ರಮ ಇದು. ಶಾಲಾರಂಭದ ದಿನದಿಂದ ಹಿಂದಿನ ತರಗತಿಗಳಲ್ಲಿ ಕಲಿತ ಕಲಿಕಾಂಶಗಳಿಗೆ ಸಂಬಂಧಿಸಿದಂತೆ ಪೂರ್ವ ಪರೀಕ್ಷೆ ನಡೆಸ ಲಾಗುತ್ತದೆ. ಇದರ ಆಧಾರದ ಮೇಲೆ ವಿದ್ಯಾರ್ಥಿ  ಸಾಮರ್ಥ್ಯವನ್ನು ಒರೆಗೆ ಹಚ್ಚಿ ಪರಿಹಾರ ಬೋಧನೆ ನಡೆಸಲಾಗುತ್ತಿದೆ.

Advertisement

ಉದ್ದೇಶ
ಹಿಂದಿನ ಎಲ್ಲ ತರಗತಿಗಳ ಉದ್ದೇಶಿತ ಸಾಮರ್ಥ್ಯಗಳು, ಕಲಿಕಾಂಶಗಳು ವಿದ್ಯಾರ್ಥಿ ಯಲ್ಲಿ ಮೈಗೂಡಿರಬೇಕು. ಹಾಗಿಲ್ಲದೆ ಇದ್ದರೆ ಬೋಧಕರು ಅದಕ್ಕೆ ಅನುವು ಮಾಡಿಕೊಡಬೇಕು ಎನ್ನುವುದೇ ಇದರ ಉದ್ದೇಶ.
  
ಪರಿಹಾರ ಬೋಧನೆ
ವಿದ್ಯಾರ್ಥಿಯು ಯಾವ ಕಲಿಕಾಂಶ- ಸಾಮರ್ಥ್ಯದಲ್ಲಿ ಹಿಂದುಳಿದಿದ್ದಾನೆ ಎಂಬು ದನ್ನು ತಿಳಿದುಕೊಂಡು ತರಗತಿಯ ಅವಧಿ ಅಥವಾ ವಿಶೇಷ ತರಗತಿಗಳಲ್ಲಿ ಚಟುವಟಿಕೆಗಳೊಂದಿಗೆ ಮೈಗೂಡಿಸುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿ ಕಲಿಕಾ ಸಾಮರ್ಥ್ಯ ಮೈಗೂಡಿಸಿಕೊಳ್ಳುವವರೆಗೆ ಕಲಿಕಾಂಶಗಳನ್ನು ಒದಗಿಸುವ ಕೆಲಸವನ್ನು ಇಲಾಖೆ ಬೋಧಕರ ಮೂಲಕ ನಡೆಸುತ್ತದೆ.  

ಲಿಖೀತ, ಮೌಖೀಕ ಮತ್ತು ಚಟುವಟಿಕೆ ಆಧಾರಿತವಾಗಿ ಪರೀಕ್ಷೆ ನಡೆಸಲಾಗುತ್ತದೆ. ಸಾಫ‌ಲ್ಯ ಪರೀಕ್ಷೆ (ಪೋಸ್ಟ್‌ ಟೆಸ್ಟ್‌) ನಡೆಸಿದ ದಾಖಲೆಗಳನ್ನು ಆಯಾ ಶಿಕ್ಷಕರು ಸಂಗ್ರಹಿಸಿ ಇಟ್ಟುಕೊಳ್ಳುವುದಲ್ಲದೆ, ಇಲಾಖಾಧಿಕಾರಿಗಳ ಸಂದರ್ಶನ ವೇಳೆ ಮಾಹಿತಿ ಒದಗಿಸುತ್ತಾರೆ. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುತ್ತಿದೆ. ಹಿಂದಿನ ತರಗತಿಗಳ ಕಲಿಕಾಂಶಗಳಲ್ಲದೆ ಪ್ರಸ್ತುತ ವರ್ಷದ ಕಲಿಕಾಂಶಗಳ ಬೋಧನೆ ಜತೆ ನಡೆಯುವುದರಿಂದ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಉತ್ಸಾಹದಾಯಕವಾಗಿದೆ.

