Advertisement

Uv Fusion: ಮದುಮಗಳು

11:15 AM Nov 03, 2023 | Team Udayavani |

ಅರಿಶಿನವು ಮೈಯನ್ನು ಸೋಕಿದೂಡನೆ ನವವಧುವಿನ ಕೆನ್ನೆಯ ರಂಗನು ಇನ್ನೂ ಹೆಚ್ಚಿಸಿ ನೋಡುವ ನಯನಗಳು ಹೊಸದಾಗಿ ಏನನ್ನೋ ನೋಡಿದಂತೆ ಭಾಸವಾಯಿತು. ತೊಟ್ಟ ಸೀರೆಯ ಚೆಂದವು ಅವಳ ಮೈಮೇಲೆ ತಾನೇ ಸುರಸುಂದರಿಯಂತೆ ಮಿರಿ ಮಿರಿ ಮಿಂಚಿತು.

Advertisement

ಮುಡಿದ ಮಲ್ಲಿಗೆಯು ನನಾಗ್ಯಾರು ಸಾಟಿ ಎಂದು ಅವಳ ಕೇಶರಾಶಿಯ ತುಂಬಾ ಬಳ್ಳಿಯ ಹಾಗೆ ಬಳುಕುತಾ ಅತ್ತ ಇತ್ತ ಹೊರಳಾಡಿತು. ಅದರ ಸುವಾಸನೆಯ ಪರಿಮಳ ಎಲ್ಲೆಡೆ ಹರಡಿ ಮದುವೆ ಮನೆಯ ಸಡಗರವು ಕಣ್ತುಂಬುವಂತಿರಲು ಹಣೆಯ ಮೇಲಿನ ಕುಂಕುಮದ ಬೊಟ್ಟು ಹುಣ್ಣಿಮೆಯ ಚಂದಿರನಂತೆ ನಗುತಿರಲು ಮೂಗುತಿಯು ಫಳಫಳನೆ ಹೊಳೆಯತಿರಲು ಮದುಮಗಳ ಮೊಗದಲಿ ಮತ್ತೆ ಕಿವಿಯೋಲೆ ಸನ್ನೆ ಮಾಡಿ ಹೇಳಿತು ಈ ಸೌಂದರ್ಯದಲ್ಲಿ ನಾವು ಪಾಲುದಾರರು ನೆನಪಿರಲಿ ಎಂದು! ಕೊರಳಲ್ಲಿದ್ದ ಕಾಸಿನ ಸರವು ಹೆಮ್ಮೆಯಲಿ ಹೇಳಿತು – ಎಲ್ಲರಿಗಿಂತ ನಾನೇ ವಿಭಿನ್ನ. ಆಗ ಸೊಂಟದ ಪಟ್ಟಿ ಸಹಿತ ಇತರ ಒಡವೆಗಳು ಹೇಳಿದವು – ನಾವು ನಿನ್ನ ಹಾಗೆ ಅಲ್ಲವೇ ಅಕ್ಕ ಎಂದಿತು. ಆಗ ಮದುಮಗಳ ಉಂಗುರದ ಮೆರುಗು ಎಲ್ಲರನ್ನೂ ಅಣುಕಿಸಲು ಆರಂಭಿಸಿತು.

ಹಸಿರು ಗಾಜಿನ ಬಳೆಯ ಸೌಂದರ್ಯಕ್ಕೆ ನಾಚಿ ನೀರಾದ ಕೈಗಳಿಗೆ ಅಂದದ ಮದರಂಗಿ ಚೆಲುವಿನ ಚಿತ್ತಾರದ ಬಿಡಿಸಿ ನೋಡುವ ಕಂಗಳು ಹುಬ್ಬೇರುವ ಹಾಗೆ ಬೆರಗು ಮೂಡಿಸುತ್ತವೆ.

ಗಲ್ಲು ಗಲ್ಲು ಎನ್ನುತಾ ಕಾಲಿನ ಗೆಜ್ಜೆಯ ನಾದವು ಕೇಳುವ ಕಿವಿಗಳಲಿ ಇನಿಯನ ಬರುವಿಕೆಯ ಸಪ್ಪಳ ಕೇಳಿದೊಡನೆಯೇ ಮದುಮಗಳ ಹೃದಯದ ಬಡಿತವು ನಾಳಿನ ಘಳಿಗೆಗೆ ತನ್ನ ಮಿಡಿತವನು ತುಸು ಹೆಚ್ಚಿಸಿಕೊಂಡವು.

ರಾತ್ರಿ ಕಳೆದು ಬೆಳಗಾಗುತಲಿ ಶುಭ ಲಗ್ನದಲಿ ಮದುಮಗಳ ಕೊರಳಲಿ ಮಾಂಗಲ್ಯವನು ಮದುಮಗನು ಮೂರು ಗಂಟಿನಲಿ ಬಂಧಿಸಿರಲು ಮಾಂಗಲ್ಯ ಹೇಳಿತು – ಈ ಸೌಭಾಗ್ಯವತಿಗೆ ಇನ್ನು ಮುಂದೆ ನಾನೇ ಸೌಂದರ್ಯ. ಬಾ ಗೆಳತಿ ಬಾ … ನನ್ನ ಅಪ್ಪಿಕೋ ಎಂದು ನಲಿಯಿತು.

Advertisement

„ ರಾಧಾ ಹನುಮಂತಪ್ಪ ಟಿ.

ಹರಿಹರ, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next