ಚಿಂಚೋಳಿ: ಪ್ರತಿ ವರ್ಷ ಮಳೆಗಾಲದಲ್ಲಿ ರೈತರ ಜೀವನಾಡಿ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ರೈತರ ಜಮೀನುಗಳಿಗೆ ಒದಗಿಸಿ ಕೊಡುವುದಕ್ಕಾಗಿ ಗ್ರಾಮಸ್ಥರ ಬೇಡಿಕೆಯಂತೆ ನಿಗದಿತ ಅವಧಿಯಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಪೂರ್ಣಗೊಳಿಸಿದ್ದು, ರೈತರಿಗೆ ಅನುಕೂಲವಾಗಿದೆ.
ತಾಲೂಕಿನ ಕನಕಪೂರ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ 2021-22ನೇ ಸಾಲಿನ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆ ಅಡಿಯಲ್ಲಿ ಗಾರಂಪಳ್ಳಿ-ಕನಕಪೂರ ಗ್ರಾಮಗಳ ಮಧ್ಯೆ ಹರಿಯುವ ಮುಲ್ಲಾಮಾರಿ ನದಿಗೆ ಅಡ್ಡಲಾಗಿ 5 ಕೋಟಿ ರೂ.ಗಳಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಡಾ|ಅವಿನಾಶ ಜಾಧವ್ ಜ.24ರಂದು ಅಡಿಗಲ್ಲು ನೆರವೇರಿಸಿದ್ದರು.
ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಈಗಾಗಲೇ ಕೊಟಗಾ, ಕನಕಪೂರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಂದಾಪೂರ,ಪೋಲಕಪಳ್ಳಿ, ಗರಗಪಳ್ಳಿ, ಜಟ್ಟೂರ ಗ್ರಾಮಗಳಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಿದ್ದು, ರೈತರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಕನಕಪೂರ ಬ್ಯಾರೇಜ್ ನಿರ್ಮಾಣದಿಂದ ಒಟ್ಟು 375 ಹೆಕ್ಟೇರ್ ಜಮೀನು ನೀರಾವರಿ ಆಗಲಿದ್ದು, ಒಣ ಬೇಸಾಯ ಮೇಲೆ ಅವಲಂಬಿತರಾಗಿದ್ದ ರೈತರಿಗೂ ಸಾಕಷ್ಟು ಉಪಯೋಗ ಆಗಲಿದೆ.
ಕನಕಪೂರ ಗ್ರಾಮದಲ್ಲಿ ನಿರ್ಮಿಸಿದ ಬ್ರಿಡ್ಜ್ ಕಮ್ ಬ್ಯಾರೇಜ್‌ಗೆ ಒಟ್ಟು 40 ಗೇಟ್‌ಗಳನ್ನು ಮಾಡಲಾಗಿದೆ. ಒಟ್ಟು 101 ಮೀಟರ್ ಉದ್ದವಿದೆ 2.50 ಮೀಟರ್ ಎತ್ತರವಿದೆ. 330.35 ಕಿಮೀ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಬ್ಯಾರೇಜ್‌ನಲ್ಲಿ 08175 ಕ್ಯೂಬಿಕ್ ಮೀಟರ್ ನೀರು ಸಂಗ್ರಹಣೆ ಆಗಲಿದೆ. ರೈತರ ಅನುಕೂಲಕ್ಕಾಗಿ ಶಾಸಕರು ಬ್ಯಾರೇಜ್ ನಿರ್ಮಿಸಿಕೊಟ್ಟಿದ್ದಾರೆ ಎಂದು ತಾಪಂ ಮಾಜಿ ಸದಸ್ಯ ಬಸವಣ್ಣಪ್ಪ ಕುಡಹಳ್ಳಿ ತಿಳಿಸಿದ್ದಾರೆ.
ಮುಲ್ಲಾಮಾರಿ ನದಿ ದಂಡೆಯಲ್ಲಿರುವ ಕನಕಪೂರ ಗ್ರಾಮದ ಹತ್ತಿರ ಬ್ಯಾರೇಜ್ ನಿರ್ಮಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಈಡೇರಿಸಲಾಗಿದೆ.ಮಳೆಗಾಲದಲ್ಲಿ ನದಿ ದಾಟುವುದು ತುಂಬಾ ಕಷ್ಟವಾಗುತ್ತಿತ್ತು. ಗುತ್ತಿಗೆದಾರರು ನಿಗದಿತ ಅವಧಿಯಲ್ಲಿಯೇ ಬ್ಯಾರೇಜ್ ನಿರ್ಮಿಸಿರುವುದರಿಂದ ರೈತರಿಗೆ ಅನುಕೂಲವಾಗಿದೆ.
-ಡಾ|ಅವಿನಾಶ ಜಾಧವ್, ಶಾಸಕ
-ಶಾಮರಾವ ಚಿಂಚೋಳಿ