ಪಠ್ಯ ವಿಷಯಾಧಾರಿತ 
ಭಾಷೆಗೆ ಸಂಬಂಧಿಸಿದಂತೆ ಭಾಷಾ ಕೌಶಲ (ಓದುವಿಕೆ, ಬರವಣಿಗೆ, ಮಾತನಾಡುವ ಕಲೆ, ಆಲಿಸುವುದು, ವ್ಯಾಕರಣ ದೋಷ ನಿವಾರಣೆ) ಇತ್ಯಾದಿಗಳಿರುತ್ತವೆ. ಗಣಿತದಲ್ಲಿ ಮೂಲ ಕ್ರಿಯೆಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರದ ಆಧಾರಿತ ಲೆಕ್ಕಗಳು, ಸೂತ್ರ ಆಧಾರಿತ ಲೆಕ್ಕಗಳು, ಹಿಂದಿನ ತರಗತಿಗಳಲ್ಲಿ ಕಲಿತ ಗಣಿತ ಆಧಾರಿತ ಲೆಕ್ಕಗಳನ್ನು ಕಲಿಸುವುದರೊಂದಿಗೆ ಜ್ಞಾನ ಕಟ್ಟಿಕೊಡುವ ಕಾರ್ಯ ನಡೆಯುತ್ತದೆ. 8ನೇ ತರಗತಿಗೆ ಮಗ್ಗಿ ಕೇಳಲಾಗುತ್ತದೆ. ಸಮಾಜಶಾಸ್ತ್ರದಲ್ಲಿ ಹಿಂದಿನ ತರಗತಿಗಳ ಕಲಿಕಾಂಶಗಳ ಬೋಧನೆಯೊಂದಿಗೆ ಪೌರ ಪ್ರಜ್ಞೆ, ಪ್ರಜಾಪ್ರಭುತ್ವ ವ್ಯವಸ್ಥೆ, ನಾಗರಿಕರ ಹಕ್ಕು/ಕರ್ತವ್ಯಗಳು, ಪರಿಸರ ಸಂರಕ್ಷಣೆ, ಜಾಗತಿಕ ವಿದ್ಯಮಾನಗಳ ಬಗ್ಗೆ ಇರುತ್ತದೆ. ವಿಜ್ಞಾನದಲ್ಲಿ ವಿದ್ಯಾರ್ಥಿಗಳ ಬುನಾದಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸೇತುಬಂಧ ನಡೆಸಲಾಗುತ್ತಿದೆ. ಪ್ರತೀ ತರಗತಿಗಳಿಗೂ ಬುನಾದಿ ಸಾಮರ್ಥ್ಯಗಳಿದ್ದು, ಸಾಧಾರಣವಾಗಿ ಹಿಂದಿನ ತರಗತಿಗಳ ಪಠ್ಯವನ್ನೇ ಅವಲಂಬಿಸಿರುತ್ತವೆ.

ಹೊಸ ಜ್ಞಾನದ ಜೋಡಣೆ 
ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರೌಢಶಾಲೆಗಳಲ್ಲಿ, ತಾಲೂಕು ಮಟ್ಟ ಮತ್ತು ಅದಕ್ಕಿಂತ ಕೆಳಗಿನ ಅಧಿಕಾರಿಗಳು ಪ್ರಾಥಮಿಕ ಶಾಲೆಗಳಲ್ಲಿ ಸೇತುಬಂಧ ಕೋರ್ಸ್‌ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಕೋರ್ಸ್‌ನ ಮೂಲಕ ಈಗಾಗಲೇ ಇರುವ ಜ್ಞಾನದೊಂದಿಗೆ ಹೊಸ ಜ್ಞಾನಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಭದ್ರ ಬುನಾದಿ ಒದಗಿಸಿದಂತಾಗುತ್ತದೆ.
– ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ

Advertisement

– ಎಸ್‌.ಜಿ.ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next