ಮಂಡ್ಯ: ಮಳವಳ್ಳಿ ತಾಲೂಕಿನ ಬಿಜಿಪುರ ಗ್ರಾಮದಲ್ಲಿ ಭಾನುವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಇಟ್ಟಿಗೆ ಫ್ಯಾಕ್ಟರಿಯ ಗೋಡೆಯೊಂದು ಕುಸಿದು ವ್ಯಕ್ತಿಯೊಬ್ಬ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ಬಿಜಿಪುರ ಗ್ರಾಮದ ಲಕ್ಷ್ಮಣ (40 ವ) ಮೃತಪಟ್ಟ ವ್ಯಕ್ತಿ. ರಾಜೇಂದ್ರ ಪ್ರಸಾದ್, ಸೋಮೇಶ್, ರವಿ ಸೇರಿದಂತೆ ನಾಲ್ವರು ಗಾಯಗೊಂಡಿರುವವರು.
ಇವರೆಲ್ಲರೂ ಕೂಲಿ ಕೆಲಸಕ್ಕೆ ಹೋಗಿ ವಾಪಾಸು ಬರುವಾಗ ಮಳೆ ಬಂದ ಹಿನ್ನೆಲೆಯಲ್ಲಿ ರಸ್ತೆಯ ಪಕ್ಕದ ಇಟ್ಟಿಗೆ ಫ್ಯಾಕ್ಟರಿ ಬಳಿ ಆಶ್ರಯ ಪಡೆದಿದ್ದಾರೆ. ಸಂಜೆ ಆರಂಭವಾದ ಮಳೆ ರಾತ್ರಿಯವರೆಗೆ ಸುರಿದು ತೇವಗೊಂಡಿದ್ದ ಗೋಡೆ ಕುಸಿದು ನಾಲ್ವರ ಮೇಲೆ ಬಿದ್ದಿದೆ. ಲಕ್ಷ್ಮಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಮೇಕೆದಾಟು ಯೋಜನೆ : ಯಡಿಯೂರಪ್ಪ ಸ್ಟಾಲಿನ್ ಗೆ ಪತ್ರ ಬರೆದಿದ್ದೇ ತಪ್ಪು : ಸಿದ್ದರಾಮಯ್ಯ
ಗಾಯಾಳುಗಳಿಗೆ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಎಚ್.ಲಕ್ಷ್ಮಿನಾರಾಯಣ ಪ್ರಸಾದ್, ಹಲಗೂರು ಸಿಪಿಐ ಡಿ.ಪಿ.ಧನರಾಜ್, ಪಿಎಸ್ಐ ಕೆ.ಎಂ.ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೃತನ ಸಂಬಂಧಿಕರು ನೀಡಿರುವ ದೂರಿನ ಮೇರೆಗೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.